ಅಸಮರ್ಪಕ ವಿದ್ಯುತ್ ಪೂರೈಕೆ : ಜೊಲ್ಲೆ ನೇತೃತ್ವದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಅಸಮರ್ಪಕ ವಿದ್ಯುತ್ ಪೂರೈಕೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಿಕ್ಕೋಡಿಯಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಚಿಕ್ಕೋಡಿ ಪಟ್ಟಣದ ಬಿಜೆಪಿ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನೆ ಬಸವ ವೃತ್ತಕ್ಕೆ ಬಂದು ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದರು.
ಈ ಸಂಧರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ತತ್ತರಿಸಿಹೋಗಿದ್ದಾರೆ. ರೈತರು ಬೆಳೆದ ಬೆಳೆಗಳು ಒಣಗಿಹೋಗುತ್ತಿವೆ. ಸದ್ಯ ನೀಡುತ್ತಿರುವ ವಿದ್ಯುತ್ ಸಾಲುವುದಿಲ್ಲ. ಈ ಹಿನ್ನೆಲೆಯಲ್ಲಿ ೭ ಗಂಟೆಗಳ ಕಾಲ ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು. ಅದಲ್ಲದೇ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಸಹ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.
ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸುಳ್ಳು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ಸದ್ಯ ಕರ್ನಾಟಕವನ್ನು ಕತ್ತಲಿನಲ್ಲಿ ದೂಡಿದೆ. ಕಳೆದ ೨ ತಿಂಗಳಿನಿಂದ ಕೇವಲ ಒಂದೆರಡು ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದು ಜನರಿಗೆ ಕಾಂಗ್ರೇಸ್ ಸರ್ಕಾರ ಮೋಸ ಮಾಡಿದೆ. ಹೀಗಾಗಿ ರೈತರು ಬೆಳೆದ ಬೆಳೆಗಳು ಒಣಗಿಹೋಗುತ್ತಿವೆ. ಉತ್ತರ ಕರ್ನಾಟಕದ ಭಾಗವಾದ ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಜುಲೈ ತಿಂಗಳಿನಲ್ಲಿ ಮಾತ್ರ ಮಳೆಯಾಗಿದ್ದು ಮಳೆ ವಂಚಿತ ಜಿಲ್ಲೆಯನ್ನು ಬರಗಾಲ ಎಂದು ಘೋಷಣೆ ಮಾಡಲು ಕಾಂಗ್ರೇಸ್ ಸರ್ಕಾರಕ್ಕೆ ೩ ತಿಂಗಳು ಬೇಕಾಯಿತು ಎಂದರು.
ಶಾಸಕರಾದ ಶಶಿಕಲಾ ಜೊಲ್ಲೆ, ದುರ್ಯೋಧನ ಐಹೊಳೆ ಮಾತನಾಡಿ, ರೈತರಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಸರ್ಕಾರದ ಬೊಕ್ಕಸ ಖಾಲಿ ಮಾಡುತ್ತಿದ್ದು, ವಿದ್ಯುತ್ ಖರೀದಿಗೂ ಆಗುತ್ತಿಲ್ಲ ಎಂದು ಕಾಂಗ್ರೇಸ್ ಸರ್ಕಾರದ ವಿರುದ್ದ ಹರಿಹಾಯ್ದರು.
ಬಳಿಕ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಉಪವಿಭಾಗಧಿಕಾರಿ ಸುಭಾಶ ಸಂಪಗಾವಿ ಹಾಗೂ ಹೆಸ್ಕಾಂ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರ ಮನವಿಯನ್ನು ಸ್ವೀಕರಿಸಿದರು.
ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ ನೆರ್ಲಿ, ಮಂಡಲದ ಅಧ್ಯಕ್ಷ ಸಂಜಯ ಪಾಟಿಲ, ಚಿದಾನಂದ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಭರತೇಶ ಬನವಣೆ, ಅಜೀತ ದೇಸಾಯಿ, ರೈತ ರಾಜ್ಯ ಮೊರ್ಚಾದ ಉಪಾಧ್ಯಕ್ಷ ದುಂಡಪ್ಪ ಭೆಂಡವಾಡೆ, ರವಿ ಹಂಜಿ, ಸತೀಶ ಅಪ್ಪಾಜಿಗೋಳ, ಮಹೇಶ ಭಾತೆ, ಬಸವರಾಜ ಡೊಣವಾಡೆ, ಬಂಡಾ ಘೋರ್ಪಡೆ, ಜಯವಂತ ಭಾಟಲೆ, ಸುರೇಶ ಬೆಲ್ಲದ, ಶಾಂಭವಿ ಅಶ್ವಪೂರ, ಶಕುಂತಲಾ ಡೊಣವಾಡೆ, ರಾಜು ಹರಗಾಪೂರೆ, ಸಂಜು ಅರಗೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ