
ಇಂದೂ ವಿಶ್ವಾಸಮತ ಯಾಚನೆ ಮುಂದೂಡಲು ಸಲಹೆ ಇದ್ದರೆ ಕೊಡಿ!
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ವಿಶ್ವಾಸಮತ ಯಾಚನೆಯನ್ನು ಕಳೆದ ಒಂದು ವಾರದಿಂದಲೂ ಮುಂದೂಡುತ್ತ ಬಂದಿರುವ ಮೈತ್ರಿ ಪಕ್ಷಗಳ ನಾಯಕರು ಇಂದೂ ಸಹ ಯಾವುದಾದರೂ ದಾರಿ ಇದೆಯೇ ಎನ್ನುವ ಕುರಿತು ತಲೆಕೆಡಿಸಿಕೊಳ್ಳುತ್ತಿದ್ದಾರೆ.
ಬೆಳಗ್ಗೆಯಿಂದಲೂ ಸದನದತ್ತ ಆಗಮಿಸದ ನಾಯಕರು ತಾಜ್ ವೆಸ್ಟ್ ಎಂಡ್ ಹೊಟೆಲ್ ನಲ್ಲಿ ಕುಳಿತು ಹಲವಾರು ಸುತ್ತಿನ ಚರ್ಚೆ ನಡೆಸುತ್ತಿದ್ದಾರೆ. ಮಂಗಳವಾರ ಸಂಜೆ 6 ಗಂಟೆಯೊಳಗೆ ಯಾವುದೇ ಕಾರಣದಿಂದ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸುವುದಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸ್ಪೀಕರ್ ರಮೇಶ ಕುಮಾರ್ ಗೆ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲೇ ಸ್ಪೀಕರ್ ಸದನವನ್ನು ಇಂದಿಗೆ ಮುಂದೂಡಿದ್ದರು. ಆದರೆ ಇಂದೂ ಕೂಡ ವಿಶ್ವಾಸಮತ ಯಾಚನೆ ಮಾಡುವ ಮೂಡ್ ನಲ್ಲಿ ದೋಸ್ತಿ ಪಕ್ಷಗಳು ಇಲ್ಲ. ಹಾಗಾಗಿ ಮತ್ತೊಂದು ನೆಪಕ್ಕಾಗಿ ಹುಡುಕಾಡುತ್ತಿದ್ದಾರೆ.
ಸಲಹೆ ಇದ್ದರೆ ಕೊಡಿ
ಕಳೆದ ಗುರುವಾರದಿಂದಲೂ ವಿಶ್ವಾಸಮತ ಯಾಚನೆಯನ್ನು ಒಂದೊಂದು ಕಾರಣ ನೀಡಿ ಮುಂದಕ್ಕೆ ಹಾಕಲಾಗುತ್ತಿದೆ. ಹಲವಾರು ಶಾಸಕರು ಮಾತನಾಡುವವರಿದ್ದಾರೆ. ಅವರಿಗೆಲ್ಲ ಅವಕಾಶ ನೀಡಬೇಕು ಎಂದು ಹೇಳುತ್ತ ಬರಲಾಗಿತ್ತು.
ನಿನ್ನೆ ರಾತ್ರಿ, ಕೇವಲ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಯು.ಟಿಯಖಾದರ್ ಮಾತನಾಡಲಿದ್ದಾರೆ ಎಂದು ಹೇಳಿದ್ದರು. ಸಂಜೆ 4 ಗಂಟೆಯೊಳಗೆ ಇವನ್ನೆಲ್ಲ ಮುಗಿಸಿ ನಂತರ ಮುಖ್ಯಮಂತ್ರಿಗಳು ಒಂದು ಗಂಟೆ ಮಾತನಾಡಲಿದ್ದಾರೆ. 5 ಗಂಟೆಗೆ ವಿಶ್ವಾಸಮತಕ್ಕೆ ಹಾಕಿ 6 ಗಂಟೆಯೊಳಗೆ ಪ್ರಕ್ರಿಯೆ ಮುಗಿಸಲು ಸಿದ್ದರಾಮಯ್ಯ ಸಲಹೆ ನೀಡಿದ್ದರು.
ಇದಕ್ಕೆ ಒಪ್ಪಿಕೊಂಡ ಸ್ಪೀಕರ್, 6 ಗಂಟೆಯ ನಂತರ ಒಂದು ನಿಮಿಷ ಕೂಡ ನಾನು ಇರುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು.
ಆದರೆ, ಇಂದು ತನ್ನ ವರಸೆಯನ್ನು ಬದಲಾಯಿಸಿರುವ ಮಾತ್ರಿ ಪಕ್ಷಗಳು ಇಂದೂ ಕೂಡ ವಿಶ್ವಾಸಮತ ಯಾಚಿಸುವುದನ್ನು ಮುಂದೂಡಲು ಪ್ರಯತ್ನ ಆರಂಭಿಸಿದ್ದಾರೆ. ಹಾಗಾಗಿಯೇ ನಿನ್ನೆ ಹೇಳಿದಂತೆ ಚರ್ಚೆಯಲ್ಲೂ ಪಾಲ್ಗೊಳ್ಳದೆ, ಸದನಕ್ಕೂ ಬಾರದೆ ಟೈಂ ಪಾಸ್ ಮಾಡುತ್ತಿದ್ದಾರೆ.
ಇಂದೂ ವಿಶ್ವಾಸ ಮತ ಪ್ರಕ್ರಿಯೆ ಮುಂದೂಡಲು ಯಾವುದಾದರೂ ಐಡಿಯಾಗಳಿದ್ದರೆ ಮತದಾರರೂ ಮೈತ್ರಿ ಪಕ್ಷದ ನಾಯಕರಿಗೆ ಕೊಡಬಹುದು. ಸಂಜೆಯ ಹೊತ್ತಿಗೆ ಇಂತಹ ಐಡಿಯಾದೊಂದಿಗೆ ಅವರೆಲ್ಲ ಸದನಕ್ಕೆ ಬರಬಹುದು.
ಮತ್ತೆ, ಹಸಿವಾಯಿತು, ಡಯಾಬಿಟೀಸ್ ಇದೆ, ರಾತ್ರಿಯಾಯಿತು, ನಿದ್ರೆ ಬರುತ್ತಿದೆ ಎನ್ನುವ ಕಾರಣಗಳೊಂದಿಗೆ ಸದನವನ್ನು ನಾಳೆಗೆ ಮುಂದೂಡಲು ಸ್ಪೀಕರ್ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ.
ಸ್ಪೀಕರ್ ಇಂದೂ ವಚನಭ್ರಷ್ಠರಾಗುತ್ತಾರಾ ಅಥವಾ ಯಾವುದಾದರೂ ಎಕ್ಸ್ಟ್ರೀಮ್ ನಿರ್ಣಯ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ, ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಹೆಚ್ಚಿನ ಸುದ್ದಿಗಳಿಗಾಗಿ http://pragativahin.com ಕ್ಲಿಕ್ ಮಾಡಿ