
ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ನಡೆದಿದೆ.
ಬಂಧಿತನನ್ನು ಅಬ್ದುಲ್ಲಾ (40) ಎಂದು ಗುರುತಿಸಲಾಗಿದೆ. ಅಕ್ರಮವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ನಿಲ್ಲಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು ಹೊಡೆದಿದ್ದಾರೆ
ಅಕ್ರಮವಾಗಿ ಗೋವು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಪುತ್ತೂರಿನ ಈಶ್ವರಮಂಗಲದ ಬೆಳ್ಳಿಚಡವಿನ ಬಳಿ ವಾಹನವನ್ನು ಅಡ್ಡಗಟ್ಟಲು ಮುಂದಾಗಿದ್ದಾರೆ.
ಈಚರ್ ವಾಹನದಲ್ಲಿ 10 ಜಾನುವಾರಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು ಅಬ್ದುಲ್ಲಾ ವಾಹನವನ್ನು ಚಾಲನೆ ಮಾಡುತ್ತಿದ್ದನು. ವಾಹನದಲ್ಲಿ ಮತ್ತೊಬ್ಬ ಆರೋಪಿ ಇದ್ದ. ಈ ವೇಳೆ ಅನುಮಾನಗೊಂಡ ಪೊಲೀಸರು ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
ವಾಹನ ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದೆ ಪರಾರಿಯಾಗಿದ್ದಾನೆ, ಇದರಿಂದ ಪೊಲೀಸರು ಸುಮಾರು 10 ಕಿಲೋಮೀಟರ್‌ಗಳವರೆಗೆ ಈಚರ್ ವಾಹನವನ್ನು ಬೆನ್ನಟ್ಟಿದ್ದಾರೆ. ಇದನ್ನು ಗಮನಿಸಿದ ಆರೋಪಿ ಅಬ್ದುಲ್ಲಾ ಪೊಲೀಸ್ ಜೀಪಿಗೆ ಹಿಂಬದಿಯಿಂದ ವಾಹನವನ್ನು ಡಿಕ್ಕಿ ಹೊಡೆದಿದ್ದಾನೆ.
ಅಲ್ಲದೇ ಪೊಲೀಸರನ್ನೇ ಕೊಲೆ ಮಾಡಲು ಯತ್ನಿಸಿದ್ದಾನೆ, ಈ ವೇಳೆ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ ಜಂಭೂರಾಜ್ ಮಹರಾಜ್ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಇದರಲ್ಲಿ ಒಂದು ಗುಂಡು ವಾಹನವನ್ನು ತಾಗಿದ್ದು, ಮತ್ತೊಂದು ಗುಂಡು ಆರೋಪಿಯ ಕಾಲಿಗೆ ತಗುಲಿದೆ.
ಘಟನೆಯ ನಂತರ ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಗಾಯಾಳನ್ನು ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.