ಮುಳುಗಿರುವ ಬೆಳೆಗೆ ತಕ್ಷಣ ತಾತ್ಕಾಲಿಕ ಪರಿಹಾರ: ನಿರ್ಮಲಾ ಸೀತಾರಾಮನ್ ಭರವಸೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ, ಬಾಗಲಕೋಟೆ ಸೇರಿದಂತೆ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಮುಳುಗಿರುವ ಬೆಳೆಗೆ ತಕ್ಷಣವೇ ತಾತ್ಕಾಲಿಕ ಪರಿಹಾರವನ್ನು ನೀಡುವಂತೆ ವಿಮಾ ಕಂಪೆನಿಗಳಿಗೆ ಸೂಚನೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಶನಿವಾರ ಭೇಟಿ ಹಾಗೂ ವೈಮಾನಿಕ ಸಮೀಕ್ಷೆ ಬಳಿಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಬೆಳೆವಿಮೆ ಕಂಪನಿಗಳು ಪ್ರವಾಹ ಬಾಧಿತ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿ, ಮುಳುಗಡೆಯಾಗಿರುವ ಬೆಳೆಯ ಸಮೀಕ್ಷೆಗೆ ಮುಂದಾಗದೇ ತಕ್ಷಣವೇ ತಾತ್ಕಾಲಿಕವಾಗಿ ಪರಿಹಾರ ನೀಡಬೇಕು.
ಸಮೀಕ್ಷೆ ಹಾಗೂ ಹೆಚ್ಚಿನ ಪರಿಹಾರದ ಬಗ್ಗೆ ನಂತರ ನಿರ್ಧರಿಸಬೇಕು ಎಂದು ಸೂಚನೆ ನೀಡಲಾಗುವುದು ಎಂದರು.
ಬೆಳೆವಿಮೆ ಅವಧಿ ವಿಸ್ತರಣೆ:
ಬೆಳೆವಿಮೆ ಕಂತು ಪಾವತಿಸುವ ಅವಧಿಯನ್ನು ವಿಸ್ತರಿಸುವ ಅಗತ್ಯತೆ ತಮಗೆ ಮನವರಿಕೆಯಾಗಿದೆ. ಆದ್ದರಿಂದ ಬೆಳೆವಿಮೆ ಕಂತು ಪಾವತಿಸುವ ಅವಧಿ ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ವಿಮೆ ಕಂತು ತುಂಬಲು ಆಗಸ್ಟ್ 16 ರ ನಂತರವೂ ಅವಧಿ ವಿಸ್ತರಿಸುವಂತೆ ಸಂಬಂಧಿಸಿದ ಕಂಪನಿಗಳಿಗೆ ಸೂವನೆ ನೀಡಲಾಗುವುದು.
ಪ್ರವಾಹ ಪರಿಸ್ಥಿತಿ ಗಂಭೀರ:
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದಾಗ ಪ್ರವಾಹ ತೀವ್ರವಾಗಿರುವುದು ಕಂಡುಬಂದಿದೆ. ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿ ತೀರದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.
ಅನೇಕ ಸೇತುವೆಗಳು ಮುಳುಗಡೆಗೊಂಡಿದ್ದು, ಜನ-ಜಾನುವಾರುಗಳಿಗೆ ಅಪಾಯವಿದೆ ಎಂದರು.
ನೇಕಾರರ ಸಾಲ ಪಾವತಿ; ಅವಧಿ ವಿಸ್ತರಣೆ:
ಬೆಳಗಾವಿಯ ನಗರದಲ್ಲಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದಾಗ ಪ್ರವಾಹದಿಂದ ನೇಕಾರ ಕುಟುಂಬಗಳು ಸಂಕಷ್ಟಕ್ಕೀಡಾಗಿರುವುದು ಕಂಡುಬಂದಿದೆ. ಆದ್ದರಿಂದ ನೇಕಾರರ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಅವಕಾಶ ನೀಡುವಂತೆ ಕ್ರಮವಹಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದರು.
ಬೆಳಗಾವಿ ನೇಕಾರರ ಮಗ್ಗಗಳು ಮತ್ತು ಕಚ್ಚಾ ವಸ್ತುಗಳು ಪ್ರವಾಹದಿಂದ ಹಾನಯಾಗಿರುವುದರಿಂದ ನೇಕಾರರ ಸಾಲ ಮರುಪಾವತಿಗೆ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಪಾವತಿಸುವಂತೆ ಪ್ರವಾಹ ಪೀಡಿತರಿಗೆ ಕಿರುಕುಳ ಕೊಡದೇ ಸಾಲ ಮರುಪಾವತಿಗೆ ಅವಕಾಶ ನೀಡಬೇಕು.
ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಆದೇಶ ನೀಡಲಿದೆ ಎಂದು ಭರವಸೆ ನೀಡಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಶಾಸಕ ಅಭಯ ಪಾಟೀಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ