IGP ವಿಕಾಸ ಕುಮಾರ ಅಧಿಕಾರ ಸ್ವೀಕಾರ : ಜನಸ್ನೇಹಿ ಪೊಲೀಸ್ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉತ್ತರ ವಲಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಬೆಳಗಾವಿ ಉತ್ತರ ವಲಯದ ನೂತನ ಐಜಿಪಿ ವಿಕಾಸ್ ಕುಮಾರ ಹೇಳಿದರು.
ಬೆಳಗಾವಿಯಲ್ಲಿ ಬುಧವಾರ ಐಜಿಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಉತ್ತರ ವಲಯಕ್ಕೆ ಐದು ಜಿಲ್ಲೆಗಳು ಬರುತ್ತವೆ. ಎಲ್ಲ ಪೊಲೀಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆ ಜೊತೆಗೆ ಜನಸ್ನೇಹಿ ಪೊಲೀಸ್ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕಳೆದ ಹತ್ತು ವರ್ಷಗಳ ಹಿಂದೆ ಪೊಲೀಸರನ್ನು ಕಂಡರೆ ಜನ ಭಯ ಪಡುತ್ತಿದ್ದರು. ಆದರೆ ಈಗ ಸಂಪೂರ್ಣ ಬದಲಾಗಿದೆ. ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ಕೊಡುತ್ತಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ನೇತೃತ್ವದಲ್ಲಿ ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮ ನನ್ನ ಗಮನಕ್ಕೆ ಇದೆ. ಇದೇ ಮಾದರಿಯಲ್ಲಿ ಉಳಿದ ನಾಲ್ಕು ಜಿಲ್ಲೆಯಲ್ಲಿಯೂ ಸಹ ಫೋನ್ ಇನ್ ಕಾರ್ಯಕ್ರಮ ಮಾಡಲು ಎಸ್ಪಿಗಳಿಗೆ ತಿಳಿಸುತ್ತೇನೆ ಎಂದರು.
ವಿಜಯಪುರದಲ್ಲಿ ಕಂಟ್ರಿ ಪಿಸ್ತೂಲ್ ಕಡಿಮೆ ದರಲ್ಲಿ ಮಾರಾಟ ಮಾಡುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ತಾನೇ ನಾನು ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಕಂಟ್ರಿ ಪಿಸ್ತೂಲ್ ಮಾರಾಟ ಮಾಡುವುದು ಗಂಭೀರ ವಿಷಯ. ಈ ಕುರಿತು ವಿಶೇಷ ಗಮನ ಹರಿಸಿ ಹತೋಟಿಗೆ ತರಲಾಗುವುದು ಎಂದರು.
ಬೆಳಗಾವಿ ಜಿಲ್ಲೆ ನನಗೆ ಹೊಸದಲ್ಲ. ಕಳೆದ 2005ರಲ್ಲಿ ನಾನು ಪ್ರೊಬೆಷನರಿ ಆಗಿ 8 ತಿಂಗಳುಗಳ ಕಾಲ ಕೆಲಸ ಮಾಡಿದ್ದೇನೆ. ಆ ಸಮಯದಲ್ಲಿ ಜಿಲ್ಲೆಯ ಜನರು ಹಾಗೂ ಅಧಿಕಾರಿಗಳು ನೀಡಿದ ಸಹಕಾರ ಮತ್ತು ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಪ್ರೀತಿಯಿಂದಲೇ ಇಂದು ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ