ಇನ್ನೆರಡು ದಿನಗಳಲ್ಲಿ ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ – ಮಂಗಲಾ ಅಂಗಡಿ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಕೇಂದ್ರ ಸಚಿವರಾಗಿದ್ದ ದಿ. ಸುರೇಶ ಅಂಗಡಿಯವರು ಬೆಳಗಾವಿ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ವಿನೂತನ ಯೋಜನೆಗಳನ್ನು ಅನುಷ್ಠಾನ ಮಾಡಿದ್ದರು. ವಿಧಿಯಾಟದಿಂದ ಅವರನ್ನು ನಾವಿಂದು ಕಳೆದುಕೊಂಡಿದ್ದು ಅವರು ಬಿಟ್ಟು ಹೋದ ಹಲವಾರು ಕಾರ್ಯಕ್ರಮಗಳು ನಮ್ಮನ್ನು ಇನ್ನೂ ಸೆಳೆಯುತ್ತಲಿವೆ. ದಿ. ಅಂಗಡಿ ಅವರ ಹಾಗೂ ಬಿಜೆಪಿ ಸರಕಾರಗಳ ಸಾಧನೆಗಳನ್ನು ಗುರುತಿಸಿ ತಮ್ಮನ್ನು ಲೋಕಸಭೆಗೆ ಚುನಾಯಿಸುವಂತೆ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರು ಮನವಿ ಮಾಡಿಕೊಂಡರು.
ಇಲ್ಲಿಯ ಶಿವಬೋಧರಂಗ ಬ್ಯಾಕಿನ ಸಭಾಂಗಣದಲ್ಲಿ ಗುರುವಾರ ಸಂಜೆ ಜರುಗಿದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.
ಸುರೇಶ ಅಂಗಡಿಯವರಿ ಮೊದಲಿನಿಂದಲು ಕಾರ್ಯಕರ್ತರ ಪಡೆಯನ್ನು ಹೊಂದಿ ಜನಪರ ವ್ಯಕ್ತಿತ್ವವನ್ನು ರೂಡಿಸಿಕೊಂಡಿದ್ದರು. ೨೦೦೪ ರಿಂದ ಬೆಳಗಾವಿ ಲೋಕಸಭಾ ಸದಸ್ಯರಾಗಿ ಸಮಗ್ರ ಪ್ರಗತಿಗೆ ಶ್ರಮಿಸಿದ್ದರು. ಅಲ್ಲದೆ ನರೇಂದ್ರ ಮೋದಿಯವರ ಸಂಪುಟದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ನಿಯೋಕ್ತಿಗೊಂಡರು. ಪಕ್ಷ ಹಾಗೂ ಜನರ ಸೇವೆಯನ್ನು ಮಾಡಿಕೊಂಡು ಜನಮೆಚ್ಚಿದ ಸಂಸದರು ಎಂಬ ಖ್ಯಾತಿಗೆ ಒಳಗಾದರು. ಕೋವಿಡ್ ಸಮಯದಲ್ಲಿ ಎಷ್ಟೋ ಸಾರಿ ಹೇಳಿದರೂ ಪಕ್ಷ ಹಾಗೂ ಸರಕಾರದ ಕೆಲಸದಲ್ಲಿ ತೊಡಗಿಸಿಕೊಂಡು ತಮ್ಮ ಆರೋಗ್ಯದ ಕಡೆಗೆ ಗಮನ ನೀಡಲಿಲ್ಲ. ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋದವರು ಮರಳಿ ಬರಲಿಲ್ಲ. ಕೊರೋನಾ ತುತ್ತಿಗೆ ಬಲಿಯಾದರು. ಇವರ ಆತ್ಮಕ್ಕೆ ಶಾಂತಿ ದೊರೆಯಲು ನಿಮ್ಮ ಮನೆ ಮಗಳಾದ ನನಗೆ ತಮ್ಮ ಅಮೂಲ್ಯ ಮತ ನೀಡಿ ಸುರೇಶ ಅಂಗಡಿಯವರ ಅಧಿಕಾರದಲ್ಲಿದ್ದಾಗಿನ ಕಾಮಗಾರಿಗಳು ಪೂರ್ಣಗೊಳ್ಳಲು ಅವಕಾಶ ಮಾಡಿಕೊಡುವಂತೆ ಅವರು ಮನವಿ ಮಾಡಿದರು.
ಗೋಕಾಕ ಹಾಗೂ ಅರಭಾಂವಿ ವಿಧಾನ ಸಭಾ ಮತ ಕ್ರೇತ್ರಗಳಲ್ಲಿ ತಮಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಕೈ ಬಲ ಪಡಿಸಲು ಜನ ಸೇವೆಗೆ ಆಶೀರ್ವಾದ ಮಾಡಬೇಕು. ಕೆಲ ಕಾರಣಾಂತರಗಳಿಂದ ಮಾಚಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿಲ್ಲ. ಅವರು ಈಗಾಗಲೇ ತಮ್ಮ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದು ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಇದರಿಂದ ನಮಗೆ ಆನೆ ಬಲ ಬಂದಂತಾಗಿದೆ. ಇನ್ನೆರಡು ದಿನಗಳಲ್ಲಿ ಹಿರಿಯ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆಂದು ಅವರು ಕಾರ್ಯಕರ್ತರಿಗೆ ವಿಶ್ವಾಸ ತುಂಬಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಮೇ ೧೭ ರಂದು ನಡೆಯುವ ಲೋಕಸಭಾ ಉಪಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಲು ಬಿಜೆಪಿ ಮತ ನೀಡಿ ಕಾಂಗ್ರೇಸ್ ಅಭ್ಯರ್ಥಿಗೆ ಮತ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಕಾಂಗ್ರೇಸ್ ಪಕ್ಷ ಕೇವಲ ೪೫ ಸ್ಥಾನಗಳನ್ನು ಮಾತ್ರ ಹೊಂದಿದ್ದು ನಮ್ಮ ಪಕ್ಷ ಮೂನ್ನೂರು ಸ್ಥಾನಗಳನ್ನು ಹೊಂದಿದೆ ಎಂದು ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ಪರವಾಗಿದ್ದು ರೈತರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಮತಗಳ ಮುನ್ನಡೆ ದೊರಕಿಸಿಕೊಡಲು ಕಾರ್ಯಕರ್ತರು ಶ್ರಮಿಸಬೇಕೆಂದು ಅವರು ಕೋರಿದರು.
ವೇದಿಕೆಯಲ್ಲಿ ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಮಹದೇವ ಶೆಕ್ಕಿ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ ಪಠಾಣ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಸುಭಾಸ ಪಾಟೀಲ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ದಾಸಪ್ಪ ನಾಯಿಕ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಈರಣ್ಣ ಅಂಗಡಿ, ಪ್ರಕಾಶ ಮಾದರ, ಶೇಖರರೆಡ್ಡಿ, ನವಿನಕುಮಾರ, ಕೃಷ್ಣಮೂರ್ತಿ ಬಿಜೆಪಿ ಪದಾಧಿಕಾರಿಗಳು, ಪುರಸಭೆ ಸದಸ್ಯರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಾಲಚಂದ್ರ ಜಾರಕಿಹೊಳಿ ಕ್ಷೇತ್ರದಲ್ಲಿ ಮಂಗಲಾ ಅಂಗಡಿ ಪ್ರಚಾರ
ರಾಜ್ಯದ 8 ಜಿಲ್ಲೆಗಳಲ್ಲಿ ಕೊರೋನಾ ಕರ್ಫ್ಯೂ ಸಾಧ್ಯತೆ
ಬೆಳಗಾವಿ ಗೆಲ್ಲೋದಕ್ಕೆ ಕಾಂಗ್ರೆಸ್ ತಂತ್ರಗಾರಿಕೆ; ರಾತ್ರಿ ನಡೆದ ಮಹತ್ವದ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ