Kannada NewsKarnataka NewsLatest

ಒಂದೇ ಕಡೆ ಹನ್ನೊಂದು ಸುದ್ದಿ… ಹತ್ತಾರು ಉಪಯುಕ್ತ ಮಾಹಿತಿ…

ಯೋಗ ನಡಿಗೆ ಆರೋಗ್ಯ ದೆಡೆಗೆ ಜಾಥಾ ಕಾರ್ಯಕ್ರಮ

ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಪೊಲೀಸ್ ಉಪ ಆಯುಕ್ತರಾದ ಯಶೋಧಾ ವಂಟಗೋಡಿ ಅವರು ಚಾಲನೆ ನೀಡಿದರು.

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಜಿಲ್ಲಾ ಆಯುಷ್ ಇಲಾಖೆ ಇವರುಗಳ ಸಂಯುಕ್ತಾಶ್ರಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಪೊಲೀಸ್ ಉಪ ಆಯುಕ್ತರಾದ ಯಶೋಧಾ ವಂಟಗೋಡಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಷ ಅಧಿಕಾರಿಗಳಾದ ಡಾ.ಸುರೇಶ ಡಿ ದೊಡವಾಡ, ಕ್ಯಾಂಪ್ ನ ಸೆಂಟ್ ಆಂಥೋನಿ ಪ್ರೌಢಶಾಲಾ ವಿದ್ಯಾರ್ಥಿಗಳು, ಜೈನ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು, ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು, ಮಚ್ಚೆಯ ಕೆ.ಎಸ್.ಆರ್.ಪಿ ೨ ನೇ ಪಡೆಯ ಪೊಲೀಸರು, ಎಸ್.ಬಿ.ಜಿ ಮಹಾವಿದ್ಯಾಲಯದ ಮೆಡಿಕಲ್ ವಿದ್ಯಾರ್ಥಿಗಳು, ಭರತೇಶ ಹೋಮಿಯೋಪತಿಕ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಶಿವ ಬಸವ ಜೊತಿ ಹೋಮಿಯೋಪಥಿಕ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು, ಇಂಜಿನಿಯರಿಂಗ್ ಕಂಪ್ಯೂಟರ್ ಆಕಾಡೆಮಿ ಸಿಬ್ಬಂದಿಗಳು, ಆಯುಷ್ ಶಾಖೆಯ ಸಿಬ್ಬಂದಿಗಳು ಸೇರಿದಂತೆ ಇತರರು ಜಾಥಾದಲ್ಲಿ ಭಾಗಿಯಾಗಿದ್ದರು.

————————
ಜೂನ್ ೨೪ ರಂದು ಉದ್ಯೋಗ ಮೇಳ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬೆಳಗಾವಿ ವತಿಯಿಂದ ಜೂನ್ ೨೪ ರಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೨.೩೦ ಗಂಟೆಗಳ ವರೆಗೆ ಸದರಿ ಕಛೇರಿಯಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
೧೮ ರಿಂದ ೩೦ ವಯೋಮಿತಿಯಲ್ಲಿರುವ ಎಸ್.ಎಸ್.ಎಲ್.ಸಿ., ಐ.ಟಿ.ಐ., ಡಿಪ್ಲೋಮಾ, ಪಿಯುಸಿ, ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಈ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.
ಸದರಿ ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಈ ಕಛೇರಿಯನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ ೯೭೪೩೧೬೬೧೭೮, ೮೯೫೧೯೧೧೫೬೭ನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

——————-

ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳು ೪೦ ಪರೀಕ್ಷಾ ಕೇಂದ್ರಗಳಲ್ಲಿ ಜೂನ್ ೨೧ ರಿಂದ ೨೮ ರಂದು ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಹಾಗೂ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೫.೩೦ರ ವರೆಗೆ (ಭಾನುವಾರ ಹೊರತುಪಡಿಸಿ) ಪರೀಕ್ಷೆಗಳು ಜರುಗಲಿವೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ೨೦೦ ಮೀಟರ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟಣೆಗಳು ಜರುಗದಂತೆ ನೋಡಿಕೊಳ್ಳಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ನಿಷೇಧಾಜ್ಞೆಯನ್ನು ಘೋಷಿಸಿ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಪ್ರದೇಶದಲ್ಲಿ ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರಿ ತಿರುಗಾಡುವುದನ್ನು, ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಾಯ ಮಾಡುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಹತ್ತಿರ ಬರುವುದನ್ನು, ಸಾರ್ವಜನಿಕ ಸಭೆ, ಮೆರವಣಿಗೆ ಮಾಡುವುದನ್ನು (ಶವ ಸಂಸ್ಕಾರಕ್ಕೆ, ಹೊಟೆಲ್‌ಗಳಿಗೆ, ಚಲನಚಿತ್ರ ಮಂದಿರಗಳಿಗೆ, ಧಾರ್ಮಿಕ ಮತ್ತು ಮದುವೆ ಮೆರವಣಿಗೆಗಳಿಗೆ ಈ ಆದೇಶವು ಅನ್ವಯಸುವುದಿಲ್ಲ), ಸದರೀ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ೨೦೦ ಮೀ. ಒಳಗಿನ ಝೆರಾಕ್ಸ್ ಅಂಗಡಿಗಳನ್ನು ಬಂದ ಇಡತಕ್ಕದ್ದು, ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿಗಳು, ಸರ್ಕಾರದಿಂದ ನೇಮಿಸಿದ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿದ ಆರಕ್ಷಕ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದವರಿಗೆ ಶಾಲಾ ಆವರಣದಲ್ಲಿ ಪ್ರವೇಶವನ್ನು ನಿರ್ಬಂಧಿಸಿದೆ ಎಂದು ಜಿಲ್ಲಾ ದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

———————–
ಜೇನುಕೃಷಿ ತರಬೇತಿಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ೨ ದಿನ ಉಚಿತ ಜೇನುಕೃಷಿ ತರಬೇತಿಯನ್ನು ೨೦೧೯ ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗಿದೆ.
ಅರ್ಹತೆ ಕನಿಷ್ಟ ೭ನೇ ತರಗತಿ ಪಾಸಾಗಿದ್ದು, ೧೮ ರಿಂದ ೩೫ ವಯೋಮಿತಿಯವರಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆಯಿದೆ. ಕನಿಷ್ಟ ಜಮೀನು ಹಿಡುವಳಿದಾರರಾಗಿದ್ದು, ತೋಟಗಾರಿಕೆ ಕೃಷಿ ಬೆಳೆಗಾರರಿಗೆ ಮತ್ತು ಬೇಸಾಯಗಾರರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿ ಪಡೆದ ಆಸಕ್ತರು ಜೇನುಪೆಟ್ಟಿಗೆ, ಜೇನುಕುಟುಂಬ, ಜೇನುಯಂತ್ರಗಳನ್ನು ಪಡೆಯುವುದಿದ್ದಲ್ಲಿ ಶೇ ೪೦ರಷ್ಟು ಪ್ರೋತ್ಸಾಹಧನಕ್ಕೆ ಅರ್ಹರಿರುತ್ತಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ ೯೦ರಷ್ಟು ಪ್ರೋತ್ಸಾಹಧನ ನೀಡಲಾಗುವುದು.
ಪ್ರತಿ ತಾಲ್ಲೂಕಿನಿಂದ ೬ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ತರಬೇತಿ ಪಡೆಯಲು ಇಚ್ಛಿಸುವವರು ಆಯಾ ತಾಲ್ಲೂಕಿನ ಹಿರಿಯ, ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಚೆನ್ನಮ್ಮ ವೃತ್ತ, ಬೆಳಗಾವಿ ಅಥವಾ ತಾಲ್ಲೂಕಿನ ತೋಟಗಾರಿಕೆ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ (ಜಿ.ಪಂ) ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

———————
ಜೂನ್ ೨೧ ರಂದು ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಯು ಜಿ ಕೇಬಲ್ ಕೆಲಸ ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವಿ ವಡಗಾವ ವಿತರಣಾ ಕೇಂದ್ರದಿಂದ ಹೊರಡುವ ಎಫ್-೪ ಬಝಾರಗಲ್ಲಿ ಪೂರಕದ ಮೇಲೆ ಬರುವ ಛಾವಡಿಗಲ್ಲಿ, ಬಾಝಾರಗಲ್ಲಿ, ಅಳ್ವಾನ ಗಲ್ಲಿ, ಪಾಟೀಲ ಗಲ್ಲಿ, ಯರಮಾಳರೋಡ, ದತ್ತಗಲ್ಲಿ, ಸರ್ವೋದಯ ಕಾಲನಿ, ನಝರ ಕ್ಯಾಂಪ, ರಾಮದೇವ ಗಲ್ಲಿ, ವಿಷ್ಣುಗಲ್ಲಿ, ಶಹಾಪೂರಗಲ್ಲಿ, ಮೇಘದೋತ ಸೊಸೈಟಿ, ನಾತ್ ಪೈ ಸರ್ಕಲ್, ಸರಾಫಗಲ್ಲಿ ಪ್ರದೇಶಗಳಿಗೆ ಜೂನ್ ೨೧ ರಂದು ಮುಂಜಾನೆ ೧೦ ಗಂಟೆಯಿಂದ ಸಾಯಂಕಾಲ ೦೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

———————–

ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ರೈತರ ಆದಾಯವನ್ನು ವೃದ್ಧಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pಒ-ಏISಂಓ) ಎಂಬ ಯೋಜನೆಯು ಜಾರಿಯಲ್ಲಿ ತರಲಾಗಿದೆ.
ಈ ಯೋಜನೆಯಡಿ ಪ್ರತಿ ರೈತ ಕುಟುಂಬಕ್ಕೆ ೪ ತಿಂಗಳಿಗೊಂದು ಬಾರಿಯಂತೆ ೩ ಸಮಾನ ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು ರೂ. ೬೦೦೦ ಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು.
ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ರೈತರು ಸ್ವಯಂ ಘೋಷಣಾ ಪತ್ರವನ್ನು ಭರ್ತಿಮಾಡಿ ಹತ್ತಿರದ ಗ್ರಾಮ ಪಂಚಾಯತ, ಅಟಲಜೀ ಜನ ಸ್ನೇಹಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ನಾಗರಿಕ ಸೇವಾ ಕೇಂದ್ರ, ಅಥವಾ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖಾ ಕಛೇರಿಗಳಿಗೆ ಕೂಡಲೇ ನೀಡಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

———————-

ಯುವಸ್ಪಂದನ ಕೇಂದ್ರ:  ಉಚಿತ ಮಾರ್ಗದರ್ಶನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವಸ್ಪಂದನ ಅರಿವು ಕಾರ್ಯಕ್ರಮ ಸರ್ಕಾರಿ ಐ.ಟಿ.ಐ ಕಾಲೇಜು ರಾಮದುರ್ಗದಲ್ಲಿ ನಡೆಯಿತು. ಯುವ ಪರಿವರ್ತಕರಾದ ವಿರೇಶ ರಾಮದುರ್ಗ ಇವರು ಆರೋಗ್ಯ ಮತ್ತು ಜೀವನಶೈಲಿ, ಸಂಬಂಧಗಳು, ಶಿಕ್ಷಣ ಮತ್ತು ಮಾರ್ಗದರ್ಶನ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಿ.ಜೆ. ಲಮಾಣಿ ಹಾಜರಿದ್ದರು.
ಯುವ ಜನರಿಗೆ ಉಚಿತ ಮಾರ್ಗದರ್ಶನ, ಸೇವೆಗಾಗಿ ಯುವಸ್ಪಂದನ ಕೇಂದ್ರ ಬೆಳಗಾವಿ ದೂರವಾಣಿ ಸಂಖ್ಯೆ ೦೮೩೧-೨೪೭೪೧೦೧ನ್ನು ಸಂಪರ್ಕಿಸಬಹುದು ಎಂದು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಸೀಬಿರಂಗಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

————————

ಜೂನ್ ೨೨ ರಂದು ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಕ.ವಿ.ಪ್ರ.ನಿ.ನಿ. ವತಿಯಿಂದ ೧೧೦ ಕೆ.ವ್ಹಿ. ಉಚಗಾಂವ ಉಪಕೇಂದ್ರದಲ್ಲಿ ಮೊದಲನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಸದರಿ ಉಪಕೇಂದ್ರದಿಂದ ವಿತರಣೆಯಾಗುವ ಬಿಜಗರ್ಣಿ, ಬೋಕಮೂರ, ಕವಳೇವಾಡಿ, ಬೆಳವಟ್ಟಿ, ಬಾಕನೂರ, ಬೆಳಗುಂದಿ, ಸೋನೋಲಿ, ಎಳೆಬೈಲ, ರಾಕಸಕೊಪ್ಪ, ಕುದ್ರೇಮನಿ, ಕಲ್ಲೇಹೋಳ, ಬೆಳಗುಂದಿ ಔದ್ಯೋಗಿಕ ಕ್ಷೇತ್ರ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ಸುಳಗಾ, ತುರಮುರಿ, ಕೋಣೇವಾಡಿ, ಬಾಚಿ, ಬೆನಕನಹಳ್ಳಿ, ಸಾವಗಾಂವ, ಮಂಡೋಳಿ, ಹಂಗರಗಾ, ಆರ್ಮಿ ಕಾಲನಿ, ಕೆ.ಎಚ್.ಬಿ. ಲೇಔಟ್, ಬೆನಕನಹಳ್ಳಿ ಹಾಗೂ ೩೩ ಕೆ.ವ್ಹಿ. ಸದಾಶಿವ ನಗರ ಉಪಕೇಂದ್ರದಿಂದ ವಿತರಣೆಯಾಗುವ ವಾಟರ್ ಸಪ್ಲಾಯ್, ಹಿಂಡಲಗಾ, ವಿಜಯ ನಗರ, ಗಣೇಶಪೂರ, ಸರಸ್ವತಿ ನಗರ, ಕಂಗ್ರಾಳಿ ಕೆ.ಎಚ್, ಅಲತಗಾ, ಅಂಬೇವಾಡಿ, ಮನ್ನೂರ, ಗೋಜಗಾ ಗ್ರಾಮಗಳಿಗೆ ಜೂನ್ ೨೨ ರಂದು ಮುಂಜಾನೆ ೧೦ ಗಂಟೆಯಿಂದ ಮಧ್ಯಾಹ್ನ ೦೩ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

————-
ಇಂದು ವಸತಿ ನಿಲಯ ರಸ್ತೆಗಳ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಕಿವುಡ ಮಕ್ಕಳ ಸರಕಾರಿ ಶಾಲಾ ಆವರಣದಲ್ಲಿ ಸಿಬ್ಬಂದಿ ವಸತಿ ಗೃಹಗಳಿಗೆ ಹಾಗೂ ಬಾಲಕಿಯರ ವಸತಿ ನಿಲಯಕ್ಕೆ ಪಕ್ಕಾ ರಸ್ತೆಗಳನ್ನು ನಿರ್ಮಿಸಲು ಪತ್ರಾಂಕಿತ ಅಧೀಕ್ಷರಾದಂತಹ ಆರ್.ಬಿ ಬನಶಂಕರಿಯವರು ಭೂಮಿ ಪೂಜೆಯನ್ನು ಜೂನ್ ೨೦ ರಂದು ನೆರವೆರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಇಂಜಿನೀಯರಾದ ಮಠಪತಿ ಮತ್ತು ಗುತ್ತಿಗೆದಾರರಾದ ಸುರೇಶ ತಳವಾರ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಸಿಬ್ಬಂದಿಯವರಾದ ಸಂತೋಷ ಕುಮಾರ, ಶಿವಜ್ಯೋತಿ, ಹಸೀನಾ ಮುಜಾವರ, ಸವಿತಾ ಕೆರೂರ, ರಶ್ಮಿ ನವಲಕರ ಮತ್ತು ಪ್ರ.ದ.ಸ. ಆರ್.ಬಿ.ಯಮಕನಮರ್ಡಿ ಗಣಕ ಶಿಕ್ಷಕಿಯಾದ ದೀಪಾ ಕಂಬಾರ, ಸಹಾಯಕ ಮಾರುತಿ ಕೆಂಪಣ್ಣವರ ಅವರು ಹಾಗೂ ಶಾಲಾ ಮಕ್ಕಳು ಉಪಸ್ಥತರಿದ್ದರು.

——————-

ರೈತಸಿರಿ ಯೋಜನೆ ಅನುಷ್ಠಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆಗಳಾಗಿ ಹೊರಹೊಮ್ಮತ್ತಿದ್ದು, ಅತೀ ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿಯೂ ಬೆಳೆಯಬಹುದಾಗಿದೆ. ಹಾಗೆಯೇ ಶುಚ್ಕ, ಒಣ ಪರಿಸ್ಥಿತಿಗಳಲ್ಲಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಸಹ ಬೆಳೆಯುವುದರ ಜೊತೆಗೆ ಕನಿಷ್ಠ ಕೃಷಿ ಪರಿಕರಗಳ ಅವಶ್ಯಕತೆ ಇರುತ್ತದೆ. ಸಿರಿಧಾನ್ಯಗಳು ಏಕದಳ ಧಾನ್ಯಗಳಿಗೆ ಹೋಲಿಸಿದರೆ ಅತ್ಯಂತ ಪೌಷ್ಠಿಕಾಂಶ ಗುಣ ಲಕ್ಷಣಗಳಿಂದ ಕೂಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ(ಪ್ರೋಟೀನ್), ನಾರಿನಾಂಶ, ಕ್ಯಾಲ್ಸಿಯಂ ಮತ್ತು ಖನಿಜಾಂಶಗಳನ್ನು ಹೊಂದಿದ್ದು, ಆಹಾರ ಕ್ರಮದಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪಡೆಯಲು ಸಾಧ್ಯವಾಗದ ಜನಸಾಮಾನ್ಯರಿಗೆ ಪೌಷ್ಠಿಕಾಂಶದ ಭದ್ರತೆಯನ್ನು ಖಾತರಿಪಡಿಸುತ್ತದೆ.
ರಾಜ್ಯ ಸರ್ಕಾರವು ಕಳೆದ ಸಾಲುಗಳಿಂದ ರಾಜ್ಯದಲ್ಲಿ ಸಿರಿಧಾನ್ಯಗಳ ಬೆಳೆಯನ್ನು ಉತ್ತೇಜಿಸುತ್ತಿದ್ದು ಹಲವಾರು ಕಾರ್ಯಕ್ರಮಗಳ ಮುಖಾಂತರ ರಾಜ್ಯದಲ್ಲಿ ಸಿರಿಧಾನ್ಯಗಳ ಕ್ಷೇತ್ರವನ್ನು ಹೆಚ್ಚಿಸುವುದರ ಜೊತೆಗೆ ಬೆಳೆದ ಸಿರಿಧಾನ್ಯಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮೇಳಗಳು ಸೇರಿದಂತೆ ಎಲ್ಲಾ ಹಂತದಲ್ಲಿಯೂ ಸಿರಿಧಾನ್ಯಗಳ ಮೇಳಗಳನ್ನು ಆಯೋಜಿಸುವ ಮೂಲಕ ರೈತರಿಗೆ, ಉದ್ದಿಮೆದಾರರಿಗೆ ಹಾಗೂ ಗ್ರಾಹಕರಿಗೆ ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗಿದೆ.
೨೦೧೯-೨೦ ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಪ್ರಸ್ತಾಪಿಸಿರುವ “ಹೊಸ ಯೋಜನೆ, ಕಾರ್ಯಕ್ರಮ” ಗಳಡಿ ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ಮತ್ತಷ್ಟು ಉತ್ತೇಜನ ನೀಡಲು ರೈತಸಿರಿಯೋಜನೆಯನ್ನು ಘೋಷಿಸಿರುತ್ತಾರೆ. ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರಮುಖ ೬ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳಿಗೆ ಉತ್ತೇಜನ ನೀಡಲಾಗುತ್ತ್ತದೆ.

ರೈತಸಿರಿ ಯೋಜನೆಯ ಮುಖ್ಯ ಉದ್ದೇಶಗಳು:
ಜಿಲ್ಲೆಯಲ್ಲಿ ಸಿರಿಧಾನ್ಯಗಳ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದು, ಸಿರಿಧಾನ್ಯಗಳು ಪೌಷ್ಠಿಕ ಆಹಾರ, ರೈತರ ಭದ್ರತೆ, ಸುಸ್ಥಿರ ಕೃಷಿ ಮತ್ತು ಪರಿಸರದ ಸಂರಕ್ಷಣೆಗೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಬೆಳೆಯನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸುವುದು, ಸಿರಿಧಾನ್ಯಗಳ ಉತ್ಪಾದನೆಗೆ ಪೂರಕವಾದ ಸುಧಾರಿತ ತಾಂತ್ರಿಕತೆಗಳನ್ನು ಸೂಕ್ತ ಸಮಯದಲ್ಲಿ ಅಳವಡಿಸಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು, ಸಿರಿಧಾನ್ಯಗಳ ಸಂಸ್ಕರಣೆ ಮತ್ತು ವಾಣೀಜ್ಯೀಕರಣಕ್ಕೆ ಪ್ರೋತ್ಸಾಹಿಸಿ ಪೌಷ್ಠಿಕಭರಿತ ಸಿರಿಧಾನ್ಯಗಳನ್ನು ನಿರಂತರವಾಗಿ ಗ್ರಾಹಕರಿಗೆ ಒದಗಿಸುವುದು, ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಿ, ಮಾರುಕಟ್ಟೆ ಸಂಪರ್ಕ ಹೆಚ್ಚಿಸಿ ಕೃಷಿ ಮತ್ತು ಆಹಾರದ ಮುಖ್ಯ ವಾಹಿನಿಗೆ ತರುವುದು.

ರೈತಸಿರಿ ಯೋಜನೆಯಡಿ ಕಾರ್ಯಕ್ರಮಗಳು:
ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹಧನ (ಆಃಖಿ ಮುಖಾಂತರ): ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ೧೦ ಸಾವಿರ ರೂ. ನಗದು ಪ್ರೋತ್ಸಾಹಧನ ೨ ಕಂತುಗಳಲ್ಲಿ ನೇರ ಸೌಲಭ್ಯ ವರ್ಗಾವಣೆ (ಆiಡಿeಛಿಣ ಃeಟಿeಜಿiಣ ಖಿಡಿಚಿಟಿsಜಿeಡಿ) ಮುಖಾಂತರ, ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್‌ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ, ಅರ್ಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಅರ್ಜಿ ಸಲ್ಲಿಸಲು ಕೋರಿದೆ.

ಸಿರಿಧಾನ್ಯಗಳ ಸಂಸ್ಕರಣೆಗೆ ಪ್ರೋತ್ಸಾಹಧನ: ಸಿರಿಧಾನ್ಯಗಳ ಕ್ಷೇತ್ರದಲ್ಲಿ ಸಂಸ್ಕರಣೆಯೇ ಅತೀ ಹೆಚ್ಚು ಸಮಸ್ಯೆಯಾತ್ಮಕ ವಿಷಯವಾಗಿರುವ ಹಿನ್ನೆಲೆಯಲ್ಲಿ ರೈತರು ಬೆಳೆದ ಸಿರಿಧಾನ್ಯಗಳಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಹಾಗೂ

ಸಿರಿಧಾನ್ಯಗಳ ಪೋಲಾಗುವುದನ್ನು ತಡೆಯಲು ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಪ್ರೋತ್ಸಾಹ.
ಸಿರಿಧಾನ್ಯಗಳ ಪ್ರಾಥಮಿಕ ಸಂಸ್ಕರಣ ಘಟಕಗಳ ಸ್ಥಾಪನೆಗಾಗಿ ಪ್ರೋತ್ಸಾಹ ಪಡೆಯಲು ಸಿರಿಧಾನ್ಯ ಬೆಳೆಯುವ ಅರ್ಹ ರೈತರು, ನವೋದ್ಯಮಿಗಳು, ರೈತ ಸಂಘಗಳು, ನೊಂದಾಯಿತ ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು (ಈPಔs), ಖಾಸಗಿ ಉದ್ದಿಮೆದಾರರು, ಸಾರ್ವಜನಿಕ ವಲಯ ಘಟಕಗಳು, ಜಂಟಿ ವಲಯ ಘಟಕಗಳು ಮತ್ತು ಆಹಾರ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ ಅಥವಾ ಆಧುನಿಕರಣ ಉದ್ದಿಮೆಯಲ್ಲಿ ಕಾರ್ಯನಿರತರು ಪ್ರತಿ ಘಟಕಕ್ಕೆ ಶೇ.೫೦ ಸಹಾಯಧನ ಗರಿಷ್ಠ ರೂ. ೧೦.೦೦ ಲಕ್ಷರಂತೆ ೨ ಕಂತುಗಳಲ್ಲಿ.
ಏಪ್ರಿಲ್ ೧, ೨೦೧೯ ರ ನಂತರ ಖರೀದಿಸಿ ಅಳವಡಿಸಿದ ಯಂತ್ರೋಪಕರಣಗಳಿಗೆ ಪ್ರೋತ್ಸಾಹಧನ.
ಕಾರ್ಯಕ್ರಮವು ಪ್ರಸ್ತಾವನೆ ಆಧಾರಿತ ಕಾರ್ಯಕ್ರಮವಾಗಿದ್ದು, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಮೂಲಕ ಅನುಷ್ಠಾನ ಮಾಡಲಾಗುತ್ತದೆ. ಮೊದಲು ಸಲ್ಲಿಕೆಯಾಗುವ ಅರ್ಹ ಪ್ರಸ್ತಾವನೆಗಳಿಗೆ ಆದ್ಯತೆ. ಅರ್ಹ ರೈತರು, ನವೋದ್ಯಮಿಗಳು, ರೈತ ಸಂಘಗಳು, ನೊಂದಾಯಿತ ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು, ಖಾಸಗಿ ಉದ್ದಿಮೆದಾರರು, ಸಾರ್ವಜನಿಕ ವಲಯ ಘಟಕಗಳು, ಜಂಟಿ ವಲಯ ಘಟಕಗಳು ಮತ್ತು ಆಹಾರ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ ಅಥವಾ ಆಧುನಿಕರಣ ಉದ್ದಿಮೆಯಲ್ಲಿ ಕಾರ್ಯನಿರತರು ಪ್ರಸ್ತಾವನೆಗಳನ್ನು ಸಂಬಂಧಿಸಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

————————

ಪತ್ರಿಕೋದ್ಯಮ ಮಹಿಳಾ ಅಭ್ಯರ್ಥಿಗಳಿಂದ   ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ರಾಜ್ಯ ಸರ್ಕಾರದ ಮಹಿಳಾ ಉದ್ದೇಶಿತ ೨೦೧೯-೨೦೨೦ ರ ಆಯವ್ಯಯದ ಕಾರ್ಯಕ್ರಮಗಳಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಿಕೋದ್ಯಮದ ಮಹಿಳಾ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಗಳಾಗಿ ತರಬೇತಿ ನೀಡಲು ಉದ್ದೇಶಿಸಿದೆ. ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ, ಕಂಪ್ಯೂಟರ್ ಜ್ಞಾನವಿರುವ, ಕನ್ನಡ ಭಾಷೆ ಬಳಸುವ ಪ್ರಬುದ್ಧತೆ ಹೊಂದಿರುವ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಅಪ್ರೆಂಟಿಸ್ ತರಬೇತಿಗೆ ಆಯ್ಕೆ ಮಾಡಲಾಗುವುದು.
ಬೆಳಗಾವಿ ಜಿಲ್ಲಾ ಕಚೇರಿಯ ಕ್ಷೇತ್ರ ಕಾರ್ಯ ಹಾಗೂ ಮಾಧ್ಯಮ ಪ್ರಚಾರ ಕಾರ್ಯನಿರ್ವಹಿಸಲು ಹಾಗೂ ಅಪ್ರೆಂಟಿಸ್ ತರಬೇತಿಗಾಗಿ ಆಯ್ಕೆಯಾಗುವ ಇಬ್ಬರು ಮಹಿಳಾ ಅಭ್ಯರ್ಥಿಗಳ ತರಬೇತಿ ಅವಧಿ ೯ ತಿಂಗಳದ್ದಾಗಿರುತ್ತದೆ. ಮಾಸಿಕ ೧೫ ಸಾವಿರ ರೂ. ತರಬೇತಿ ಸಂಭಾವನೆ ನೀಡಲಾಗುತ್ತದೆ.
ಪತ್ರಿಕೋದ್ಯಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ೪೦ ರ ವಯೋಮಿತಿಯಲ್ಲಿರುವ ಬೆಳಗಾವಿ ಜಿಲ್ಲೆಯ ರಹವಾಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಪಕ್ಕದ ಇತರ ಜಿಲ್ಲೆಗಳ ಅಭ್ಯರ್ಥಿಗಳನ್ನು ಆಯ್ಕೆಗಾಗಿ ಪರಿಗಣಿಸಲಾಗುವುದು. ಆಯ್ಕೆ ಸಂದರ್ಭದಲ್ಲಿ ಕಂಪ್ಯೂಟರ್, ಕನ್ನಡ ಜ್ಞಾನ ಹಾಗೂ ಬೆರಳಚ್ಚು ವೇಗ, ಅಂತರ್ಜಾಲ ಬಳಕೆ ಕುರಿತು ಪರೀಕ್ಷೆ ನಡೆಸಲಾಗುವುದು. ಕೇಂದ್ರ ಕಚೇರಿ ನಿರ್ದೇಶನದಂತೆ ಜಿಲ್ಲಾ ಸಮಿತಿಯು ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಆಯ್ಕೆಯಾದಲ್ಲಿ ಮೂಲಪ್ರಮಾಣ ಪತ್ರಗಳನ್ನು ಜಿಲ್ಲಾ ಕಚೇರಿಗೆ ತರಬೇತಿ ಅವಧಿ ಪೂರ್ಣಗೊಳ್ಳುವವರೆಗೆ ಇಟ್ಟುಕೊಳ್ಳಲು ನೀಡುವುದು ಕಡ್ಡಾಯವಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ಉಪ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನ್ಯಾಯಾಲಯ ಆವರಣ, ಬೆಳಗಾವಿ ಇಲ್ಲಿಂದ ಪಡೆದು ಸ್ವಯಂ ದೃಢೀಕರಿಸಿದ ಪ್ರಮಾಣ ಪತ್ರ ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ೨೦೧೯ರ ಜುಲೈ ೪ ರೊಳಗಾಗಿ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.
ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ತರಬೇತಿ ಅವಧಿಯ ಮಧ್ಯದಲ್ಲಿ ಬಿಟ್ಟುಹೋದರೆ ಮೂಲ ಶೈಕ್ಷಣಿಕ ದಾಖಲಾತಿಗಳನ್ನು ಅವಧಿಗೆ ಮುನ್ನ ಹಿಂದಿರುಗಿಸುವುದಿಲ್ಲ.
ಹೆಚ್ಚಿನ ಮಾಹಿತಿಗೆ ೦೮೩೧-೨೪೨೦೩೪೪ ಅಥವಾ ೯೪೮೦೮೪೧೨೩೩ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button