ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬಿಜೆಪಿ ಮಾಜಿ ಶಾಸಕರಾದ ಕೊಳ್ಳೇಗಾಲದ ನಂಜುಂಡಸ್ವಾಮಿ, ವಿಜಯಪುರದ ಮನೋಹರ ಐನಾಪುರ ಹಾಗೂ ಮೈಸೂರು ಮಾಜಿ ಮೇಯರ್ ಪುರುಷೋತ್ತಮ್ ಅವರು ತಮ್ಮ ಬೆಂಬಲಿಗರ ಜತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ್, ಸಲೀಮ್ ಅಹ್ಮದ್, ಕೆಪಿಸಿಸಿ ಸಂವಹನ ಮತ್ತು ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಮಾಜಿ ಶಾಸಕ ಬಾಲರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪಕ್ಷ ಸೇರ್ಪಡೆ ಕಾರ್ಯಕ್ರಮ ಹಾಗೂ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:
ಕೊಳ್ಳೆಗಾಲದ ಮಾಜಿ ಶಾಸಕರಾದ ನಂಜುಂಡಸ್ವಾಮಿ, ಬಿಜಾಪುರದ ಮಾಜಿ ಶಾಸಕರಾದ ಮನೋಹರ್ ಐನಾಪುರ ಅವರು ಇಂದು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಮೈಸೂರಿನ ಮಾಜಿ ಮೇಯರ್ ಹಾಗೂ ಬಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಅವರು ಕೂಡ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಈ ಮೂವರು ನಾಯಕರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ.
ಈ ಮೂವರು ನಾಯಕರು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು ಬೇಷರತ್ ಪಕ್ಷಕ್ಕೆ ಸೇರುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಅನ್ಯ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಅವರಿಗೆ ಅನುಮತಿ ನೀಡಿದ್ದೇವೆ. ಕೆಲವು ಪ್ರಮುಖ ನಾಯಕರನ್ನು ಮಾತ್ರ ಈ ಪಕ್ಷದ ಕಚೇರಿಯಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತಿದೆ. ನಮ್ಮ ಈ ಹಿಂದಿನ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲುವ ವರದಿ ಇತ್ತು. ಈಗಿನ ವರದಿಗಳಲ್ಲಿ ಇದು 140 ರ ಗಡಿ ದಾಟಿದೆ. ಸೇವಾ ಮನೋಭಾವ, ಸಿದ್ಧಾಂತ ನಮ್ಮ ಪಕ್ಷದಲ್ಲಿ ಎದ್ದು ಕಾಣುತ್ತಿದೆ.
ರಾಜ್ಯ ಚುನಾವಣೆಗೆ ಇನ್ನು 50 ದಿನಗಳು ಮಾತ್ರ ಇವೆ. ಗುಜರಾತ್ ಚುನಾವಣೆ ನಂತರ ಬಿಜೆಪಿಯವರು ರಾಜ್ಯದಲ್ಲಿ ಬಹಳ ತರಾತುರಿಯಲ್ಲಿ ಚುನಾವಣೆ ಮಾಡಲು ಅಧಿಕಾರಿಗಳ ಜತೆ ಸಭೆ ಮಾಡಿ ದಿನಾಂಕ ನಿಗದಿ ಮಾಡಿದ್ದರು. ಆದರೆ ಈಗ ಪ್ರತಿ ದಿನ ತರಾತುರಿಯಲ್ಲಿ ಅಲ್ಪಾವಧಿಯ ಟೆಂಡರ್ ಮೂಲಕ ಅಕ್ರಮ ಹಣ ಕ್ರೋಢೀಕರಣ ಮಾಡುತ್ತಿದ್ದಾರೆ. ಇದಕ್ಕಾಗಿ ಅವರೇ ನಿಗದಿ ಮಾಡಿದ್ದ ದಿನಾಂಕವನ್ನು ಮುಂದೂಡುತ್ತಿದ್ದಾರೆ. ಈ ವಿಚಾರವಾಗಿ ನಾವೆಲ್ಲ ನಾಯಕರು ಚರ್ಚೆ ಮಾಡಿ ಸರ್ಕಾರಕ್ಕೆ ನಮ್ಮ ನಿಲುವು ತಿಳಿಸುತ್ತೇವೆ.
ದಿನನಿತ್ಯ ಬಿಜೆಪಿಗೆ ಆಘಾತಕಾರಿ ಸುದ್ದಿ ಬರುತ್ತಿದೆ. ರಾಷ್ಟ್ರೀಯ ನಾಯಕರು ನೆರೆ, ಕೋವಿಡ್ ಸಮಯದಲ್ಲಿ ರಾಜ್ಯಕ್ಕೆ ಬರಲಿಲ್ಲ. ಕೇವಲ ಮತ ಕೇಳಲು ಬರುತ್ತಿದ್ದಾರೆ. ಜನರ ಕಷ್ಟ, ಅಭಿವೃದ್ಧಿ ಅವರಿಗೆ ಆದ್ಯತೆಯಾಗಿಲ್ಲ. ಚುನಾವಣೆಯಲ್ಲಿ ಮತಗಳಿಸುವುದಷ್ಟೇ ಅವರ ಆದ್ಯತೆಯಾಗಿದೆ. ನಾವು ಚುನಾವಣೆಗೆ ಸದಾ ಸಿದ್ಧವಾಗಿದ್ದೇವೆ. ಚುನಾವಣಾ ಆಯೋಗ ಕೂಡಲೇ ಚುನಾವಣಾ ದಿನಾಂಕ ನಿಗದಿ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ತಡೆಯಬೇಕು. ಮುಂದಿನ ಕೆಲ ದಿನಗಳಲ್ಲಿ ನಾವು ಹಾಲಿ ಶಾಸಕರ ಪಟ್ಟಿ ಬಿಡುಗಡೆ ಮಾಡಲು ಚರ್ಚೆ ಮಾಡುತ್ತಿದ್ದೇವೆ.
ಕೇಂದ್ರದ ಗೃಹಮಂತ್ರಿ ಅಮಿತ್ ಶಾ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬದಲಾವಣೆಯ ಪರ್ವ ರಾಜ್ಯದಲ್ಲಿ ಆರಂಭವಾಗಿದೆ. ನಮ್ಮ ನಾಯಕರ ರಾಜ್ಯ ಪ್ರವಾಸದ ಕಾರ್ಯಕ್ರಮದಲ್ಲಿ ಜನ ಪ್ರವಾಹದಂತೆ ಹರಿದು ಬರುತ್ತಿರುವುದೇ ಇದಕ್ಕೆ ಸಾಕ್ಷಿ.
ಮುಖ್ಯಮಂತ್ರಿಗಳು ಚರ್ಚೆಗೆ ಬರಲಿ:
ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಗೃಹ ಜ್ಯೋತಿಯನ್ನು ಮುಖ್ಯಮಂತ್ರಿಗಳು ಬೋಗಸ್ ಯೋಜನೆ ಎಂದು ಕರೆದಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಮಾಧ್ಯಮ ವೇದಿಕೆಯಾದರೂ ಸರಿ, ಬಹರಂಗ ವೇದಿಕೆಯಾದರೂ ಸರಿ ಮುಖ್ಯಮಂತ್ರಿಗಳು ಚರ್ಚೆಗೆ ಬರಲಿ.
ನಾನು ನಾಲ್ಕೂವರೆ ವರ್ಷಗಳ ಕಾಲ ಇಂಧನ ಸಚಿವನಾಗಿದ್ದೆ. ರಾಜ್ಯದಲ್ಲಿ 10 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ನನ್ನ ಅವಧಿಯಲ್ಲಿ 20 ಸಾವಿರ ಮೆ.ವ್ಯಾಟ್ ಗೆ ಏರಿಸಲಾಗಿತ್ತು. ನಮ್ಮ ಸರ್ಕಾರದ ಸಾಧನೆ ಫಲವಾಗಿ ರಾಜ್ಯ ಸರ್ಕಾರ ಹೆಚ್ಚುವರಿ ವಿದ್ಯುತ್ ಮಾರಾಟದಿಂದ 3 ಸಾವಿರಕ್ಕೂ ಹೆಚ್ಚು ಕೋಟಿ ಆದಾಯ ಪಡೆಯುತ್ತಿದೆ. ರಾಜ್ಯಪಾಲರ ಭಾಷಣದಲ್ಲಿ ಈ ಅಂಶ ಉಲ್ಲೇಖವಾಗಿದೆ. ಇನ್ನು ಬಿಜೆಪಿ ಸರ್ಕಾರ 2018ರ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ನೀಡುವ ವಿದ್ಯುತ್ ಅನ್ನು 7 ಗಂಟೆಯಿಂದ 10 ಗಂಟೆಗೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದರು. ಇದರಿಂದ 6 ಸಾವಿರ ಕೋಟಿ ವೆಚ್ಚ ತಗಲುತ್ತದೆ. ಅವರು ಯಾವ ಲೆಕ್ಕದಲ್ಲಿ ಈ ಭರವಸೆ ನೀಡಿದ್ದರು. ಬಿಜೆಪಿ ಕೊಟ್ಟ 600 ಭರವಸೆಗಳಲ್ಲಿ 550 ಭರವಸೆ ಈಡೇರಿಸಿಲ್ಲ. ಈ ಬಗ್ಗೆ ದಿನನಿತ್ಯ ಪ್ರಶ್ನೆ ಕೇಳುತ್ತಿದ್ದರೂ ಅವರು ಒಂದಕ್ಕೂ ಉತ್ತರ ನೀಡುತ್ತಿಲ್ಲ.
ಇನ್ನು ಕೇಂದ್ರ ಇಂಧನ ಸಚಿವರು ವಿದ್ಯುತ್ ಇಲಾಖೆಯನ್ನು ಖಾಸಗಿಕರಣ ಮಾಡುವುದಾಗಿ ಚರ್ಚೆ ಮಾಡಿದ್ದಾರೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಇನ್ನು 120 ತಾಲೂಕುಗಳಲ್ಲಿ ಸೋಲಾರ್ ಪಾರ್ಕ್ ಮಾಡಿ ವಿದ್ಯುತ್ ವರ್ಗಾವಣೆ ನಷ್ಟವನ್ನು ತಗ್ಗಿಸಿದ್ದೇವೆ. ಆಮೂಲಕ ದೇಶಕ್ಕೆ ಮಾದರಿಯಾಗಿದ್ದೇವೆ. ಕೇಂದ್ರದ ಸಚಿವಾಲಯದ ಪ್ರತಿ ಸಭೆಯಲ್ಲಿ ಕರ್ನಾಟಕ ಮಾದರಿ ಅನುಸರಿಸುವಂತೆ ಉಲ್ಲೇಖ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಗೃಹಜ್ಯೋತಿ ಯೋಜನೆಯನ್ನು ನಾವು ಜಾರಿ ಮಾಡದಿದ್ದರೆ ನಾನು, ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್ ಅವರು ರಾಜಕಾರಣದಲ್ಲಿ ಮುಂದುವರಿಯುವುದಿಲ್ಲ. ಕಾಂಗ್ರೆಸ್ ಪಕ್ಷದ ವತಿಯಿಂದ 200 ಯುನಿಟ್ ವಿದ್ಯುತ್ ಉಚಿತ, ಮನೆಯೊಡತಿಗೆ 2 ಸಾವಿರ ಖಚಿತ ಹಾಗೂ 10 ಕೆ.ಜಿ ಅಕ್ಕಿ ನಿಶ್ಚಿತ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ