ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ತಾಂತ್ರಿಕವಾಗಿ ಬದಲಾಗುತ್ತಿರುವ ಇವತ್ತಿನ ಸನ್ನಿವೇಷದಲ್ಲಿ ಔದ್ಯೋಗಿಕ ರಂಗಕ್ಕೆ ಅವಶ್ಯವಿರುವ ಕೌಶಲ್ಯ ಹಾಗೂ ಜ್ಞಾನವನ್ನು ಹೊಂದಿದ ಅಭಿಯಂತರರನ್ನು ಸಮಾಜಕ್ಕೆ ನೀಡುವ ಒಂದು ಗುರುತರ ಜವಾಬ್ದಾರಿ ನಮ್ಮೆಲ್ಲೆರ ಮೇಲಿದೆ. ಆ ನಿಟ್ಟಿನಲ್ಲಿ ಎಲ್ಲ ಅಭಿಯಾಂತ್ರಿಕ ಮಹಾವಿದ್ಯಾಲಯಗಳು ಫಲಿತಾಂಶ ಆಧಾರಿತ ಶಿಕ್ಷಣ (ಓ ಬಿ ಈ) ಪದ್ದತಿಯನ್ನು ಅನುಷ್ಠಾನಗೊಳಿಸುವುದು ಬಹಳ ಅವಶ್ಯಕವಾಗಿದೆ ಎಂದು ವಿ ತಾ ವಿ ಕುಲಸಚಿವರಾದ ಡಾ.ಎ.ಎಸ್. ದೇಶಪಾಂಡೆ ಹೇಳಿದರು.
ಅವರು ಫಲಿತಾಂಶ ಆಧಾರಿತ ಶಿಕ್ಷಣ (ಓ ಬಿ ಈ) ಮತ್ತು ಎನ್‌ಬಿಎ ಮಾನ್ಯತೆ ಕುರಿತು ಬೆಳಗಾವಿಯ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಟೆಕ್ಯೂಪ ೧.೩ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ಒಂದು ವಾರದ ಎಫ್ ಡಿ ಪಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಫಲಿತಾಂಶ-ಆಧಾರಿತ ಶಿಕ್ಷಣ (ಓ ಬಿ ಈ) ಮಾದರಿಯ ಅನುಷ್ಠಾನ, ಭಾರತದಲ್ಲಿ ತಾಂತ್ರಿಕ ಶಿಕ್ಷಣವನ್ನು ಸುಧಾರಿಸಲು ಮತ್ತು ಈ ಪದ್ದತಿಯಲ್ಲಿ ಕಲಿತ ಪದವೀಧರರು ತಮ್ಮ ಜಾಗತಿಕ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಇವತ್ತು ಎಲ್ಲ ತಾಂತ್ರಿಕ ಸಂಸ್ಥೆಗಳು ನೀಡುವ ಕೋರ್ಸ್ ಗಳಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ ಬಿ ಎ) ಯಿಂದ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ ಮತ್ತು ಮಾನ್ಯತೆ ಪಡೆಯಲು ಎಲ್ಲ ತಾಂತ್ರಿಕ ಸಂಸ್ಥೆಗಳು ಫಲಿತಾಂಶ ಆಧಾರಿತ ಶಿಕ್ಷಣ (ಓ ಬಿ ಈ) ಮಾದರಿಯನ್ನು ಅನುಸರಿಸುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.
ಎನ್ ಬಿ ಎ ಮಾನ್ಯತೆ ಜಾಗತಿಕ ಮಾನ್ಯತೆಯಾಗಿದ್ದು ಎಲ್ಲಾ ಕೋರ್ಸ್‌ಗಳಿಗೆ ಜಾಗತಿಕ ಮನ್ನಣೆ ದೊರೆಯುತ್ತದೆ ಜೊತೆಗೆ ಇದು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಅವುಗಳ ಸಾಮರ್ಥ್ಯ, ದೌರ್ಬಲ್ಯ ಮತ್ತು ಅವಕಾಶಗಳನ್ನು ತಿಳಿಯಲು ಸಹಾಯ ಮಾಡುತ್ತದೆ ಎಂದು ದೇಶಪಾಂಡೆ ಹೇಳಿದರು.
ಎನ್ ಬಿ ಎ ಮಾನ್ಯತೆ ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಇದು ಶಿಕ್ಷಣ ಸಂಸ್ಥೆಯಲ್ಲಿ ಆರೋಗ್ಯಕರ ಸ್ಪರ್ಧಾಮನೋಭಾವದ ಕಲಿಕಾ ವಾತಾವರಣವನ್ನು ನಿರ್ಮಿಸುತ್ತದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ಮಾತನಾಡಿದ ಅವರು, ಈ ನೀತಿಯು ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಬದಲಾವಣೆಯನ್ನು ತರುತ್ತದೆ ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಈ ಬದಲಾವಣೆಗಳನ್ನು ಸ್ವೀಕರಿಸಲು ಸಿದ್ಧರಾಗಿರಬೇಕು. ಈ ನೀತಿಯು ಎಲ್ಲಾ ಶಿಕ್ಷಣ ಕ್ಷೇತ್ರಗಳನ್ನು ಒಂದೇ ವೇದಿಕೆಯಲ್ಲಿ ತರುತ್ತದೆ, ಇದರಿಂದಾಗಿ ಜಾಗತಿಕ ಬದಲಾವಣೆಗಳನ್ನು ಎದುರಿಸಲು ಎಲ್ಲಾ ರೀತಿಯ ಕೌಶಲ್ಯ ಮತ್ತು ಜ್ಞಾನವನ್ನು ಪರಿಣಾಮಕಾರಿಯಾಗಿ ಅರಿಯಲು ಇದು ಸಯಹ ಮಾಡುತ್ತದೆ ಎಂದು ಹೇಳಿದರು.
ಜಿ ಐ ಟಿ ಪ್ರಾಚಾರ್ಯ ಪ್ರೊ. ಡಿ. ಎ. ಕುಲಕರ್ಣಿ ಸ್ವಾಗತಿಸಿದರು, ಈ ಕಾರ್ಯಾಗಾರದ ಸಂಯೋಜಕಿ ಪ್ರೊ. ವೀಣಾ ದೇಸಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪ್ರೊ. ಸಾಗರ್ ಸಂತಾಜಿ ವಂದಿಸಿದರು. ವಿ ತಾ ವಿ ಸಂಲಗ್ನತೆ ಹೊಂದಿದ ಕಾಲೇಜ್ ಗಳಿಂದ ಸುಮಾರು ೫೦ ಕ್ಕಿಂತ ಹೆಚ್ಚು ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ