Kannada NewsKarnataka NewsLatest
ಮುಂದಿನ ವಾರ ಸುವರ್ಣ ಸೌಧದ ಎದುರು ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಚನ್ನಮ್ಮ ಪ್ರತಿಮೆ ಸ್ಥಾಪನೆಗೆ ಅಡಿಗಲ್ಲು – ಸಿಎಂ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಂದಿನ ವಾರ ಸುವರ್ಣ ಸೌಧದ ಎದುರು ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಚನ್ನಮ್ಮ ಪ್ರತಿಮೆ ಸ್ಥಾಪನೆಗೆ ಅಡಿಗಲ್ಲು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು.
ಅವರು ಬೆಳಗಾವಿಯ ಆಂಜನೇಯ ನಗರದಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸುವರ್ಣಸೌಧದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧಿಜೀಯವರ ಮೂರ್ತಿಗಳನ್ನೂ ಸ್ಥಾಪನೆ ಮಾಡಲಾಗುವುದು. ಚೆನ್ನಮ್ಮ ವಿವಿ ಮುಂದೆ ರಾಣಿ ಚೆನ್ನಮ್ಮ ಮೂರ್ತಿ ಸ್ಥಾಪನೆ ಮಾಡಲು ಅನುದಾನ ನೀಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಕುಲಪತಿಗಳು ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದರು.
*ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ನಿರ್ಮಾಣ :*
ಸಂಗೊಳ್ಳಿಯಲ್ಲಿ 221 ಕೋಟಿ ವೆಚ್ಚದಲ್ಲಿ ಸೈನಿಕ ಶಾಲೆಯನ್ನು ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. ನಂದಗಡದ ವೀರಭೂಮಿಯಲ್ಲಿ 75 ಕೋಟಿ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
*ವಿದ್ಯಾರ್ಥಿಗಳಿಗೆ ತಾರ್ಕಿಕ ಚಿಂತನೆ ಅಗತ್ಯ:*
ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಜೀವನ. ಈ ಜೀವನ ಮತ್ತೆ ಸಿಗುವುದಿಲ್ಲ. ಗೆಳೆಯರೊಂದಿಗೆ ಸಂತೋಷದಿಂದ ಕಾಲ ಕಳೆಯಲು ಹೆಚ್ಚು ಅನುಕೂಲದ ಸಮಯ. ಯಶಸ್ಸಿಗೆ ಅಡ್ಡ ಮಾರ್ಗವಿಲ್ಲ. ನಿರಂತರ ಪರಿಶ್ರಮ ಮುಖ್ಯ. ನೀವು ಯಾವ ರೀತಿ ಶ್ರಮ ಪಡುತ್ತಿರೊ ಅದು ನಿಮ್ಮ ಯಶಸ್ಸು ನಿರ್ಧರಿಸುತ್ತದೆ.ವಿದ್ಯಾರ್ಥಿಗಳು ತರ್ಕಬದ್ಧವಾಗಿ ಯೋಚಿಸಬೇಕು. ಯಾಕೆ, ಏನು, ಎಲ್ಲಿ ಎನ್ನುವ ಆಲೋಚನೆ ಮಾಡಬೇಕು. ತರ್ಕಬದ್ಧ ಆಲೋಚನೆ ಬಂದಾಗ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಬಾಯಿಪಾಠ ಮಾಡಿದರೆ ಪರೀಕ್ಷೆ ಬರೆಯಲು ಕಷ್ಟ ಎಂದು ಅವರು ಅಭಿಪ್ರಾಯ ಪಟ್ಟರು.
*ಜೀವನದಲ್ಲಿ ಮೊದಲು ಪರೀಕ್ಷೆ ನಂತರ ಪಾಠ :*
ಒಮ್ಮೆ ವಿದ್ಯಾರ್ಥಿಗಳಾದರೆ ಜೀವನ ಪರ್ಯಂತ ವಿದ್ಯಾರ್ಥಿಗಳಾಗಿರುತ್ತಾರೆ. ನಾವು ದಿನ ನಿತ್ಯ ಏನಾದರೂ ಕಲಿಯುತ್ತಿರುತ್ತೇವೆ. ದೊಡ್ಡ ಕನಸು ಕಾಣಲು ಹೆದರದೇ, ಅಸಾಧ್ಯವನ್ನು ಸಾಧ್ಯ ಮಾಡುವ ಆಲೋಚನೆ ಮಾಡಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಶಿಕ್ಷಣದಲ್ಲಿ ಮೊದಲು ಪಾಠ ನಂತರ ಪರೀಕ್ಷೆ , ಆದರೆ ನಿಜಜೀವನದಲ್ಲಿ ಮೊದಲು ಪರೀಕ್ಷೆ ನಂತರ ಪಾಠ ದೊರೆಯುತ್ತದೆ.ಏಕಾಗ್ರತೆಯಿಂದ ಸಾಧನೆ ಮಾಡಿದರೆ ಯಶಸ್ಸು ದೊರೆಯುತ್ತದೆ ಎಂದರು. ನೀವು ಮುಂದೆ ಏನಾಗುತ್ತೀರಿ ಎನ್ನುದನ್ನು ಈಗಲೇ ನಿರ್ಧರಿಸಿ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
*ಸಾಧನೆ ದೊಡ್ಡದು :*
ಯಶಸ್ಸು ಬಹಳ ಸಣ್ಣದು, ಸಾಧನೆ ಅನ್ನುವುದು ದೊಡ್ಡದು. ಯಶಸ್ಸು ವೈಯಕ್ತಿಕವಾಗಿದ್ದು, ಸಾಧನೆಯಿಂದ ಸಮಾಜಕ್ಕೆ ಅನುಕೂಲವಾಗುತ್ತದೆ. ಸ್ವಾಮಿ ವಿವೇಕಾನಂದರು ಸಾಧಕನಿಗೆ ಸಾವು ಅಂತ್ಯವಲ್ಲ. ಸತ್ತ ನಂತರವೂ ಸಾಧನೆ ಉಳಿಯುತ್ತದೆ ಎಂದು ಹೇಳಿರುವುದನ್ನು ಮುಖ್ಯಮಂತ್ರಿಗಳು ಸ್ಮರಿಸಿಕೊಂಡರು.
ಯಶಸ್ಸು ವ್ಯಕ್ತಿಗೆ ಸಂಬಂಧಿಸಿದುದು, ಸಾಧನೆ ಸಮುದಾಯಕ್ಕೆ ಸಂಬಂಧಿಸಿದುದು. ವ್ಯಕ್ತಿಯು ಅಮರನಾಗುವುದು ಅವನ ಭೌತಿಕ ಸಂಪತ್ತಿನಿಂದಲ್ಲ ಅವನ ಸಾಧನೆಯ ಮೂಲಕ. ವ್ಯಕ್ತಿಯ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಘಟ್ಟ. ಈ ಸಮಯ ಮತ್ತೆ ಮರಳುವುದಿಲ್ಲ. ಇದುವೇ ನಿಮ್ಮ ಭವಿಷ್ಯದ ಬುನಾದಿಯಾಗಿರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯಶಸ್ಸಿಗೆ ಅಡ್ಡ ಮಾರ್ಗವಿಲ್ಲ. ನಿರಂತರ ಪರಿಶ್ರಮ ಮುಖ್ಯ. ನೀವು ಯಾವ ರೀತಿ ಶ್ರಮ ಪಡುತ್ತಿರೊ ಅದು ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಸಮಯ ಬಹಳ ಮುಖ್ಯವಾದುದು. ಯಾಕೆ, ಏನು, ಎಲ್ಲಿ, ಯಾವಾಗ, ಹೇಗೆ ಎಂಬ ಪಂಚ ತಾರ್ಕಿಕ ಆಲೋಚನೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಡಬೇಕು. ಲಾಜಿಕಲ್ ಆಲೋಚನೆ ಬಂದಾಗ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಒಮ್ಮೆ ನೀವು ವಿದ್ಯಾರ್ಥಿಗಳಾದರೆ ಜಿವನ ಪರ್ಯಂತ ವಿದ್ಯಾರ್ಥಿಗಳೇ ಆಗಿರುತ್ತೀರಿ. ನಾವು ದಿನ ನಿತ್ಯ ಏನಾದರೂ ಕಲಿಯುತ್ತಿರುತ್ತೇವೆ. ದೊಡ್ಡ ಕನಸು ಕಾಣಲು ಹೆದರಬೇಡಿ, ಅಸಾಧ್ಯವನ್ನು ಸಾಧ್ಯ ಮಾಡುವ ಆಲೋಚನೆ ಮಾಡಿ ಆಗ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಅತಿಥಿಗಳಾದ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಅತ್ಯಂತ ದೊಡ್ಡ ವಿಶ್ವವಿದ್ಯಾಲಯ. ಒಂದು ವಿಶ್ವವಿದ್ಯಾಲಯದ ಘಟಕ ಮಹಾವಿದ್ಯಾಲಯವು ಮಾದರಿ ಕಾಲೇಜು ಆಗಬೇಕು. ಈ ಮಹಾವಿದ್ಯಾಲಯ ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಶಕ್ತಿಕೇಂದ್ರ ಆಗುವುದರ ಜೊತೆಗೆ ಇಲ್ಲಿ ವ್ಯಾಸಂಗ ಮಾಡುವವರ ಸಂಖ್ಯೆಯೂ ದುಪ್ಪಟ್ಟಾಗಲಿ. ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸಕಟ್ಟಡ ಅತೀ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಈ ಕಾಲೇಜು ಬೆಳಗಾವಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಗಿದೆ. ಇಲ್ಲಿ ವ್ಯಾಸಂಗ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಇಲ್ಲಿ ಕಲಿಕಾವ್ಯವಸ್ಥೆ ಮಾಡಿಕೊಡಲಾಗುವುದು. ಕಾಲೇಜಿನ ಪಕ್ಕದಲ್ಲಿ ಇರುವ ಮಹಾನಗರ ಪಾಲಿಕೆಯ ಖಾಲಿ ಜಾಗವನ್ನು ಕಾಲೇಜಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಹಾವಿದ್ಯಾಲಯಕ್ಕೆ ಸಂಬಂಧಿಸಿದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದೇನೆ. ಕಡಿಮೆ ಶುಲ್ಕದಲ್ಲಿ ಗುಣಾತ್ಮಕವಾದ ಶಿಕ್ಷಣ ಈ ಸಂಸ್ಥೆ ನೀಡುವುದರಿಂದ ಗಡಿಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ, ಶಾಸಕ ಅರವಿಂದ ಬೆಲ್ಲದ, ಶಾಸಕ ಪ್ರಕಾಶ ಹುಕ್ಕೇರಿ, ಶಾಸಕ ಹನುಮಂತ ನಿರಾಣಿ , ಮುಖ್ಯಮಂತ್ರಿಗಳ ಆಪ್ತ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ರಾಚವಿ ಕುಲಸಚಿವರಾದ ಕೆ. ಟಿ. ಶಾಂತಲಾ, ಕುಲಸಚಿವ(ಮೌಲ್ಯಮಾಪನ )ರಾದ ಪ್ರೊ. ಶಿವಾನಂದ ಗೊರನಾಳೆ, ಹಣಕಾಸು ಅಧಿಕಾರಿಗಳಾದ ಪ್ರೊ. ಎಸ್. ಬಿ. ಆಕಾಶ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಲಪತಿಗಳಾದ ರಾಮಚಂದ್ರ ಗೌಡ ಸ್ವಾಗತಿಸಿದರು. ಡಾ. ಗಜಾನನ ನಾಯ್ಕ ನಿರೂಪಿಸಿದರು. ಪ್ರಾಚಾರ್ಯರಾದ ಡಾ. ಶಂಕರ ಎಸ್. ತೇರದಾಳ ವಂದಿಸಿದರು. ವಿದ್ಯಾರ್ಥಿ ಲಕ್ಷ್ಮಣ ನಾಯಕ ಪ್ರಾರ್ಥಿಸಿದರು. ರಾಚವಿ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಡೀನ್ ಮತ್ತು ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*ಶಿಕ್ಷಣ ಕ್ಷೇತ್ರದ ಅಪಾರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಹೊರಟ್ಟಿಯವರು; ಸಿಎಂ ಬೊಮ್ಮಾಯಿ ಶ್ಲಾಘನೆ*
https://pragati.taskdun.com/basavaraj-horattividhana-parishath-speakercm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ