ಕಾಂಗ್ರೆಸ್ ನಲ್ಲಿ ಯಾವುದೇ ಮುಸುಕಿನ ಗುದ್ದಾಟವಿಲ್ಲ: ಸಚಿವ ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭೇಟಿ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಸಮಾರಂಭವನ್ನು ಮೈಸೂರಿನಲ್ಲಿ ಆಯೋಜಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಿರ್ಣಯದಂತೆ ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ” ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ವೈನಾಡಿಗೆ ಭೇಟಿ ನೀಡುತ್ತಿದ್ದು ಅವರ ಪ್ರಯಾಣದ ಮಾರ್ಗದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಈ ನಿರ್ಧಾರ ತಳೆಯಲಾಗಿದೆ. ಇದು ಇಡೀ ರಾಜ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮವಾಗಿರುವುದರಿಂದ ನಾನೂ ಹಾಜರಾಗುತ್ತೇನೆ” ಎಂದು ಅವರು ಹೇಳಿದರು.
ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, “ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾವುದೇ ಮುಸುಕಿನ ಗುದ್ದಾಟವಿಲ್ಲ” ಎಂದು ಸ್ಪಷ್ಟಪಡಿಸಿದರು.
“ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿದ್ದ ಕೆಲ ಶಾಸಕರನ್ನು ಮರಳಿ ಕಾಂಗ್ರೆಸ್ ಕರೆಸಿಕೊಳ್ಳುವ ಅಗತ್ಯವಿಲ್ಲ. ಅವರಾಗೇ ಪಕ್ಷಕ್ಕೆ ಮರಳಲು ಇಚ್ಛೆ ವ್ಯಕ್ತಪಡಿಸಿದರೆ ಸೇರ್ಪಡೆಗೆ ಅಭ್ಯಂತರವಿಲ್ಲ. ಆದರೆ ಯಾರೆಲ್ಲ ಮರಳಿ ಬರುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿಯಿಲ್ಲ. ಅದು ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಮಾತ್ರ ತಿಳಿದಿದೆ” ಎಂದರು.
“ನಿಗಮ, ಮಂಡಳಿಗಳ ನೂರು ಅಧ್ಯಕ್ಷ ಸ್ಥಾನಗಳಿವೆ. ಕಾಂಗ್ರೆಸ್ ನಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಈ ಪೈಕಿ 50 ಜನ ಶಾಸಕರಿಗೆ ಹಾಗೂ ಕಾರ್ಯಕರ್ತರಿಗೆ ಹಂಚಲಾಗುವುದು. ಎಲ್ಲರಿಗೂ ನೀಡಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾಪ ಬಂದಾಗ ತಮ್ಮ ತಾಲೂಕು ಜಿಲ್ಲೆಯಾಗಬೇಕೆಂದು ಕೇಳಲು ಎಲ್ಲರಿಗೂ ಹಕ್ಕಿದೆ. ಆದರೆ ಇದರ ಅಂತಿಮ ತೀರ್ಮಾನವನ್ನು ಸರಕಾರವೇ ಮಾಡಲಿದೆ” ಎಂದು ಅವರು ಹೇಳಿದರು.
“ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಯ ಕುರಿತು ಪ್ರಸ್ತಾಪಿಸಿದ ಸತೀಶ ಜಾರಕಿಹೊಳಿ, “ಈ ಕುರಿತು ಸಭೆಗಳನ್ನು ನಡೆಸಿ ಆಯ್ಕೆ ಮಾಡಲಾಗುವುದು. ಜಾತಿ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಮನ್ನಣೆ ನೀಡಲಾಗುವುದು. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ, ಲಕ್ಷ್ಮಣರಾವ್ ಚಿಂಗಳೆ ಆಕಾಂಕ್ಷಿಗಳಾಗಿದ್ದು ಬೆಳಗಾವಿಯಲ್ಲಿಯೂ ಹಲವರಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರನಿಗೆ ಟಿಕೆಟ್ ನೀಡುವ ಕುರಿತು ಈವರೆಗೂ ನಮ್ಮ ಬಳಿ ಪ್ರಸ್ತಾಪಿಸಿಲ್ಲ” ಎಂದು ತಿಳಿಸಿದರು.
ಕಟ್ಟಡ ಒಡೆಸಿದ ಬಾಹುಬಲಿ ಯಾರು?:
ಬೆಳಗಾವಿ ಶಹಾಪುರ ಎಸ್ ಬಿಐ ಬ್ಯಾಂಕ್ ವೃತ್ತದಿಂದ ಹಳೆ ಪಿ.ಬಿ.ರಸ್ತೆಯವರೆಗೆ ಸ್ಮಾರ್ಟ್ ಸಿಟಿಯಿಂದ ಕೈಗೊಂಡ ರಸ್ತೆ ಅಗಲೀಕರಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಅನ್ಯಾಯಕ್ಕೊಳಗಾದ ಕುಟುಂಬದವರಿಗೆ ಪರಿಹಾರ ನೀಡಲು ಕೋರ್ಟ್ ಈಗಾಗಲೇ ಸೂಚಿಸಿದೆ. ಇಲ್ಲಿ ಸಂಬಂಧ ಇಲ್ಲದ ಇಲಾಖೆಯವರು ವಾಸದ ಹಾಗೂ ವ್ಯವಹಾರದ ಕಟ್ಟಡಗಳನ್ನು ಒಡೆದು ಹಾಕಿದ್ದಾರೆ. ನಾನು ಕಳೆದ ಎರಡೂ ವರ್ಷದ ಹಿಂದೆಯೇ ಸ್ಮಾರ್ಟ್ ಸಿಟಿ, ಲೋಕೋಪಯೋಗಿ, ಬುಡಾಗೆ ಪತ್ರ ಬರೆದು ಕೇಳಿದ್ದೆ. ಅವರು ನಾವು ಒಡೆದಿಲ್ಲ ಎಂದಿದ್ದಾರೆ. ಹಾಗಿದ್ದರೆ ಆ ರಸ್ತೆಯನ್ನು ಯಾವ ಬಾಹುಬಲಿ ನಿಂತು ಒಡೆಸಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ” ಎಂದರು.
ಶಾಸಕ ಆಸೀಫ್ (ರಾಜು) ಸೇಠ್, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಸುನೀಲ ಹನುಮಣ್ಣವರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ