ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಪ್ರಸಕ್ತ ಕಬ್ಬು ಹಂಗಾಮು ಸಮಾರೋಪ ಸಮಾರಂಭ
ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ: “ಬಾದಾಮಿ ತಾಲೂಕಿನ ಭೂಮಿ ಫಲವತ್ತಾಗಿದೆ. ನೀರು ಮತ್ತು ವಿದ್ಯುತ್ ನೀಡಿದರೆ ನಮ್ಮ ರೈತ ಶ್ರಮಪಟ್ಟು ದುಡಿದು ಆರ್ಥಿಕವಾಗಿ ಸದೃಢನಾಗುತ್ತಾನೆ. ಈ ನಿಟ್ಟನಲ್ಲಿ ನಾನು ಕಾರ್ಯೋನ್ಮುಖನಾಗಿದ್ದೇನೆ” ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ಕೆರಕಲಮಟ್ಟಿಯ ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಕೇದಾರನಾಥ, ಎಂ.ಆರ್.ಎನ್ ಹಾಗೂ ಬಾದಾಮಿ ಸಕ್ಕರೆ ಕಾರ್ಖಾನೆಗಳ 2022-23ನೇ ಸಾಲಿನ ಹಂಗಾಮು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
“ಬೀಳಗಿ ಮತಕ್ಷೇತ್ರದಲ್ಲಿ ಶೇ. 100 ನೀರಾವರಿ ಮಾಡುವುದು ನನ್ನ ಕನಸಾಗಿತ್ತು. ಅದರಂತೆ ಕಳೆದ 20 ವರ್ಷಗಳಲ್ಲಿ ಮತಕ್ಷೇತ್ರಕ್ಕೆ ತಂದ ನೀರಾವರಿ ಯೋಜನೆಗಳ ಮೂಲಕ ಅದು ಸಾಕಾರಗೊಳ್ಳುತ್ತ ಸಾಗಿದೆ. ಮುಂದಿನ 2 ವರ್ಷಗಳಲ್ಲಿ ಎಲ್ಲ ಯೋಜನೆಗಳು ಪೂರ್ಣಗೊಂಡು ಪೂರ್ಣಫಲ ಮತಕ್ಷೇತ್ರಕ್ಕೆ ದೊರೆಯಲಿದೆ. ಅದರೊಡನೆ ಮುಂದಿನ 20 ವರ್ಷಗಳ ಅವಧಿಗೆ ಕೊರತೆಯಾಗದಂತೆ ವಿದ್ಯುತ್ ದೊರೆಯುವಂತೆ ನಮ್ಮ ಮತಕ್ಷೇತ್ರದ ವಿದ್ಯುತ್ ಪ್ರಸರಣ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಕಾಮಗಾರಿಗಳು ನಡೆಯುತ್ತಿವೆ. ರೈತ ಆಕಾಶದೆಡೆ ಮುಖ ಮಾಡಿ ಚಿಂತಿಸುವ ಬದುಲು ಭೂಮಿಯಡೆಗೆ ಮುಖಮಾಡಿ ದುಡಿಮೆ ಮಾಡಿ ಸುಸ್ಥಿರನಾಗುವಂತೆ ಆಗಬೇಕು ಹೀಗಾಗಿ ಕೃಷಿ, ನೀರಾವರಿಗೆ ನನ್ನ ಆದ್ಯತೆ ನೀಡಿದ್ದೇನೆ” ಎಂದರು.
“ಶಿಕ್ಷಣ, ರಸ್ತೆ, ಆರೋಗ್ಯ, ಮೂಲಭೂತ ಸೌಕರ್ಯ, ಕುಡಿಯುವ ನೀರು ಎಲ್ಲ ವಿಭಾಗಗಳಲ್ಲಿಯೂ ಬೀಳಗಿ ಮತಕ್ಷೇತ್ರ ಅಭಿವೃದ್ಧಿಯಡೆಗೆ ಸಾಗುತ್ತಿದೆ. ಹಲಕುರ್ಕಿಯಲ್ಲಿ ವಿಮಾನ ನಿಲ್ದಾಣ ಹಾಗೂ 25 ಸಾವಿರ ಕೋಟಿ ವೆಚ್ಚದ ಕೈಗಾರಿಕಾ ಕಾರಿಡಾರ್ ನಿರ್ಮಾಣವಾಗಲಿದ್ದು 25-30 ಸಾವಿರ ಹೊಸ ಉದ್ಯೋಗ ಸೃಷ್ಟಿಯಾಗಲಿವೆ. ಮುಚ್ಚಿದ್ದ ಈ ಕಾರ್ಖಾನೆ ಮುರು ಪ್ರಾರಂಭವಾದ್ದರಿಂದ ಈ ಭಾಗದ ರೈತರಿಗೆ ಅನುಕೂಲವಾಗುವ ಜೊತೆಗೆ ಸ್ಥಳೀಯ ಯುವಕರಿಗೆ ಉದ್ಯೋಗ ದೊರೆತಿದೆ. ನಿರಾಣಿ ಸಮೂಹ ಈಗ ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ದ್ವಿತೀಯ ಹಾಗೂ ಇಥೆನಾಲ್ ಉತ್ಪಾದಲ್ಲಿಯೇ ಏಷಿಯಾದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ಬೆಳವಣಿಗೆಗೆ ಈ ಭಾಗದ ರೈತ ಕುಟುಂಬಗಳ ಆಶಿರ್ವಾದವೇ ಕಾರಣ” ಎಂದು ಅವರು ಹೇಳಿದರು.
ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಜಿಪಂ ಅಧ್ಯಕ್ಷ ಹೂವಪ್ಪ ರಾಠೋಡ್, ಹಿರಿಯ ಮುಖಂಡರಾದ ಆರ್.ಆರ್.ನಾಯ್ಕ್, ಆನಂದ ದೇಸಾಯಿ, ಬಿಜೆಪಿ ಬೀಳಗಿ ಮಂಡಲ ಅಧ್ಯಕ್ಷ ಈರಣ್ಣ ಗಿಡ್ಡಪ್ಪನವರ ಮಾತನಾಡಿದರು. ಕಬ್ಬು ವಿಭಾಗದ ಮುಖ್ಯಸ್ಥ ಕಾಂಡೇಕರ್ ಸ್ವಾಗತಿಸಿದರು. ಮಹೇಂದ್ರ ಪಾಟೀಲ ವಂದಿಸಿದರು. ಗಿರೀಶ ಸುನಗದ, ಹಣಮಂತಗೌಡ ಪಾಟೀಲ, ಕೃಷ್ಣಗೌಡ ನಾಡಗೌಡ, ಸುರೇಶ ಕೊಳ್ಳಿ, ಬಶೆಟ್ಟಿ ಅಂಗಡಿ, ಸಂಗಯ್ಯ ಸರಗಣಾಚಾರಿ, ಮಹಾದೇವಪ್ಪ ಪಟ್ಟಣಶೆಟ್ಟಿ, ರಾಮಣ್ಣ ಕಾಳಪ್ಪಗೋಳ, ಪ್ರವೀಣ ಅರಕೇರಿ, ಹಣಮಂತ ಆರ್. ಪಾಟೀಲ, ಮಲ್ಲಪ್ಪ ಹೆರಕಲ್, ಹಣಮಂತ ಗೋಡಿ ಪ್ರಮುಖರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ