ಜಯಶ್ರೀ ಜೆ.ಅಬ್ಬಿಗೇರಿ
ಬೆಳಿಗ್ಗೆ ಹಾಸಿಗೆಯಿಂದ ಎದ್ದು ಪ್ರಾತಃವಿಧಿಗಳನ್ನು ಮುಗಿಸಿ, ಮನೆ ಒಳಗೆ ಹೊರಗೆ ಕಸ ಗುಡಿಸಿ, ಅಡುಗೆ ಕೆಲಸ ಮಾಡಿ ಮುಗಿಸುವಷ್ಟರಲ್ಲಿ ಕೆಲಸಕ್ಕೆ ಹೊರಡುವ ಸಮಯವಾಗಿರುತ್ತದೆ. ಲೊಚ್ ಲೊಚ್ ಎನ್ನುತ್ತ ಗೊಣಗುತ್ತ ನಿಮಿಷಕ್ಕೊಮ್ಮೆ ಗಡಿಯಾರ ನೋಡುತ್ತ ಯಾವುದಕ್ಕೂ ಆಗಲ್ಲ ಇವರು ಅಂತ ಯಜಮಾನ್ರನ್ನ, ಮಕ್ಕಳನ್ನ ಬೈಯ್ಯುತ್ತ ಲಂಚ್ ಬಾಕ್ಸ್ ತುಂಬಿ ನಿಂತುಕೊಂಡೇ ಟಿಫನ್ ಮಾಡಿ ಏದುಸಿರು ಬಿಡುತ್ತ ಸಿಟಿ ಬಸ್ ಹತ್ತಿ ಆಫೀಸ್ ಮುಟ್ಟುವಷ್ಟರಲ್ಲಿ ಸಾಕ ಸಾಕಾಗಿರುತ್ತೆ… ಅನ್ನೋದು ಕೆಲಸ ಮಾಡುವ ಮಹಿಳೆಯರ ಉವಾಚ.
ಇನ್ನು ಪುರುಷರಿಗೆ ಮಕ್ಕಳಿಗೆ ವಯಸ್ಸಾದವ್ರಿಗೆ ಸಾಕಷ್ಟು ಸಮಯವಿದೆ ಅಂತೇನಿಲ್ಲ. ಅವ್ರದೂ ಇದೇ ಕತೆ. ಏನೇ ಹೇಳಿ ಇಂದಿನದು ಗಡಿಬಿಡಿ ಜೀವನ ಯಾವುದಕ್ಕೂ ಸಮಯವಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಮಯ ನೋಡೋಕೂ ಸಮಯವಿಲ್ಲ. ಹಾಗಂತ ಪ್ರತಿ ವ್ಯಕ್ತಿಯೂ ಉತ್ಪಾದಕ ಕೆಲಸಗಳನ್ನು ಮಾಡುತ್ತಿದ್ದಾನೆ ಅಂತ ತಿಳಿದರೆ ನಮ್ಮಂತಹ ಶತ ಮೂರ್ಖರು ಯಾರೂ ಇಲ್ಲ. ಹಾಗಾದರೆ ಇಷ್ಟೆಲ್ಲ ಬ್ಯೂಸಿ ಅಂತ ಹೇಳುತ್ತ ತಿರುಗುವವರು ಮಾಡುವುದಾದರೂ ಏನು ಅಂತ ಪ್ರಶ್ನೆ ಹಾಕಿಕೊಂಡು ಉತ್ತರ ಹುಡುಕ ಹೊರಟರೆ ತಲೆ ಗಿರ್ ಅನ್ನುತ್ತೆ. ಈ ಕೆಲಸ ಅನ್ನೋದು ಯಾಕಾದ್ರೂ ಇದೆ? ಇದನ್ನು ಕಂಡು ಹಿಡಿದವರು ಯಾರು? ಅನ್ನೋದು ಶುದ್ಧ ಸೊಂಬೇರಿಗಳ ಪ್ರಶ್ನೆ.
ಕೆಲಸ ಎಂದರೇನು?
ಏನೇ ಹೇಳಿ ಕೆಲಸ ಎಂದರೇನು? ಇದರ ಚರಿತ್ರೆ ಏನು? ಅನ್ನೋ ಪ್ರಶ್ನೆಗಳು ಅಷ್ಟು ಸುಲಭದ್ದಲ್ಲ. ಕೆಲಸ ಎಂದು ಕರೆಯುವ ಚಟುವಟಿಕೆಯ ವಿಸ್ತೃತ ಹಿನ್ನೆಲೆ ಹಾಗೂ ಇತಿಹಾಸವನ್ನು ವರ್ಕ್: ಅ ಹಿಸ್ಟರಿ ಆಫ್ ಹೌ ವಿ ಸ್ಪೆಂಡ್ ಅವರ್ ಟೈಮ್ ಎಂಬ ಪುಸ್ತಕದಲ್ಲಿ ಮಾನವ ಶಾಸ್ತ್ರದಲ್ಲಿ ಪರಿಣಿತಿ ಹೊಂದಿರುವ ಜೇಮ್ಸ್ ಸುಜ್‌ಮನ್ ದಾಖಲಿಸಿದ್ದಾರೆ. ನಾವು ನಮ್ಮ ಸಮಯವನ್ನು ಹೇಗೆ ಕಳೆಯುತ್ತೇವೆ? ವಿರಾಮವನ್ನು ಹೇಗೆ ಪಡೆಯುತ್ತೇವೆ? ಅದರ ವಿವಿಧ ಆಯಾಮಗಳ ಬಗ್ಗೆ ಮತ್ತು ಆರ್ಥಿಕತೆಯನ್ನು ಚರ್ಚಿಸುತ್ತದೆ ಈ ಪುಸ್ತಕ. ಅಷ್ಟೇ ಅಲ್ಲ ನಮ್ಮ ಮುಂದೆ ಅನೇಕ ಪ್ರಶ್ನೆಗಳನ್ನೂ ತೆರೆದಿಡುತ್ತದೆ. ಕೆಲಸದ ಉದ್ದೇಶವು ಯಾವಾಗಲೂ ಮಾನವ ಅಗತ್ಯಗಳನ್ನು ಒದಗಿಸುವುದು; ಆದಾಗ್ಯೂ, ಕಾಲಾನಂತರದಲ್ಲಿ ಇದನ್ನು ಸಾಧಿಸುವ ವಿಧಾನ ಬದಲಾಗಿದೆ. ಕೆಲಸಕ್ಕೆ ಮತ್ತು ಸಮಯಕ್ಕೆ ಅವಿನಾಭಾವ ಸಂಬಂಧವಿದೆ. ಹೀಗಾಗಿಯೇ ಎಷ್ಟು ಕೆಲಸ ಮತ್ತು ಎಷ್ಟು ಸಮಯ ಎಂಬುದನ್ನು ನಿರ್ಧರಿಸುತ್ತೇವೆ. ಕೆಲಸ ಮತ್ತು ವಿರಾಮದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳಷ್ಟು ಮುಖ್ಯ.
ಕೆಲಸದ ಪ್ರತಿ ಅಭಿಪ್ರಾಯ
ಈ ಮೌನವಾ ತಾಳೆನು ಎನ್ನುತ್ತ ಎದುರು ಸಿಕ್ಕವರ ಮುಂದೆ ತನ್ನ ಗೋಳು ತೋಡಿಕೊಳ್ಳುವವರು: ನನ್ನ ಕೆಲಸ ನನಗೆ ಇಷ್ಟ ಇಲ್ಲ. ಸುಮ್ಮನೇ ಜೀವನೋಪಾಯಕ್ಕಾಗಿ ಮಾಡ್ತಿದಿನಿ ಅನ್ನೋದು ಕೆಲವರ ಗೊಣಗಾಟ. ದಿನಾಲೂ ಮಾಡಿದ್ದನ್ನೇ ಮಾಡೋದು ಅಂದರೆ ಯಾರಿಗಾದ್ರೂ ಬೇಜಾರು ಆಗುತ್ತೆ. ಅನ್ನೋದು ಹಲವರ ಅಂಬೋಣ. ಕೆಲಸದಲ್ಲಿ ಆಸಕ್ತಿಯೇ ಇಲ್ಲ ಅಂತ ನಿರಾಸಕ್ತಿ ತೋರುವ ಗುಂಪು ಸಹ ಇದೆ. ಮುಂಜಾನೆಯಿಂದ ಸಂಜೆಯವರೆಗೆ ಯಾವುದಕ್ಕೂ ಸಮಯವಿಲ್ಲ. ಗಾಣದೆತ್ತಿನ ತರಹ ದುಡಿಯೋದು. ಮನೆಯವ್ರಿಗೆ ಸಮಯ ಕೊಡಲು ಆಗ್ತಿಲ್ಲ. ಕೆಲಸ ಮಾಡಿ ಹೈರಾಣಾಗಿ ಮನೆಗೆ ಬಂದರೆ ಅದೇನು ಅಂಥಾ ಕೆಲಸ, ಗುಡ್ಡ ಕಡೆದು ಬಂದೋರ ತರಹ ಮಾಡ್ತೀರಿ ಅಂತ ಬೈಸಿಕೊಳ್ಳುವವರ ಬಣ ಬೇರೆ. ನಾನು ಕಲಿತದ್ದೇ ಬೇರೆ ಕೆಲಸ ಮಾಡ್ತಿರೋದೇ ಬೇರೆ. ಒಂದಕ್ಕೊಂದು ಸಂಬಂಧವೇ ಇಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಿ ಬರುವುದಿಲ್ಲ. ಆಫೀಸಿನಲ್ಲಿ ರಾಜಕೀಯ ಮಾಡ್ತಾರೆ. ನನಗೆ ಈ ಕೆಲಸವೇ ಬೇಡವಾಗಿದೆ. ಅನ್ನುವ ಅಸಹನೀಯ ಮಾತುಗಳು ಕೇಳಿ ಬರುತ್ತವೆ. ಇವೆಲ್ಲ ಕೆಲಸದ ಪ್ರತಿ ಅಭಿಪ್ರಾಯಗಳು.
ಅದೃಷ್ಟ ನಮಗೆಲ್ಲಿದೆ?
ಅವರಿವರು ಹೇಳಿದ ಕೆಲಸ ಮಾಡೋದರಲ್ಲಿ ಜೀವನವೇ ಮುಗಿಯುತ್ತೇನೋ ಅಂತ ನೋವು ಪಡವವರೂ ಇದ್ದಾರೆ. ಈ ಕೆಲಸಕ್ಕೆ ನಾ ಯಾಕಾದ್ರೂ ಬಂದೆನೋ ಅಂತ ಹಳಹಳಿಸುವವರೂ ಇದ್ದಾರೆ.. ಬೇರೆಯವರ ಕೆಲಸ ನೋಡಿ ಹೊಟ್ಟಕಿಚ್ಚು ಪಡುವವರೂ ಇದ್ದಾರೆ. ಇಷ್ಟಪಟ್ಟ ಕೆಲಸ ಸಿಕ್ಕವರು ಅದೃಷ್ಟವಂತರು ಆ ಅದೃಷ್ಟ ನಮಗೆಲ್ಲಿದೆ ಅಂತ ಬೇಸರ ವ್ಯಕ್ತ ಪಡಿಸುವವರು ಇದ್ದಾರೆ. ಸಿಕ್ಕ ಕೆಲಸದಲ್ಲಿ ತೃಪ್ತಿ ಪಟ್ಟುಕೊಳ್ಳುವ ಅನಿವಾರ್ಯತೆ ಕೆಲವರದು ಕೆಲವೇ ಕೆಲವರಲ್ಲಿ ತಮ್ಮ ಕೆಲಸದ ಪ್ರತಿ ತೃಪ್ತಿ ಇರುವುದನ್ನು ಕಾಣುತ್ತೇವೆ. ಇದಕ್ಕೆಲ್ಲ ಕಾರಣ ಕೆಲಸ ಹಿಡಿಸುವುದಿಲ್ಲ ಅನ್ನುವುದು ಒಂದು ಕಾರಣವಾದರೆ, ಬಯಸಿದ್ದೇ ಬೇರೆ ಕೆಲಸ ಸಿಕ್ಕಿದ್ದೇ ಬೇರೆ ಅನ್ನೋದು ಮತ್ತೊಂದು ಕಾರಣ.
ಕೆಲಸ ಬದಲಿಸುವುದು
ಹಿಂದೆಲ್ಲ ಕೆಲಸದಲ್ಲಿ ಸೇರಿದಾಗಿಂದ ನಿವೃತ್ತಿಯಾಗುವ ತನಕ ಅದೇ ಕೆಲಸ ಮಾಡುವುದು ಸಾಮಾನ್ಯವಾಗಿತ್ತು. ಆದರೀಗ ಹಾಗಿಲ್ಲ. ಆಗೆಲ್ಲ ಕೆಲಸವನ್ನು ಬಿಡುವುದು ಕುಟುಂಬದ ನಿರ್ಧಾರವಾಗಿತ್ತು. ಆದರೀಗ ಕಾಲ ಬದಲಾಗಿದೆ. ಕೆಲಸ ಬದಲಿಸುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಹಿಂದಿನಂತೆ ಒಂದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದರೆ ಆ ವ್ಯಕ್ತಿಯನ್ನು ಸಂಶಯ ದೃಷ್ಟಿಯಿಂದ ನೋಡಲಾಗುತ್ತದೆ. ಕೆಲಸ ಬದಲಿಸದಿರುವವರನ್ನು ಸುರಕ್ಷಿತ ವಲಯದಲ್ಲಿ ಇರುವವನೆಂದು ಡೈನಾಮಿಕ್ ಅಲ್ಲವೆಂದು ಹಣೆಪಟ್ಟಿ ಕಟ್ಟಲಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಕೆಲಸ ಬದಲಾಯಿಸಬೇಕೆಂದಲ್ಲ. ವೃತ್ತಿಗೆ ತಕ್ಕಂತೆ ಅಪ್ಡೇಟ್ ಆಗುತ್ತಿರಬೇಕು. ಯಾವಾಗ ಕೆಲಸವನ್ನು ಬಿಡಬೇಕೆನ್ನುವ ಪ್ರಶ್ನೆ ವ್ಯಕ್ತಿಗೆ ಬಿಟ್ಟಿದ್ದಾದರೂ ಬೇರೆ ಕಡೆ ಕೆಲಸ ಸಿಗುತ್ತೆನ್ನುವ ಭರವಸೆಯಿಂದ ಮೊದಲೇ ಕೆಲಸ ಬಿಡುವುದು ಒಳ್ಳೆಯದಲ್ಲ. ಕೈಯಲ್ಲಿರುವ ಕೆಲಸ ಮಾಡುತ್ತಲೇ ಬೇರೆ ಕೆಲಸ ಹುಡುಕುವುದರಿಂದ ಆರ್ಥಿಕ ಸಮಸ್ಯೆಗೆ ಸಿಲುಕಿಹಾಕಿಕೊಳ್ಳುವುದಿಲ್ಲ. ಅವಸರದಲ್ಲಿ ಕೆಲಸ ಬದಲಿಸಿದರೆ ಬೆಂಕಿಯಿಂದ ಬಾಣಲೆಗೆ ಬಿದ್ದಂತಹ ಆವಸ್ಥೆ ಅನುಭವಿಸಬೇಕಾಗುವುದು.
ಅನಿವಾರ್ಯ
ಕೆಲಸವನ್ನು ಯಾವಾಗ ಬಿಡಬೇಕು ಮತ್ತು ಇನ್ನೊಂದು ಕೆಲಸವನ್ನು ಯಾವಾಗ ಹುಡುಕುವುದು ಅನಿವಾರ್ಯ: ಕೆಲಸದ ಭದ್ರತೆಯಿಲ್ಲವೆಂದೆನಿಸಿದಾಗ, ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕನ್ನು ಸಮತೋಲನಗೊಳಿಸಲು ಆಗುತ್ತಿಲ್ಲ, ವೇತನದ ಹೆಚ್ಚಳ ಇಲ್ಲದಿರುವಾಗ, ನನ್ನಷ್ಟೇ ಕಲಿತವರು ಮುಂದಿದ್ದಾರೆ ಆದರೆ ನನಗೆ ಹೆಚ್ಚೇನು ಪ್ರಗತಿ ಸಾಧಿಸಲು ಆಗುತ್ತಿಲ್ಲ ಎಂದಾಗ, ನನ್ನ ಸಾಮರ್ಥ್ಯಕ್ಕೆ ಸಮನಾದುದಲ್ಲ ಎಂದೆನಿಸಿದಾಗ, ಕೆಲಸ ಮಾಡಲು ಉತ್ತಮ ವಾತಾವರಣವಿಲ್ಲ, ಕೆಲಸಕ್ಕೆ ಹೋಗಲು ಹಿಂಸೆ ಎನ್ನಿಸಿದರೆ, ಕೆಲಸಕ್ಕೆ ಸರಿಯಾದ ವೇತನ ಸಿಗುತ್ತಿಲ್ಲ ಹೊಸ ಚಿಂತನೆಗೆ ಅವಕಾಶ ಇಲ್ಲದಿರುವಾಗ, ಅದೇ ಕೆಲಸ ಅದೇ ಜಾಗವೆಂಬ ಬೇಸರ ಮೂಡಿದಾಗ, ಬಾಳ ಸಂಗಾತಿ ಕೆಲಸ ಬದಲಿಸಿದ ಕಾರಣ ಕುಟುಂಬದ ಜೊತೆಗಿರಲು, ಕೆಲಸ ತೃಪ್ತಿ ನೀಡುತ್ತಿಲ್ಲ. ಹೀಗೆ ಹತ್ತು ಹಲವು ಅನಿವಾರ್ಯತೆಗಳಿವೆ.
ಆದಾಗ್ಯೂ ಅಗತ್ಯವಿರುವ ಎಲ್ಲವನ್ನೂ ಲೆಕ್ಕ ಹಾಕಿ ಮುಂದೆ ಹೆಜ್ಜೆಯಿಡುವುದು ಒಳ್ಳೆಯದು. ಏನೇ ಹೇಳಿ ಕೆಲಸದ ಪ್ರತಿ ಪ್ರೀತಿ ಇರದಿದ್ದರೆ ಜೀವನ ಅಕ್ಷರಶಃ ನರಕ ಅನಿಸಿಬಿಡುತ್ತದೆ ಆದ್ದರಿದ ಮಾಡುವ ಕೆಲಸವನ್ನು ಪ್ರೀತಿಸಬೇಕು. ಇಲ್ಲವೇ ಪ್ರೀತಿಸುವ ಕೆಲಸವನ್ನು ಮಾಡಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ