*ಗದ್ದೆಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ಕಾಡಾನೆ ಸಾವು*: *ಜಮೀನು ಮಾಲೀಕ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಳೆ ಉಳಿಸಿಕೊಳ್ಳಲು ಜಮೀನಿನಲ್ಲಿ ಅಕ್ರಮವಾಗಿ ಎಳೆದಿದ್ದ ವಿದ್ಯುತ್ ತಂತಿ ಕಾಡಾನೆಯೊಂದರ ಜೀವವನ್ನೇ ಬಲಿ ಪಡೆದಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ 13 ವರ್ಷದ ಕಾಡಾನೆ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದೆ. ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಅಕ್ರಮವಾಗಿ ವಿದ್ಯುತ್ ಹರಿಸಿದ್ದೇ ಈ ದುರಂತಕ್ಕೆ ಕಾರಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಜಮೀನಿನ ಮಾಲೀಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಾಡಿನಿಂದ ಆಹಾರ ಅರಸಿ ಬಂದಿದ್ದ ಆನೆ, ಫಸಲಿಗೆ ಬಂದಿದ್ದ ಗದ್ದೆಯತ್ತ ತೆರಳಿತ್ತು. ಈ ವೇಳೆ ಬೆಳೆ ರಕ್ಷಣೆಗಾಗಿ ಜಮೀನಿನಲ್ಲಿ ಎಳೆದಿದ್ದ ವಿದ್ಯುತ್ ತಂತಿಯನ್ನು ತುಳಿದಿದೆ. ವಿದ್ಯುತ್ ಪ್ರವಹಿಸಿ ಆನೆ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪದ ಈಚಲವಾಡಿ ಗ್ರಾಮದಲ್ಲಿ ನಡೆದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮೀನಿನ ಮಾಲೀಕ ಸಯ್ಯದ್ ಅಲಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಧಿಕಾರಿಗಳ ವಿಚಾರಣೆ ವೇಳೆ ತಾನೇ ವಿದ್ಯುತ್ ತಂತಿ ಎಳೆದಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಮುಂದುವರಿದಿದೆ.




