ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ: ತಾಲೂಕ ಮಟ್ಟದ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಕ್ಕಳಲ್ಲಿ ಜಂತುಹುಳುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಅಲ್ಬೆಂಡಜೋಲ್ ಮಾತ್ರೆಯ ಮಹತ್ವದ ಬಗ್ಗೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಸಾವಿತ್ರಿ ಬೆಂಡಿಗೇರಿ ಅವರು ಮಾಹಿತಿ ನೀಡಿದರು.
ತಾಲೂಕಾ ಮಟ್ಟದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಅಶೋಕ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟಂಬರ್ ೨೫ ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಜಂತುಹುಳುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿ ೧ ರಿಂದ ೬ ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಮಾತ್ರೆ ನೀಡಲು ಸಲಹೆ ನಿಡಿದರು.
ಖಾನಾಪೂರ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ ಸಂಜೀವ ನಾಂದ್ರೆ ಅವರು ಮಾತನಾಡಿ, ಖಾನಾಪೂರ ತಾಲೂಕಿನಲ್ಲಿ ೧ ರಿಂದ ೧೯ ವರ್ಷದ ಒಟ್ಟು ೬೮೦೬೨ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಗಳನ್ನು ನೀಡುವ ಗುರಿ ಹೊಂದಲಾಗಿದೆ. ೧ ರಿಂದ ೬ ವರ್ಷದ ಮಕ್ಕಳಿಗೆ ಅಂಗನವಾಡಿಗಳ ಮೂಲಕ ಹಾಗೂ ೬ ರಿಂದ ೧೯ ವರ್ಷದ ಮಕ್ಕಳಿಗೆ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲಾ ಕಾಲೇಜು ಹಾಗೂ ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳಲ್ಲಿ ಅಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಮತ್ತು ಈ ದಿನ ಗೈರು ಹಾಜರಾದ ಮಕ್ಕಳಿಗೆ ಸೆಪ್ಟಂಬರ್ ೩೦ ರಂದು ಮಾಪ್ ಆಪ್ ಡೆ ದಿನ ಅಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಸಾವಿತ್ರಿ ಬೆಂಡಿಗೇರಿ ಮತ್ತು ತಾಲೂಕಾ ನ್ಯೂಡೆಲ್ ಅದಿಕಾರಿಗಳು, ಖಾನಾಪುರ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಸಂಜೀವ ನಾಂದ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಾದ ಡಾ. ರಮೇಶ ಪಾಟೀಲ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ವೈದ್ಯಾಧಿಕಾರಿಗಳಾದ ಡಾ ಶಿವಾನಂದ ಕಿಣಗಿ, ಶಾಲಾ ಮುಖ್ಯೋಪಾದ್ಯಾರಾದ ಆಯ್.ಬಿ. ವಸ್ತ್ರದ, ಶಾಲಾ ಸಿಬ್ಬಂದಿ ವರ್ಗ, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಾಲಾ ಎಸ್.ಡಿ,ಎಮ್. ಸಿ ಸದಸ್ಯರು, ಆಶಾ ಕಾರ್ಯಕರ್ತರು ಹಾಜರಿದ್ದರು.
ಕಾರ್ಯಕ್ರಮವನ್ನು ಅಶೊಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕರಾದ ಸುಶೀಲ ಮಠಪತಿ ನಿರೊಪಿಸಿದರು.
ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನ ವಶ
ಮಹಾರಾಷ್ಟ್ರ ರಾಜ್ಯದ ಸಾರ್ವತ್ರಿಕ ವಿಧಾನ ಸಭಾ ಚುನಾವಣಾ ನಿಮಿತ್ಯ ಸೆಪ್ಟಂಬರ್ ೨೫ ರಂದು ಗೋವಾಯಿಂದ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಂಜೆ ೭ ಗಂಟೆಯ ಸಮಯದಲ್ಲಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-೪ ರಲ್ಲಿ ಗೋವಾವೆಸ್ ಹೊಟೇಲ್ ಎದುರುಗಡೆ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಲಾಗಿ ಆರೋಪಿತನಾದ ಸಿಂಧದುರ್ಗ ಕುಡಲ್ ಜಿಲ್ಲೆಯ ಸಾವಂತವಾಡಿ ತಾಲೂಕಿನ ಕೊಳೆಗಾಂವ ಗ್ರಾಮದ ವಿಶಾಲ ಜಯವಂತ ಕುಡತರಕರ (೨೬) ಅಕ್ರಮವಾಗಿ ಎಂಹೆಚ್-೦೭ ಪಿ-೧೬೮೮ ಟಾಟಾ ಜೆನಾನ್ ಪಿಕ್‌ಅಪ್ ೩.೦ ಎಲ್‌ಟರ್ಬೋ ವಾಹನದಲ್ಲಿ ವಿವಿಧ ನಮೂನೆಯ ವಿಸ್ಕಿ ಬಾಟಲಿಗಳನ್ನು ಹೊಂದಿದ ಒಟ್ಟು ೩೦೦ ಲೀಟರ್ ಮದ್ಯವನ್ನು ಅಕ್ರಮವಾಗಿ ಗೋವಾಯಿಂದ ಸಾಗಾಣಿಕೆ ಮಾಡುತ್ತಿರುವಾಗ ಅಬಕಾರಿ ಅಧಿಕಾರಿಗಳು ರೂ.೩,೪೯,೧೧೦ ಗಳು ಮದ್ಯವನ್ನು ಹಾಗೂ ರೂ.೩,೦೦,೦೦೦ ಗಳ ವಾಹನವನ್ನು ಜಪ್ತಿಮಾಡಲಾಗಿದೆ.
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಡಾ. ವೈ ಮಂಜುನಾಥ ಹಾಗೂ ಅಬಕಾರಿ ಉಪ ಆಯುಕ್ತರಾದ ಅರುಣಕುಮಾರ. ಕೆ, ಅವರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರಾದ ವಿಜಯಕುಮಾರ ಜೆ. ಹಿರೇಮಠ ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಬಸವರಾಜ ಕರಮಣ್ಣನವರ ಹಾಗೂ ಹುಕ್ಕೇರಿ ವಲಯದ ಅಬಕಾರಿ ನಿರೀಕ್ಷಕರಾದ ಸತೀಶ ಕಾಗಲೆ, ಚಿಕ್ಕೋಡಿ ವಲಯದ ಅಬಕಾರಿ ಉಪ ನಿರೀಕ್ಷಕರಾದ ಪ್ರವೀಣ ರಂಗಸುಭೆ, ಉಪ ವಿಭಾಗದ ಸಿಬ್ಬಂದಿ ಹಸನಸಾಬ ನದಾಫ, ಮಹಾಬಲ ಉಗಾರ ಅಬಕಾರಿ ರಕ್ಷಕರೊಂದಿಗೆ ದಾಳಿಯಲ್ಲಿ ಪಾಲ್ಗೊಂಡಿದ್ದರು.
ದಸರಾ ನಿಮಿತ್ತ ಯಲ್ಲಮ್ಮಾದೇವಿ ಜಾತ್ರೆಗೆ: ಹೆಚ್ಚಿನ ಬಸ್ ವ್ಯವಸ್ಥೆ
ದಸರಾ ನಿಮಿತ್ಯ ಯಲ್ಲಮ್ಮಾದೇವಿ ಜಾತ್ರೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಸೆಪ್ಟಂಬರ್ ೨೭ ರಿಂದ ಅಕ್ಟೊಂಬರ್ ೮ ರವರಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಯಲ್ಲಮ್ಮಾಗುಡ್ಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಕಾರ್ಯಾಚರಣೆಗೊಳಿಸಲು ವ್ಯವಸ್ಥೆ ಮಾಡಲಾಗಿದ್ದು ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಾ.ಕ.ರ.ಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ
ಕೊಟ್ಪಾ ೨೦೦೩ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಮಾಡುವಲ್ಲಿ ಎಲ್ಲಾ ಇಲಾಖೆಗಳ ಪಾತ್ರ ಮಹತ್ವದಾಗಿದ್ದು, ಕಾರ್ಯಕ್ರಮದ ಅನುಷ್ಠಾನಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳಾದ ಡಾ. ಎಸ್.ವಿ ಮುನ್ಯಾಳ ಅವರು ಹೇಳಿದರು.
ಸೆಪ್ಟಂಬರ್ ೨೫ ರಂದು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಬ್ಲೂಂಬರ್ಗ ಇನಿಷಿಯೆಟಿವ್ ಯೋಜನೆ ಅಡಿಯಲ್ಲಿ ಮಹಾನಗರ ಪಾಲಿಕೆಯ ಹಿರಿಯ, ಕಿರಿಯ ಆರೋಗ್ಯ ನೀರೀಕ್ಷಕರುಗಳಿಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಹಾಗೂ ಕೊಟ್ಪಾ ೨೦೦೩ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್.ಕೆ ಹೆಚ್ ಅವರು ಮಾತನಾಡಿ, ಕೊಟ್ಪಾ ೨೦೦೩ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯ ಪಾತ್ರ ಮಹತ್ವದಾಗಿದ್ದು, ಕಾನೂನು ಉಲ್ಲಂಘನೆ ಮಾಡುವವರ ವಿರುದ್ದ ನಿರ್ದಾಕ್ಷಣ್ಯ ಕ್ರಮವಹಿಸಿ ತಂಬಾಕು ಮುಕ್ತ ಬೆಳಗಾವಿ ನಗರವನ್ನಾಗಿಸಬೇಕೆಂದು ಕರೆ ನೀಡಿದರು.
ಯುವಪೀಳಿಗೆಯು ತಂಬಾಕು ಸೇವನೆಗೆ ಬಲಿಯಾಗದಂತೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಹೇಳಿದರು.
ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಬಿ ಎನ್ ತುಕ್ಕಾರ ಅವರು ಮಾತನಾಡಿ ಕಾರ್ಯಗಾರದ ಮಹತ್ವವನ್ನು ತಿಳಿಸಿದರು. ಕಾರ್ಯಗಾರದಲ್ಲಿ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳಾದ ಡಾ. ಶಶಿಧರ ನಾಡಗೌಡ, ಅವರು ಮಾತನಾಡಿ ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಠಾನ ಮಾಡುವಲ್ಲಿ ಮಹಾನಗರ ಪಾಲಿಕೆಯ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಗಾರರ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕರಾದ ಮಹಾಂತೇಶ್ ಉಳ್ಳಾಗಡ್ಡಿ ಅವರು ಕೊಟ್ಪಾ ೨೦೦೩ರ ಕಾಯ್ದೆಯ ನಿಯಮಗಳ ಕುರಿತು ಅರಿವು ಮೂಡಿಸಿದರು. ಹಾಗೂ ದಂತ ವೈದ್ಯರಾದ ಡಾ. ದೀಪಾ ಮಗದುಮ್ ರವರು ತಂಬಾಕು ಸೇವನೆಂಯಿಂದಾಗುವ ದುಷ್ಪರಿಣಾಗಳ ಕುರಿತು ಅರಿವು ಮೂಡಿಸಿದರು.
ಕಾರ್ಯಗಾರದಲ್ಲಿ ಹಿರಿಯ, ಕಿರಿಯ ಆರೋಗ್ಯ ನಿರೀಕ್ಷಕರುಗಳು ಹಾಗೂ ಪರಿಸರ ಅಭಿಯಂತರರು ಹಾಜರಿದ್ದರು. ಸಮಾಜ ಕಾರ್ಯಕರ್ತರಾದ ಕವಿತಾ ರಾಜನ್ನವರ ನಿರೂಪಿಸಿದರು ಹಾಗೂ ಡಾ. ಶ್ವೇತಾ ಪಾಟೀಲ ಸ್ವಾಗತಿಸಿದರು. ಆಪ್ತ ಸಮಾಲೋಚಕರಾದ ಆಶಾ ಹಿರೇಮಠ ಅವರು ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ