Latest

ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 74.83ರಷ್ಟು ಮತದಾನ

ಮೊದಲನೇ ಹಂತದ ಗ್ರಾಪಂ ಚುನಾವಣೆ

ಪ್ರಗತಿವಾಹಿನಿ ಸುದ್ದಿ, ಕಾರವಾರ  : ಉತ್ತರ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ಮಂಗಳವಾರ ನಡೆದ ಮೊದಲನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು ೩,೩೩,೨೭೮ ಮಂದಿ ಮತದಾನದ ಹಕ್ಕು ಚಲಾಯಿಸಿದ್ದು, ಶೇ. ೭೪.೮೩ರಷ್ಟು ಮತದಾನ ದಾಖಲಾಗಿದೆ.

ಹೊನ್ನಾವರ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ. ೭೬.೧೭ ರಷ್ಟು ಮತದಾನವಾಗಿದ್ದು, ಅಂಕೋಲಾದಲ್ಲಿ ಶೇ. ೭೫.೮೪ ರಷ್ಟು ಮತದಾನ ದಾಖಲಾಗಿದೆ. ಇನ್ನುಳಿದಂತೆ ಕುಮಟಾ ಶೇ. ೭೫.೦೩, ಭಟ್ಕಳ ಶೇ. ೭೪.೬೩ ರಷ್ಟು ಹಾಗೂ ಕಾರವಾರ ಶೇ. ೭೧.೨೨ ರಷ್ಟು ಮತದಾನ ಆಗಿದೆ. ವಿವಿಧ ಗ್ರಾಮಗಳಲ್ಲಿ ಬೆಳಗ್ಗೆ ೭ ರಿಂದಲೇ ಶಾಂತಿಯುತ ಹಾಗೂ ಉತ್ಸಾಹದಿಂದ ಮತದಾನ ನಡೆದಿದ್ದು, ಹಂತ ಹಂತವಾಗಿ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನಕ್ಕೆ ಹೆಚ್ಚಿನ ಉತ್ಸಾಹ ತೋರಿದ್ದಾರೆ. ೯ ಗಂಟೆ ಹೊತ್ತಿಗೆ ಶೇ. ೧೦.೦೨ರಷ್ಟು, ೧೧ ಗಂಟೆ ಹೊತ್ತಿಗೆ ಶೇ. ೨೫.೦೮ರಷ್ಟು, ಮಧ್ಯಾಹ್ನ ೧ ಗಂಟೆಗೆ ಶೇ. ೪೨.೮೩ರಷ್ಟು, ೩ ಗಂಟೆಗೆ ಶೇ. ೫೫.೭೭ರಷ್ಟು ಮತ್ತು ಸಂಜೆ ೫ ಗಂಟೆಯ ಅಂತಿಮ ಹಂತದ ವೇಳೆಗೆ ಶೇ. ೭೪.೮೩ ರಷ್ಟು ಮತದಾನವಾಗಿದೆ.

ಜಿಲ್ಲೆಯ ೫ ತಾಲೂಕುಗಳಲ್ಲಿ ೨,೨೪,೦೮೦ ಪುರುಷರು, ೨,೨೧,೮೦೧ ಮಹಿಳೆಯರು ಸೇರಿದಂತೆ ಒಟ್ಟು ೪,೪೫.೮೮೧ ಮತದಾರರಿದ್ದಾರೆ. ಡಿಸೆಂಬರ್ ೨೨ ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಈ ೫ ತಾಲೂಕುಗಳಲ್ಲಿ ಅಂದರೆ ಕಾರವಾರ ೨೪,೪೭೨ ಪುರುಷರು, ೨೪,೭೪೬ ಮಹಿಳೆಯರು ಸೇರಿ ೪೯,೨೧೮ ಜನ ಮತ ಚಲಾಯಿಸಿದ್ದಾರೆ. ಅದರಂತೆ ಅಂಕೋಲಾ ೨೮,೪೪೮ ಪುರುಷರು, ೨೮,೧೭೫ ಮಹಿಳೆಯರು ಸೇರಿ ೫೬,೬೨೩, ಕುಮಟಾ ೪೦,೦೨೭ ಪುರುಷರು, ೩೯,೪೩೨ ಮಹಿಳೆಯರು ಸೇರಿ ೭೯,೪೫೯, ಹೊನ್ನಾವರ ೪೦,೦೨೯ ಪುರುಷರು, ೩೯,೫೭೧ ಮಹಿಳೆಯರು ಸೇರಿ ೭೯,೬೦೦ ಹಾಗೂ ಭಟ್ಕಳದಲ್ಲಿ ೩೩,೫೯೫ ಪುರುಷರು, ೩೪,೭೮೩ ಮಹಿಳೆಯರು ಸೇರಿ ೬೮,೩೭೮ ಮತದಾರರು ಮತ ಚಲಾಯಿಸುವ ಮೂಲಕ ೫ ತಾಲೂಕುಗಳಲ್ಲಿ ಒಟ್ಟಾರೆಯಾಗಿ ೩,೩೩,೨೭೮ ಮಂದಿ ಮತದಾನ ಮಾಡಿದ್ದಾರೆ.

ಉತ್ಸಾಹ ತೋರಿದ ಮತದಾರ ಪ್ರಭು

ಜಿಲ್ಲೆ ಐದು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನಡೆದ ಚುನಾವಣೆಯನ್ನು, ಚುನಾವಣಾ ಆಯೋಗ ಸೂಚನೆಯಂತೆ ಜಿಲ್ಲಾಡಳಿತವು ಕೋವಿಡ್-೧೯ಗೆ ಸಂಬಂಧಿಸಿದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶಾಂತಿಯುತವಾಗಿ ಮತದಾನ ಪ್ರಕ್ರಿಯೆಯನ್ನು ನಡೆಸಿತು. ಅಸಕ್ತರಿಗೆ ಮತ ಚಲಾಯಿಸಲು ಅನಕೂಲವಾಗುವಂತೆ ವ್ಹೀಲ್‌ಚೇರ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಯುವಕರು, ಯುವತಿಯರು, ಮಹಿಳೆಯರು, ವೃದ್ಧರು, ವಿಕಲಚೇತನರು ಮತ್ತು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಸೇರಿದಂತೆ ಮತದಾನ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂಧಿ ಮಾಸ್ಕ್ ಧರಿಸಿ, ಕೈಗೆ ಸ್ಯಾನಿಟೈಸರ್ ಮಾಡಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು. ಪೋಲಿಸರು ಮತದಾನ ಕೇಂದ್ರದ ಸುತ್ತ-ಮುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದರು.

ಶಾಂತಿಯುತ ಮತದಾನ :

ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವuಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ಸಂಪೂರ್ಣ ಶಾಂತಿಯುತವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಡಾ. ಹರೀಶಕುಮಾರ ಕೆ. ಅವರು ತಿಳಿಸಿದ್ದಾರೆ.

ವ್ಯವಸ್ಥಿತವಾಗಿ ಗ್ರಾಮ ಪಂಚಾಯತ್ ಚುನಾವಣೆ ನಡೆದಿದ್ದು, ಜನರು ಹೆಚ್ಚು ಆಸಕ್ತಿಯಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಎಲ್ಲಾ ಸಾರ್ವಜನಿಕರಿಗೆ, ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಿಕೊಟ್ಟ ಎಲ್ಲಾ ಚುನಾವಣಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ, ಜಿಲ್ಲಾಧಿಕಾರಿ ಅವರು ಧನ್ಯವಾದ ಸಲ್ಲಿಸಿ, ಎರಡನೆ ಹಂತದ ಚುನಾಣೆಗೂ ಇದೇ ರೀತಿ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.

ಮತ ಎಣಿಕೆ ಕಾರ್ಯ ಡಿ. ೩೦ ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಅಲ್ಲಿಯವರೆಗೂ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮತಪೆಟ್ಟಿಗೆಗಳನ್ನು ತಾಲೂಕು ಕೇಂದ್ರದ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button