ಸ್ವ ಹಿತಾಸಕ್ತಿ ಮರೆತು ಸೇವಾ ಮನೋಭಾವನೆಯಿಂದ ಆರೋಗ್ಯಯುತ ಸಮಾಜ ನೀರ್ಮಾಣ ಸಾಧ್ಯ- ಡಾ. ಪ್ರಭಾಕರ ಕೋರೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ವಾರ್ಥ ಸ್ವಹಿತಾಸಕ್ತಿಗಳನ್ನು ಮರೆತು ನಿಷ್ಕಾಮ ಭಾವನೆಯಿಂದ ಸೇವೆ ನಿರ್ವಹಿಸಿದಾಗ ಮಾತ್ರ ಆರೊಗ್ಯಯುತ ಸಮಾಜ ನಿರ್ಮಿಸಲು ಸಾಧ್ಯವೆಂದು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹೇಳಿದರು.
ಅವರು ಇಂದು ನಗರದ ಕೆ ಎಲ್ ಇ ಶತಮಾನೊತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಆಪ್ ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ ಆರಂಭಿಸಲಾದ ರೋಟರಿ ಕೆಎಲ್‌ಇ ಆಕ್ಸಿಜನ್ ಬ್ಯಾಂಕಿನ ಉದ್ಘಾಟನಾರ್ಥವಾಗಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಕೆ ಎಲ್ ಇ ಹಾಗೂ ರೋಟರಿ ನಡುವಿನ ಅವಿನಾಭಾವ ಸಬಂಧವನ್ನು ನೆನಪಿಸುತ್ತ ಜನ ಕಲ್ಯಾಣದಲ್ಲಿ ಕೆ ಎಲ್ ಇ ಹಾಗೂ ರೋಟರಿ ಸಂಸ್ಥೆಗಳು ಎಂದಿಗೂ ಮುಂದಾಗಿರುತ್ತವೆ. ಇಂದು ಪ್ರತಿನಿತ್ಯ ಆಕ್ಸಿಜನ್ ( ಆಮ್ಲಜನಕ) ದ ಕೊರತೆಯಿಂದ ಕೊವಿಡ-೧೯ ನಿಂದ ಸಾವು ನೋವುಗಳ ವರದಿಯನ್ನು ನಾವು ನೀವೆಲ್ಲ ನೋಡುತ್ತಿರುವೆವು. ಈ ಎಲ್ಲ ನೋವುಗಳನ್ನು ಮನಗಂಡು ಈ ನಿಟ್ಟಿನಲ್ಲಿ ಕೆ ಎಲ್ ಇ ಸಂಸ್ಥೆಯು ರೋಟರಿ ಸಂಸ್ಥೆಯೊಡನೆ ಸೇರಿ ಕೊರೊನಾ ಪೀಡಿತರ ನೋವು ನಿವಾರಿಸಲು ಮುನ್ನುಗುತ್ತಲಿವೆ ಎಂದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ರೊಟೆರಿಯನ್ ಶರದ ಪೈ ಅವರು ಮಾತನಾಡುತ್ತ ಸಮಾಜದಲ್ಲಿ ಆರೋಗ್ಯದ ಅರಿವು ಹಾಗೂ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಕೆ ಎಲ್ ಇ ಸಂಸ್ಥೆಯ ಜೊತೆಗೆ ರೋಟರಿ ಸಂಸ್ಥೆಯು ಯಾವಾಗಲೂ ಸಿದ್ದವಾಗಿರುತ್ತದೆ. ಈ ನಿಟ್ಟಿನಲ್ಲಿ ನಾಗರಿಕರಲ್ಲಿ ಮನೆ ಮಾಡಿರುವ ಆಮ್ಲಜನಕದ ಕೊರತೆಯ ಭಿತಿಯಿಂದ ಹೊರಬರಲು ಇನ್ನು ಅಧಿಕ ಆಕ್ಸಿಜನ್ ಕಾನ್ಸಂಟ್ರೆಟರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಮೂಲಕ ಈ ಆಕ್ಸಿಜನ್ ಕಾನ್ಸಂಟ್ರೆಟರಗಳನ್ನು ನೀಡಲು ಸಹಕರಿಸಿದ ಎಲ್ಲ ರೋಟರಿ ಸದಸ್ಯರನ್ನು ಹಾಗೂ ದಾನಿಗಳನ್ನು ನೆನೆದರು.
ಕಾರ್ಯಕ್ರಮದಲ್ಲಿ ಮತ್ತೊಬ್ಬ ಅತಿಥಿಗಳಾಗಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ ರೋಟರಿ ಕೆಎಲ್‌ಇ ಆಕ್ಸಿಜನ್ ಬ್ಯಾಂಕ್ ಗಳು ಜನಸ್ನೇಹಿಯಾಗಿದ್ದು, ಕೊರೊನಾ ಪೀಡಿತರಾಗಿ ಚಿಕಿತ್ಸೆಹೊಂದಿದರೂ ಸಹ ಆಕ್ಸಿಜನ್ ಅವಶ್ಯಕತೆಯಿರುವ ರೋಗಿಗಳು ಈ ಸೇವೆಯನ್ನು ಪಡೆಯಬಹುದಾಗಿದೆ. ಅತ್ಯಲ್ಪ ಮುಂಗಡಹಣವನ್ನು ಸ್ವೀಕರಿಸಿ ಈ ಸೇವೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯು ಎಸ್ ಎಮ್ ಕೆ ಎಲ್ ಇ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತ, ರೋಟರಿ ಕೆಎಲ್‌ಇ ಆಕ್ಸಿಜನ್ ಬ್ಯಾಂಕ್ ನ ಯೋಜನೆಯು ಇಂದು ಅತ್ಯುಪಯುಕ್ತವಾದ ಯೋಜನೆಯಾಗಿದ್ದು ಆಕ್ಸಿಜನ್ ಕೊರತಯ ಭೀತಿಯಲ್ಲಿರುವ ನಾಗರಿಕರಿಗೆ ಬಲವಾಗಲಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಪ್ರಕೃತಿದತ್ತವಾಗಿ ಸಿಗುತ್ತಿದ್ದ ಜೀವಾಮೃತವಾದ ಆಮ್ಲಜನಕವನ್ನು ಇಂದು ಹಣಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಇಂದು ಪ್ರತಿಯೊಬ್ಬ ಕೊರೊನಾ ಪೀಡಿತನಿಗೂ ಕೃತಕ ಆಮ್ಲಜನಕದ ಅವಶ್ಯಕತೆಯಿದೆ. ಇದರ ಕೊರತೆಯಿಂದ ಅಸಂಖ್ಯಾತ ಜನರು ಜೀವ ತೆತ್ತಿರುವದನ್ನು ನಾವು ಸುದ್ದಿಮಾಧ್ಯಮಗಳ ಮೂಲಕ ತಿಳಿದಿರುವೆವು. ಈ ನಿಟ್ಟಿನಲ್ಲಿ ನಾಗರಿಕರಿಗೆ ಅನುಕೂಲವಾಗುವ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯರುಗಳಾದ ಡಾ. ಬಿ ಎಸ್ ಮಹಾಂತಶೆಟ್ಟಿ, ಡಾ. ಆರ್ ಜಿ ನೆಲವಿಗಿ, ಡಾ. ಆರ್ ಆರ್ ವಾಳ್ವೇಕರ, ಡಾ. ಶ್ರೀಕಾಂತ ಮೇತ್ರಿ ಮುಂತಾದವರು ಉಪಸ್ಥಿತರಿದ್ದರು.
ರೋಟರಿ ಕ್ಲಬ್‌ನ ಖಜಾಂಚಿ ಗಣೇಶ ದೇಶಪಾಂಡೆ, ಸಾಗರ ಕಲಘಟಗಿ ಮುಂತಾದವರು ಉಪಸ್ಥಿತರಿದ್ದರು. ರೊಟರಿ ಕ್ಲಬ್ ನ ಪ್ರಸಿಡೆಂಟ್ ಡಾ. ಕೆ ಎಮ್ ಕೆಲೂಸ್ಕರ ಸ್ವಾಗತಿಸಿದರು. ಸಂತೋಷ ಇತಾಪೆ ನಿರೂಪಿಸಿದರು. ಕೆ ಎಲ್ ಇ ಹೊಮಿಯೊಪಥಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಮ್ ಎ ಉಡಚನಕರ ವಂದಿಸಿದರು. . ಈ ಸೇವೆಯನ್ನು ಪಡೆಯಲು ಹಾಗೂ ಅಧಿಕ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ ೮೬೬೦೩೬೯೨೮೩, ೯೦೭೧೪೧೩೮೨೯, ೮೫೫೦೮೮೭೭೭೭ ಗಳ ಸಂಪರ್ಕಿಸಬಹುದಾಗಿದೆ.
ಸಿಎಂ ಭೇಟಿ ಎಫೆಕ್ಟ್: ಬೆಳಗಾವಿಯಲ್ಲಿ ಆಪರೇಶನ್ ಬಿಮ್ಸ್ ಆರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ