ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆ ಮತ್ತು ಇಡೀ ರಾಜ್ಯದಲ್ಲಿ ಈಗ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯೇ ಬಿಜೆಪಿಯಲ್ಲಿ ಪವರ್ ಫುಲ್ ಲೀಡರ್.
ಬೆಳಗಾವಿ ಜಿಲ್ಲೆಯ ಎರಡು ಕಡೆ ಸೇರಿದಂತೆ ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನಸೇವಕ ಸಮಾವೇಶವೂ ಸೇರಿದಂತೆ ಇತ್ತೀಚಿನ ಹಲವು ಬೆಳವಣಿಗೆಗಳು ಇದಕ್ಕೆ ಪುಷ್ಠಿ ನೀಡುತ್ತವೆ. ರಮೇಶ್ ಜಾರಕಿಹೊಳಿ ಮುಂದೆ ಬಿಜೆಪಿಯ ಇತರ ನಾಯಕರೆಲ್ಲ ಈಗ ಗೌಣರಾಗುತ್ತಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನಗೊಳಿಸಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ರಮೇಶ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸರಿಸಮಾನ ಎನ್ನುವಂತೆ ರಮೇಶ್ ಜಾರಕಿಹೊಳಿಗೆ ಬೆಲೆ ಸಿಗುತ್ತಿದೆ. ಪರ್ಯಾಯ ಶಕ್ತಿ ಕೇಂದ್ರದ ರೀತಿಯಲ್ಲಿ ಅವರು ಪರಿಗಣಿಸಲ್ಪಡುತ್ತಿದ್ದಾರೆ.
ಮಂತ್ರಿಸ್ಥಾನ ಸೇರಿದಂತೆ ವಿವಿಧ ಹುದ್ದೆಗಳ ಆಕಾಂಕ್ಷಿಗಳು ಕೂಡ ರಮೇಶ ಜಾರಕಿಹೊಳಿ ಮನೆಯ ಕದ ತಟ್ಟುತ್ತಿದ್ದಾರೆ. ಅವರ ಆಶಿರ್ವಾದ ಇದ್ದರೆ ಹುದ್ದೆ ಪಡೆಯುವುದು ಸುಲಭ ಎನ್ನುವ ಭಾವನೆ ಮೂಲ ಬಿಜೆಪಿ ಕಾರ್ಯಕರ್ತರಲ್ಲೂ ಮೂಡಿದೆ. ಹಾಗಾಗಿ ರಮೇಶ್ ಜಾರಕಿಹೊಳಿ ಹೋದಲ್ಲಿ, ಬಂದಲ್ಲಿ ಜನಸಾಗರವೇ ಸೇರುತ್ತದೆ.
ಇದೇ 11ರಿಂದ 13ರ ವರೆಗೆ ರಾಜ್ಯದಲ್ಲಿ ಬಿಜೆಪಿ ಜನಸೇವಕ ಸಮಾವೇಶ ಹಮ್ಮಿಕೊಂಡಿದೆ. ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ನಡೆಯಲಿರುವ ಸಮಾವೇಶ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆಯಲಿವೆ. ”11ರಂದು ಬೆಳಗಾವಿ ಮತ್ತು ಚಿಕ್ಕೋಡಿ, 12ರಂದು ಬಾಗಲಕೋಟೆ ಮತ್ತು ವಿಜಯಪುರ, 1ರಂದು 13ರಂದು ಗದಗ ಮತ್ತು ಧಾರವಾಡದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮತ್ತು ವಸತಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಜನಸೇವಕ ಸಮಾವೇಶ ನಡೆಯಲಿದೆ” ಎಂದು ರಮೇಶ ಜಾರಕಿಹೊಳಿ ಅವರ ಪಿಆರ್ ಒ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ನಡೆಯಲಿರುವ ಸಮಾವೇಶದ ನೇತೃತ್ವ ವಹಿಸುವವರ ಪಟ್ಟಿಯಲ್ಲಿ ಜಿಲ್ಲೆಯವರೇ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಇತರ ಇಬ್ಬರು ಮಂತ್ರಿಗಳಾದ ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ ಅಥವಾ ಇನ್ಯಾವುದೇ ನಾಯಕರ ಹೆಸರಿಲ್ಲ.
ರಮೇಶ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು. ರಾಜ್ಯದ ಪವರ್ ಫುಲ್ ಖಾತೆ ಜಲಸಂಪನ್ಮೂಲ ಇಲಾಖೆ ಅವರ ಕೈಯಲ್ಲಿದೆ. ಹಾಗಾಗಿ ಈಗ ಬಿಜೆಪಿಯ ಮೂಲ ನಾಯಕರು ಕೂಡ ಸರಕಾರದಲ್ಲಿ ಕೆಲಸವಾಗಬೇಕೆಂದರೆ ರಮೇಶ ಜಾರಕಿಹೊಳಿಗೆ ಸಲಾಂ ಹೊಡೆಯುವಂತಾಗಿದೆ. ಇನ್ನೇನು ತಮ್ಮೊಂದಿಗೆ ಬಿಜೆಪಿ ಸೇರಿರುವ 2 -3 ಜನರಿಗೆ ಮಂತ್ರಿಸ್ಥಾನ ಕಲ್ಪಿಸಿಕೊಟ್ಟುಬಿಟ್ಟರೆ ರಮೇಶ್ ಜಾರಕಿಹೊಳಿ ಇನ್ನಷ್ಟು ಪವರ್ ಫುಲ್ ಆಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ