
ಪ್ರಗತಿವಾಹಿನಿ ಸುದ್ದಿ, ಶಿರಸಿ: ಸಮಾಜದಲ್ಲಿ ನಕಾರಾತ್ಮಕತೆ ಹೋಗಲಾಡಿಸಿ, ಸಕಾರಾತ್ಮಕ ವಾತಾವರಣ ನಿರ್ಮಿಸಲು ಪತ್ರಕರ್ತರ ಪಾತ್ರ ಮಹತ್ವದ್ದಿದೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಶಿರಸಿ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ ‘ಮಾಧ್ಯಮಶ್ರೀ ಪ್ರಶಸ್ತಿ’ಯನ್ನು ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಯ ಹಿರಿಯ ವರದಿಗಾರ ವಿರೂಪಾಕ್ಷ ಹೆಗಡೆ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ಪತ್ರಕರ್ತರನ್ನು ಸಮಾಜ ಸದಾ ಗಮನಿಸುತ್ತಿರುತ್ತದೆ. ಹೀಗಾಗಿ ಪತ್ರಕರ್ತರು ಮಾದರಿಯಾಗಿ ಇರಬೇಕಾಗುತ್ತದೆ ಎಂದರು.
ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳಲು ಪತ್ರಿಕೋದ್ಯಮ ಉತ್ತಮ ವೇದಿಕೆ. ದೂರದೃಷ್ಟಿ ಹೊಂದಿರುವ ಪತ್ರಕರ್ತರು ಸಮಾಜದ ಆಸ್ತಿ ಎಂದರು.
ಶಿರಸಿ, ಉತ್ತರ ಕನ್ನಡ ಪತ್ರಕರ್ತರ ಉತ್ಪಾದನಾ ಕೇಂದ್ರದಂತೆ. ಇಲ್ಲಿನ ಪತ್ರಕರ್ತರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ ಎಂದು ಹೇಳಿದರು.
ಸತ್ಯ, ವಸ್ತುನಿಷ್ಠ, ಸಕಾಲಿಕವಾಗಿ ವಿಷಯಗಳನ್ನು ಸಮಾಜದ ಎದುರು ತೆರೆದಿಡುವವರು ಯಶಸ್ವಿ ಪತ್ರಕರ್ತರಾಗುತ್ತಾರೆ. ಪತ್ರಿಕೋದ್ಯಮ ನಂಬಿಕೆಯನ್ನು ಬಲಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ಪತ್ರಿಕೋದ್ಯಮ ಸಂವಿಧಾನದ ನಾಲ್ಕನೆಯ ಅಂಗವಾಗಿದೆ. ಸಮಾಜದಲ್ಲಿ ಮೌಲ್ಯಗಳು, ನಂಬಿಕೆಯ ಅಧಃಪತನ ನಡೆಯುವುದನ್ನು ತಡೆಯಬೇಕು ಎಂದರು.
ರಾಜಕೀಯ ಕ್ಷೇತ್ರಕ್ಕೆ ಮಾಧ್ಯಮಗಳು ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಹೀಗಾಗಿ ರಾಜಕಾರಣಿಗಳ ಮೌಲ್ಯದ ಅಧಃಪತನ ಬೆಳಕಿಗೆ ಬರುತ್ತಿದೆ. ಇದೇ ಸ್ಥಿತಿ ಎಲ್ಲ ಕ್ಷೇತ್ರಗಳಲ್ಲೂ ಇದೆ. ಆ ಬಗ್ಗೆ ಹೆಚ್ಚು ಪ್ರಚಾರ ಸಿಗದ ಕಾರಣ ಅದು ಹೊರಗೆ ಕಾಣುತ್ತಿಲ್ಲ ಎಂದರು.
ಒಳ್ಳೆಯ ಚಿಂತನೆಗಳು ಬೆಳೆಯಬೇಕೆಂದರೆ ಮಾಧ್ಯಮ ಕ್ಷೇತ್ರ ಪ್ರಭಾವಿಯಾಗಿ ಕೆಲಸ ನಿರ್ವಹಿಸಲಿ ಎಂದರು.
ಉತ್ಸಾಹದಿಂದ ತಾಲೂಕು ಪತ್ರಕರ್ತರ ಸಂಘ ಚಟುವಟಿಕೆ ನಡೆಸುತ್ತಿದೆ. ಸಜ್ಜನ ಪತ್ರಕರ್ತರಾಗಿರುವ ವಿರೂಪಾಕ್ಷ ಹೆಗಡೆ ಅನೇಕ ಯುವ ಪತ್ರಕರ್ತರಿಗೆ ಮಾರ್ಗದರ್ಶಿಯಾಗಿದ್ದಾರೆ ಎಂದರು.
ಇಂದು ಒಳಹೊಕ್ಕು ನೋಡಿದರೆ ಯಾವ ಕ್ಷೇತ್ರ ಸರಿ ಇದೆ ಹೇಳಿ. ರಾಜಕೀಯ ಕ್ಷೇತ್ರ, ಕಾರ್ಯಾಂಗ, ಪತ್ರಿಕಾ ರಂಗ ಎಲ್ಲವೂ ಹಾಗೇ ಆಗಿದೆ. ನ್ಯಾಯಾಂಗದ ಬಗೆಗೂ ಮಾತನಾಡುವ ಸ್ಥಿತಿ ಇಲ್ಲ ಎಂದು ಕಾಗೇರಿ ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ವಿರೂಪಾಕ್ಷ ಹೆಗಡೆ ತಮ್ಮ ಪತ್ರಿಕೋದ್ಯಮ ಜೀವನದ ಅನುಭವ ಹಂಚಿಕೊಂಡರು.
ಕೆ.ಎಂ.ಎಫ್.ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಹಣದ ಹಿಂದೆ ಬೀಳದೆ ಸಮಾಧಾನಕ್ಕಾಗಿ ಕೆಲಸ ಮಾಡುವ ಪತ್ರಕರ್ತರು ನಮ್ಮ ನಡುವೆ ಇದ್ದಾರೆ ಎಂಬುದೆ ಹೆಮ್ಮೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್, ಪತ್ರಿಕೋದ್ಯಮ ಕ್ಷೇತ್ರಕ್ಕೆ ಉತ್ತರ ಕನ್ನಡದ ಕೊಡುಗೆ ದೊಡ್ಡದಿದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಸಮಸ್ಯೆಗಳ ಪರಿಹಾರದಲ್ಲಿ ಪತ್ರಕರ್ತರ ಪಾತ್ರವೂ ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿರಸಿ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಸಂತೋಷಕುಮಾರ್, ಕೋವಿಡ್ ನಡುವೆಯೂ ಸಂಘಟನೆ ಬಲಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್ ಇದ್ದರು.
ಆಶಾ ಕೆರೆಗದ್ದೆ ಪ್ರಾರ್ಥಿಸಿದರು. ಕೃಷ್ಣಮೂರ್ತಿ ಕೆರೆಗದ್ದೆ ಸ್ವಾಗತಿಸಿದರು.ಗುರು ಅಡಿ ಪ್ರಶಸ್ತಿ ಪತ್ರ ವಾಚಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಕಾರ್ಯಕ್ರಮ ನಿರೂಪಣೆ ಮಾಡಿದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂದೇಶ ಭಟ್ ಬೆಳಖಂಡ ವಂದನಾರ್ಪಣೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ