ಲಕ್ಷ್ಮೀತಾಯಿ ಸೌಹಾರ್ದ ಸಹಕಾರ ಸಂಸ್ಥೆಯ 7ನೇ ಶಾಖೆಯ ಉದ್ಘಾಟನೆ
ಠೇವಣಿದಾರರನ್ನು, ಸಾಲಗಾರರನ್ನು ಸಮಾನವಾಗಿ ಗೌರವಿಸಿದಾಗ ಸಂಸ್ಥೆಯ ಬೆಳವಣಿಗೆ ಸಾಧ್ಯ – ಬಾಬಾಸಾಹೇಬ ಪಾಟೀಲ
ಪ್ರಗತಿವಾಹಿನಿ ಸುದ್ದಿ, ಎಂ.ಕೆ.ಹುಬ್ಬಳ್ಳಿ – ಠೇವಣಿದಾರರನ್ನು ಮತ್ತು ಸಾಲಗಾರರನ್ನು ಸಮಾನವಾಗಿ ಗೌರವಿಸಿದಾಗ ಮಾತ್ರ ಸಂಸ್ಥೆ ಬೆಳವಣಿಗೆ ಹೊಂದಲು ಸಾಧ್ಯ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದ್ದಾರೆ.
ಎಂ.ಕೆ.ಹುಬ್ಬಳ್ಳಿಯಲ್ಲಿ ಸೋಮವಾರ ಲಕ್ಷ್ಮೀ ತಾಯಿ ಸೌಹಾರ್ದ ಸಹಕಾರ ಸೊಸೈಟಿಯ 7ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆ ಬೆಳೆಯಲು ಠೇವಣಿದಾರರು ಎಷ್ಟು ಮುಖ್ಯವೋ ಸಾಲಗಾರರು ಕೂಡ ಅಷ್ಟೇ ಮುಖ್ಯ. ವಿಶೇಷವಾಗಿ ಮಧ್ಯಮ ವರ್ಗ ಮತ್ತು ಕೆಳವರ್ಗದವರ ನೆರವಿಗೆ ಸಂಸ್ಥೆ ಮುಂದೆ ಬರಬೇಕು. ರೈತರಿಗೆ ಹಾಗೂ ಸಣ್ಣ ಉದ್ಯಮಿಗಳಿಗೆ ಸಹಾಯ ನೀಡಬೇಕು ಎಂದು ಅವರು ಹೇಳಿದರು.
ಸಂಸ್ಥೆಯ ಚೇರಮನ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಸಂಸ್ಥೆ ಅತ್ಯಂತ ಅಲ್ಪ ಅವಧಿಯಲ್ಲಿ 26 ಕೋಟಿ ರೂ.ಗಳಿಗಿಂತ ಹೆಚ್ಚಿನ ಠೇವಣಿ ಹೊಂದಿದ್ದು, ಉತ್ತಮ ಬೆಳವಣಿಗೆ ಕಂಡಿದೆ. ವಿಶೇಷವಾಗಿ ರೈತರಿಗೆ ಸಂಸ್ಥೆ ಹೆಚ್ಚಿನ ಸಹಾಯ ನೀಡುತ್ತ ಬಂದಿದೆ. ಎಂ.ಕೆ.ಹುಬ್ಬಳ್ಳಿ ಶಾಖೆ ಕೂಡ ಎಲ್ಲರ ನೆರವಿನಿಂದ ಉತ್ತಮ ಬೆಳವಣಿಗೆ ಕಾಣಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕ ಮೃಣಾಲ ಹೆಬ್ಬಾಳಕರ್ ಮಾತನಾಡಿ, ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕಾರ ನೀಡುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದರು. ನೂತನ ಶಾಖೆಯಲ್ಲಿ ಆರಂಭಿಕ ಠೇವಣಿ ಇಟ್ಟವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಹಾಗೂ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಸಿಇಒ ಸಾಗರ ಇಂಗಳಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ