Karnataka NewsLatest

ಎಚ್ಚರವಿರಲಿ, ಮಹಾಜನ್ ವರದಿ ಜಾರಿಯಾದರೆ ಲಾಭ ಮಹಾರಾಷ್ಟ್ರಕ್ಕೇ! ನಾವು ಏನೇನು ಕಳೆದುಕೊಳ್ಳುತ್ತೇವೆ ಗೊತ್ತೇ?

M.K.Hegde

 ಎಂ.ಕೆ. ಹೆಗಡೆ

ಬೆಳಗಾವಿ: ನ್ಯಾಯಾಧೀಶ ಮೆಹರ್ ಚಂದ್ ಮಹಾಜನ್ ಅವರು ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 1966ರಲ್ಲಿ ನೀಡಿದ ವರದಿ ಯಥಾವತ್ ಜಾರಿಯಾಗಲಿ ಎಂದು ಕರ್ನಾಟಕ ಪದೇಪದೆ ಒತ್ತಾಯಿಸುತ್ತಿದೆ. ಆದರೆ, ಈ ವರದಿ ಜಾರಿಯಾದರೆ ಹೆಚ್ಚಿನ ಲಾಭ ಕರ್ನಾಟಕಕ್ಕಲ್ಲ, ಮಹಾರಾಷ್ಟ್ರಕ್ಕೇ!

ಮಹಾಜನ್ ಆಯೋಗ ನೇಮಕವಾಗಿದ್ದು ಮಹಾರಾಷ್ಟ್ರದ ಒತ್ತಡದ ಕಾರಣಕ್ಕಾಗಿ. ಆದರೆ ವರದಿ ಸಲ್ಲಿಕೆಯಾದ ಬಳಿಕ ಮಹಾರಾಷ್ಟ್ರ ಅದನ್ನು ವಿರೋಧಿಸಿದರೆ, ಕರ್ನಾಟಕ ಸ್ವಾಗತಿಸುತ್ತಿದೆ.

ಕರ್ನಾಟಕ ವಿಧಾನ ಮಂಡಳದ ಉಭಯ ಸದನಗಳು ಹಲವು ಬಾರಿ ನಿರ್ಣಯದ ಮೂಲಕ ಮಹಾಜನ್ ಆಯೋಗದ ವರದಿ ಜಾರಿಗೆ ಒತ್ತಾಯಿಸಿವೆ. ಕರ್ನಾಟಕ ಸರಕಾರದ ನಿಯೋಗ ಹಲವು ಬಾರಿ ಕೇಂದ್ರಕ್ಕೆ ತೆರಳಿ ಆಗ್ರಹಿಸಿದೆ. ತನಗೆ ನಷ್ಟವಾಗುವುದಾದರೂ ಸಾಂವಿಧಾನಿಕವಾಗಿ ರಚನೆಯಾದ ಆಯೋಗವೊಂದು ನೀಡಿರುವ ವರದಿಯನ್ನು ಕರ್ನಾಟಕ ಗೌರವಿಸಿ ಒಪ್ಪಿಕೊಂಡಿದೆ. ಆದರೆ ಬೆಳಗಾವಿ ನಗರ ದಕ್ಕುವುದಿಲ್ಲ ಎಂಬ ಒಂದೇ ಕಾರಣಕ್ಕೆ ಮಹಾರಾಷ್ಟ್ರ ಆಯೋಗದ ವರದಿಯನ್ನು ಮಾನ್ಯ ಮಾಡುತ್ತಿಲ್ಲ.

ವರದಿಯ ಶಿಫಾರಸೇನು?: 

ಕರ್ನಾಟಕದ 264 ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾಜನ್ ಆಯೋಗ ಶಿಫಾರಸು ಮಾಡಿದೆ. ಆದರೆ ಬೆಳಗಾವಿ ನಗರ ಕರ್ನಾಟಕದಲ್ಲೇ ಇರಬೇಕೆಂಬುದು ಅದರ ಬಲವಾದ ಪ್ರತಿಪಾದನೆ. ಕೇರಳದ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಆಯೋಗ ಶಿಫಾರಸು ಮಾಡಿದೆ. ಹಾಗಾಗಿ ಈ ವಿವಾದದಲ್ಲಿ ಕೇರಳವೂ ಭಾಗಿಯಾದಂತಾಗಿದೆ.

 

ಮಹಾಜನ ಆಯೋಗ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದಿರುವ ಕರ್ನಾಟಕದ ಪ್ರದೇಶಗಳು- 264

ಬೆಳಗಾವಿ ತಾಲೂಕಿನ 62 (ಬೆಳಗಾವಿ ನಗರಕ್ಕೆ ನೀರುಣಿಸುವ ರಕ್ಕಸಕೊಪ್ಪ ಜಲಾಶಯ ಸೇರಿದಂತೆ)

ಖಾನಾಪುರ ತಾಲೂಕಿನ 152 (ಐತಿಹಾಸಿಕ ನಂದಗಡ ಸೇರಿದಂತೆ)

ಚಿಕ್ಕೋಡಿ ತಾಲೂಕಿನ 41(ನಿಪ್ಪಾಣಿ ನಗರ ಸೇರಿದಂತೆ)

ಹುಕ್ಕೇರಿ ತಾಲೂಕಿನ 9.

 

ಮಹಾಜನ್ ಆಯೋಗ ಕರ್ನಾಟಕಕ್ಕೆ ಸೇರಿಸಬೇಕೆಂದಿರುವ ಮಹಾರಾಷ್ಟ್ರದ ಪ್ರದೇಶಗಳು:

ದಕ್ಷಿಣ ಸೋಲಾಪುರ- 65,

ಅಕ್ಕಲಕೋಟ- ಪೂರ್ಣ ತಾಲೂಕು,

ಜತ್ತ-44,

ಗಡಹಿಂಗ್ಲಜ್-15

 

ಮಹಾರಾಷ್ಟ್ರ ಕೇಳುತ್ತಿರುವ 814 ಪ್ರದೇಶಗಳು:

ಬೆಳಗಾವಿ ಜಿಲ್ಲೆ: ಬೆಳಗಾವಿ-84, ಅಥಣಿ-10, ಖಾನಾಪುರ-206, ಚಿಕ್ಕೋಡಿ-41, ಹುಕ್ಕೇರಿ-18

ಕಾರವಾರ: ಸುಪಾ-131, ಹಳಿಯಾಳ- 120, ಕಾರವಾರ-60

ಕಲಬುರಗಿ: ಆಳಂದ-8

ಬೀದರ್: ಭಾಲ್ಕಿ-49, ಔರಾದ್- 69, ಹುಮ್ನಾಬಾದ್-28

 

57 ವರ್ಷಗಳ ಇತಿಹಾಸ:

1956- ರಾಜ್ಯಗಳ ಪುನರ್ವಿಂಗಡಣೆ

1952- ಗಡಿ ಪುನಾರಚನೆಗೆ ಕೇಂದ್ರಕ್ಕೆ ಮಹಾರಾಷ್ಟ್ರ ಮನವಿ

1960-ಕೇಂದ್ರದಿಂದ ರಚನೆಯಾದ ಸಮಿತಿ ವರದಿ, ಮಹಾರಾಷ್ಟ್ರ ತಿರಸ್ಕಾರ

1966-ಮಹಾಜನ್ ಆಯೋಗ ರಚನೆ

1967-ಮಹಾಜನ್ ಆಯೋಗ ವರದಿ ಸಲ್ಲಿಕೆ

1967-ಮಹಾಜನ್ ಆಯೋಗ ವರದಿ ಜಾರಿಗೆ ಕರ್ನಾಟಕದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಆಗ್ರಹ

1967-ಮಹಾಜನ್ ಆಯೋಗದ ವರದಿಗೆ ಬದ್ಧ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿ.ಪಿ. ನಾಯಕ ಘೋಷಣೆ

1967- ವರದಿ ಪ್ರತಿಭಟಿಸಿ ಗಡಿಯಲ್ಲಿ ಗಲಭೆ ಆರಂಭ: ಉಲ್ಟಾ ಹೊಡೆದ ಮಹಾರಾಷ್ಟ್ರ

1967- ಮಹಾಜನ್ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಉಭಯ ಸದನಗಳ ನಿರ್ಣಯ

 

ದಾವೆ ಹೂಡುವಲ್ಲೇ ಮಹಾ ಎಡವಟ್ಟು: 

ಬೆಳಗಾವಿ, ನಿಪ್ಪಾಣಿ. ಖಾನಾಪುರ, ಬೀದರ್, ಕಾರವಾರ ಸೇರಿದಂತೆ ಕರ್ನಾಟಕದ ಗಡಿ ಭಾಗಗಳು ತನ್ನಲ್ಲಿ ವಿಲೀನವಾಗಬೇಕಂದು ಕೋರಿ ಅರ್ಜಿ ಸಲ್ಲಿಸುವ ವೇಳೆ ಮಹಾರಾಷ್ಟ್ರ ಸರಕಾರ ಸಾಕಷ್ಟು ಲೋಪವೆಸಗಿದೆ. ಇಂಥದ್ದೊಂದು ಪ್ರಮುಖ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪ್ರಾಥಮಿಕ ನಿಯಮಗಳನ್ನೂ ಅನುಸರಿಸದೆ, ಅರ್ಜಿ ಸಲ್ಲಿಸಿ ವರ್ಷದ ನಂತರ ಅದಕ್ಕೆ ಮಾಫಿ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದೆ.

ಅರ್ಜಿಯ ಲೋಪದೋಷಗಳೇನು?:

  • ದಾವೆ ಹೂಡುವ ಸಂದರ್ಭದಲ್ಲಿ ಕನಿಷ್ಠ ಒಂದು ತಿಂಗಳ ಮೊದಲು ಪ್ರತಿವಾದಿಗಳಿಗೆ ನೋಟಿಸ್ ನೀಡಬೇಕೆನ್ನುವ ನಿಯಮ ಪಾಲಿಸದೆ ನೇರವಾಗಿ ದಾವೆ ದಾಖಲಿಸಿದೆ.
  • ಲಿಮಿಟೇಶನ್ ಆ್ಯಕ್ಟ್ ಪ್ರಕಾರ ಯಾವುದೇ ದಾವೆ ಹೂಡುವುದಕ್ಕೆ ಕಾಲಮಿತಿ ಇರುತ್ತದೆ. ವಿಳಂಬವಾಗಿ ದಾವೆ ಹೂಡುವುದಾದಲ್ಲಿ ಅದಕ್ಕೆ ಸಮರ್ಥನೀಯ ಕಾರಣಗಳನ್ನೂ ನೀಡಬೇಕಾಗುತ್ತದೆ. ಆದರೆ ಯಾವುದೇ ಕಾರಣಗಳನ್ನು ನೀಡದೆ 50 ವರ್ಷಗಳಷ್ಟು ವಿಳಂಬವಾಗಿ ಸುಪ್ರೀಂ ಕೋರ್ಟ್ ನಲ್ಲಿ ಮಹಾರಾಷ್ಟ್ರ ದಾವೆ ಹೂಡಿದೆ.
  • ಒಂದು ರಾಜ್ಯದ ಭೂಪ್ರದೇಶ ತನಗೆ ಸೇರಿಸಬೇಕು ಎಂದು ಕೋರಿ ಮತ್ತೊಂದು ರಾಜ್ಯ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಲು ಅವಕಾಶವಿಲ್ಲ. ಆದರೆ ಮಹಾರಾಷ್ಟ್ರ ಹಾಗೆ ನೇರವಾಗಿ ಕೇಳಿತ್ತು. ಮಾಫಿ ಅರ್ಜಿ ವಿಚಾರಣೆಗೇ ಬಂದಿಲ್ಲ. ಅರ್ಜಿಯಲ್ಲಿನ ಲೋಪಗಳನ್ನು ತಿದ್ದುಪಡಿ ಮೂಲಕ ಸರಿಪಡಿಸುವ ಯತ್ನ ಮಾಡಿ ಮಹಾರಾಷ್ಟ್ರ 2007ರಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದೆ.
  • ಜತೆಗೆ ತನ್ನ ಮೊದಲ ಅರ್ಜಿಯಲ್ಲಿನ ಹಲವು ತಪ್ಪುಗಳಿಗೆ ತಿದ್ದುಪಡಿಯನ್ನೂ ಮಾಡಿದೆ. ಮಾಫಿ ಕೋರಿದ ಹಾಗೂ ತಿದ್ದುಪಡಿ ಮಾಡಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಈವರೆಗೆ ಕೈಗೆತ್ತಿಕೊಂಡಿಲ್ಲ. ಇವೆಲ್ಲವುಗಳಿಗೆ ಕರ್ನಾಟಕ ಮತ್ತು ಕೇಂದ್ರ ಸರಕಾರಗಳು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿವೆ.  ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಸರಿನ್ ಅವರು, ಮಹಾರಾಷ್ಟ್ರದ ಅರ್ಜಿಯ ಸಮರ್ಥನೀಯತೆ ಅಧ್ಯಯನ ಮಾಡುವಾಗ ಕರ್ನಾಟಕ ಈ ಲೋಪಗಳಿಗೆಲ್ಲ ಅವರೆದುರು ಮತ್ತೊಮ್ಮೆ ಆಕ್ಷೇಪವೆತ್ತಬೇಕು. ಅಲ್ಲದೆ ಕರ್ನಾಟಕ ಸರಕಾರ ಮರಾಠಿ ಭಾಷಿಕರ ಮೇಲೆ ದೌರ್ಜನ್ಯವೆಸಗುತ್ತಿದೆ ಎಂದು ಮಹಾರಾಷ್ಟ್ರ ಸಿದ್ಧಪಡಿಸಿರುವ ಹಲವಾರು ಸುಳ್ಳು ದಾಖಲೆಗಳನ್ನು ಎತ್ತಿ ತೋರಿಸಬೇಕು ಎಂಬುದು ತಜ್ಞರ ಸಲಹೆ.

ಕೇರಳ ಒಪ್ಪುತ್ತಾ?:

ಮಹಾಜನ ವರದಿ ಪೂರ್ಣ ಜಾರಿಗೊಂಡರೆ ಕೇರಳದ ಕಾಸರಗೋಡು ಕರ್ನಾಟಕದಲ್ಲಿ ವಿಲೀನಗೊಳ್ಳುತ್ತದೆ. ಇದಕ್ಕೆ ಕೇರಳ ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಮಹಾಜನ ವರದಿ ಜಾರಿಗೊಳ್ಳಲು ಸಾಧ್ಯವಿಲ್ಲ ಎನ್ನುವುದು ಕರ್ನಾಟಕಕ್ಕೆ ಗೊತ್ತಿದೆ. ಹಾಗಾಗಿಯೇ ಇಷ್ಟು ಬಲವಾಗಿ ವರದಿ ಜಾರಿಗೆ ಕರ್ನಾಟಕ ಒತ್ತಾಯಿಸುತ್ತಿದೆ.

ಏನೇ ಆದರೂ ಕರ್ನಾಟಕಕ್ಕೆ ಬೇಕಿರುವುದು ಯಥಾಸ್ಥಿತಿಯೇ!

 

ಮಹಾನಾಯಕರಿಗೆ ಪವಾರ್ ಕಿಡಿನುಡಿ

“ಮಹಾಜನ್ ಆಯೋಗದ ವರದಿಯನ್ನು ನಾವು ಒಪ್ಪಿಕೊಳ್ಳೋಣ. ಇದರಿಂದ ಬೆಳಗಾವಿ ಹೊರವಲಯದಲ್ಲಿರುವ ಬೆಳಗುಂದಿ ನಮಗೆ ಸಿಗಲಿದೆ. ಅಲ್ಲಿ ನಾವು ‘ನವ ಬೆಳಗಾವಿ’ಯನ್ನು ನಿರ್ಮಾಣ ಮಾಡೋಣ,” ಎಂದು ಎನ್ ಸಿಪಿ ನಾಯಕ ಶರದ್ ಪವಾರ್ ಹಿಂದೊಮ್ಮೆ ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರಿಗೆ ಸಲಹೆ ನೀಡಿದ್ದರು. ಆದರೆ ಅವರು ಅದನ್ನು ಒಪ್ಪಿಕೊಳ್ಳಲಿಲ್ಲ. ಇದರಿಂದ ಕೆರಳಿದ ಪವಾರ್ “ಮಹಾಜನ ಆಯೋಗದ ವರದಿ ಒಪ್ಪಿಕೊಂಡರೆ ನಿಮ್ಮ ದಂಧಯೇ ಬಂದ್ ಆಗಲಿದೆ,” ಎಂದು ಎಂಇಎಸ್ ನಾಯಕರ ಅಸಲಿತನ ಬಯಲುಮಾಡಿದ್ದರು. ಅಲ್ಲದೆ “ಇನ್ನು ಮುಂದೆ ಗಡಿ ವಿವಾದದಲ್ಲಿ ನಾನು ಭಾಗಿಯಾಗುವುದಿಲ್ಲ,” ಎಂದೂ ಅವರು ಘೋಷಿಸಿದ್ದರು. ಮತ್ತೆ ಎಂದೂ ಅವರು ಗಡಿ ವಿವಾದದ ಬಗ್ಗೆ ಮಾತೇ ಆಡಿರಲಿಲ್ಲ. ಕೇಂದ್ರ ಸಚಿವರಾಗಿದ್ದಾಗ ಬೆಳಗಾವಿಗೆ ಬಂದಿದ್ದ ಸಂದರ್ಭದಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದಾಗ ಈಗ ನಾವು ಭಾರತ- ಪಾಕಿಸ್ತಾನ ಗಡಿ ಕುರಿತು ಮಾತನಾಡೋಣ,” ಎಂದಿದ್ದರು. ಆದರೆ, ಈಚೆಗೆ ಮತ್ತೆ ಈ ಬಗ್ಗೆ ಪ್ರಸ್ತಾಪಿಸಲು ಆರಂಭಿಸಿದ್ದಾರೆ!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button