ಆಕ್ಸಿಸ್ ಬ್ಯಾಂಕ್ ನ 20 ಶಾಖೆಗಳ ಉದ್ಘಾಟನೆ ;ಇಡೀ ವಿಶ್ವ ಬೆಂಗಳೂರಿನ ಮೂಲಕ ಭಾರತವನ್ನು ನೋಡಲಾರಂಭಿಸಿದೆ – ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಏರ್ಪಡಿಸಿದ್ದ ಕರ್ನಾಟಕದಲ್ಲಿ ಆಕ್ಸಿಸ್ ಬ್ಯಾಂಕ್ 20 ಶಾಖೆಗಳ ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚುತ್ತಿರುವುದು ನೋಡಿ ನನಗೆ ಹೆಮ್ಮೆ ಎನಿಸುತ್ತದೆ. ದೇಶದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣದ ನಂತರ ಬ್ಯಾಂಕಿಂಗ್ ಸೇವೆಗಳು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುತ್ತಿವೆ. ಅದಕ್ಕೂ ಮುನ್ನ ಜನ ಸಾಮಾನ್ಯರು ಬ್ಯಾಂಕಿನೊಳಗೆ ಹೋಗುವುದೇ ಕಷ್ಟವಾಗಿತ್ತು. ಇಂದು ಬ್ಯಾಂಕುಗಳು ಗ್ರಾಹಕರ ಮನೆ ಬಾಗಿಲಿಗೆ ಹೋಗುತ್ತಿವೆ. ಇದು ಕಳೆದ 30-40 ವರ್ಷಗಳಲ್ಲಿ ಆಗಿರುವ ಬದಲಾವಣೆ ಎಂದು ಶಿವಕುಮಾರ ಹೇಳಿದರು.
ಆಕ್ಸಿಸ್ ಬ್ಯಾಂಕ್ ಸಾವಿರಾರು ಶಾಖೆಗಳನ್ನು ಹೊಂದಿದೆ. ಕರ್ನಾಟಕ ಹಾಗೂ ಬೆಂಗಳೂರಿನ ವಿಚಾರಕ್ಕೆ ಬಂದರೆ, ಇಲ್ಲಿನ ಸಂಸ್ಕೃತಿ, ವಾತಾವರಣ, ಮಾನವ ಸಂಪನ್ಮೂಲ ಎಲ್ಲವೂ ಅತ್ಯುತ್ತಮವಾಗಿದೆ. ಬೆಂಗಳೂರು ಕೇವಲ ಐಟಿ ಬಿಟಿ ಕ್ಷೇತ್ರ ಮಾತ್ರವಲ್ಲ, ಆರೋಗ್ಯ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು, 70 ಮೆಡಿಕಲ್ ಕಾಲೇಜು, 1 ಸಾವಿರಕ್ಕೂ ಹೆಚ್ಚು ಪ್ಯಾರಾ ಮೆಡಿಕಲ್ ಕಾಲೇಜು, 60 ಪ್ರತಿಷ್ಠಿತ ಎಂಬಿಎ ಸಂಸ್ಥೆಗಳಿವೆ.
ರಾಜ್ಯ ಸರ್ಕಾರ ವತಿಯಿಂದ ಬೆಂಗಳೂರಿನಲ್ಲಿ ಉದ್ಯೋಗ ಮೇಳ ನಡೆಯುತ್ತಿದ್ದು 1 ಲಕ್ಷ ಮಂದಿ ಉದ್ಯೋಗಕ್ಕೆ ಅರ್ಜಿ ಹಾಕಿದ್ದಾರೆ. ಇದು ನಮ್ಮಲ್ಲಿನ ಮಾನವ ಸಂಪನ್ಮೂಲ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರು ಒಂದು ಮಾತು ಹೇಳಿದ್ದರು. ಈ ಹಿಂದೆ ವಿಶ್ವದ ನಾಯಕರುಗಳು ಮೊದಲು ದೆಹಲಿಗೆ ಬಂದು ನಂತರ ಭಾರತದ ಇತರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗುತ್ತಿದೆ. ವಿಶ್ವ ನಾಯಕರು ಮೊದಲಿಗೆ ಬೆಂಗಳೂರಿಗೆ ಬಂದು ನಂತರ ದೇಶದ ವಿವಿಧ ನಗರಗಳಿಗೆ ತೆರಳುತ್ತಿದ್ದಾರೆ ಎಂದು ತಿಳಿಸಿದ್ದರು. ಇಡೀ ವಿಶ್ವ, ಬೆಂಗಳೂರಿನ ಮೂಲಕ ಭಾರತವನ್ನು ನೋಡಲಾರಂಭಿಸಿದೆ.
ದೇಶದಲ್ಲಿ ಅತಿ ಹೆಚ್ಚು ಆದಾಯ ನೀಡುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನೀವುಗಳು ಗ್ರಾಮೀಣ ಭಾಗದ ಬಗ್ಗೆಯೂ ಗಮನ ಹರಿಸಬೇಕು. ಗ್ರಾಮೀಣ ಭಾಗದ ಆರ್ಥಿಕತೆಯೂ ಬಲಿಷ್ಠವಾಗಬೇಕು. ನಮ್ಮ ಸರ್ಕಾರ ಸಿಎಸ್ಆರ್ ನಿಧಿ ಬಳಸಿ ಗ್ರಾಮೀಣ ಭಾಗದ ಮಕ್ಕಳಿಗೆ ನಗರ ಪ್ರದೇಶಗಳಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ವಿನಿಯೋಗಿಸಲು ತೀರ್ಮಾನಿಸಿದೆ. ಇದಕ್ಕಾಗಿ ಪ್ರತಿ 2-3 ಪಂಚಾಯ್ತಿಗಳಿಗೆ ಒಂದು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲು ತೀರ್ಮಾನಿಸಿದೆ. ರಾಜ್ಯದಲ್ಲಿ ಒಟ್ಟು 2 ಸಾವಿರ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಿದ್ದು, ಇದಕ್ಕೆ ನೀವೆಲ್ಲರೂ ಸಹಕಾರ ನೀಡಬೇಕು ಎಂದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.50 ಕೋಟಿಗೆ ಏರಿಕೆಯಾಗಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ನಾವು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ.
ನಮ್ಮ ಯುವಕರಿಗೆ ಉದ್ಯೋಗಿಗಳಾಗುವುದಕ್ಕಿಂತ ಉದ್ಯಮಿಗಳಾಗಿ ಎಂದು ನಾವು ಉತ್ತೇಜನ ನೀಡುತ್ತಿದ್ದೇವೆ. ಆಮೂಲಕ ಒಬ್ಬೊಬ್ಬರೂ ಕನಿಷ್ಠ 10 ಜನಕ್ಕೆ ಉದ್ಯೋಗ ನೀಡುವಂತಾಗಬೇಕು. ಜನರು ಹಾಗೂ ಅವರ ಹಿತಾಸಕ್ತಿಯ ಬಗ್ಗೆ ನೀವು ಆಲೋಚನೆ ಮಾಡಬೇಕು. ನೀವು ಜನರನ್ನು ಶಕ್ತಿಶಾಲಿಗಳನ್ನಾಗಿ ಮಾಡಬೇಕು. ನೀವು ಬೇರೆ ಕೆಲವು ಬ್ಯಾಂಕುಗಳಂತೆ ಕಾನೂನು ಬಾಹಿರವಾಗಿ ನಡೆದುಕೊಳ್ಳಿ ಎಂದು ಹೇಳುತ್ತಿಲ್ಲ. ನಮ್ಮ ಆರ್ ಬಿಐ ಮಾರ್ಗಸೂಚಿಗಳು ಅತ್ಯುತ್ತಮವಾಗಿದ್ದು ನಮ್ಮ ಬ್ಯಾಂಕಿಂಗ್ ಕ್ಷೇತ್ರ ಯಶಸ್ವಿಯಾಗಿ ಸಾಗುತ್ತಿವೆ. ನೀವು ಹೆಚ್ಚಿನ ಜನರಿಗೆ ಉದ್ಯೋಗ ನೀಡಿ ದೇಶಕ್ಕೆ ಶಕ್ತಿ ತುಂಬಿ ಎಂದು ಶಿವಕುಮಾರ ಕರೆ ನೀಡಿದರು.
ಬ್ಯಾಂಕ್ ಸಿಇಓ ಅಮಿತಾಬ್ ಚೌಧರಿ, ಗ್ರೂಪ್ ಎಕ್ಸಿಕ್ಯೂಟಿವ್ ರವಿ ನಾರಾಯಣನ್, ಎಕ್ಸಕ್ಯೂಟಿವ್ ಡೈರೆಕ್ಟರ್ ಸುಬ್ರತ್ ಮೋಹಂತಿ, ಪ್ರಾದೇಶಿಕ ಬ್ರಾಂಚ್ ಬ್ಯಾಂಕಿಂಗ್ ಮುಖ್ಯಸ್ಥೆ ಬೈಶಾಕಿ ಬ್ಯಾನರ್ಜಿ ಮತ್ತು ಅಧ್ಯಕ್ಷೆ ಆರ್ನಿಕಾ ದೀಕ್ಸಿತ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ