*ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆ: ಬೆಳಗಾವಿ ರಾಕಸಕೊಪ್ಪ ಜಲಾಶಯ ಭರ್ತಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರಗಳಿಂದ ನಿರಂತರ ಮಳೆಗೆ ಬೆಳಗಾವಿ ತಾಲ್ಲೂಕಿನ ರಾಕಸಕೊಪ್ಪ ಜಲಾಶಯ ಭಾಗಶಃ ಭರ್ತಿಯಾಗಿದ್ದು ಮಹಾನಗರದ ಜನತೆಯ ಮುಖದಲ್ಲಿ ಮಂದಹಾಸ ಮೂಡಿದೆ.
ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ರಾಕಸಕೊಪ್ಪ ಜಲಾಶಯ ಭರ್ತಿಗೆ ಕ್ಷಣಗಣನೆ ಶುರುವಾಗಿದೆ. 0.60 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಒಟ್ಟು 2475 ಅಡಿ ಎತ್ತರ ಹೊಂದಿದೆ. ಇವತ್ತಿನ ನೀರಿನ ಮಟ್ಟ 2471.4 ಅಡಿ. ಇನ್ನು ನಾಲ್ಕು ಅಡಿ ನೀರು ಬಂದರೆ ಜಲಾಶಯ ಭರ್ತಿಯಾಗಲಿದೆ.
ಮಳೆ ಮುಂದುವರೆದರೆ ಇನ್ನೆರಡೂ ದಿನಗಳಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದ್ದು, ರಾಕಸಕೊಪ್ಪ ಜಲಾಶಯ ಭರ್ತಿ ಹಂತಕ್ಕೆ ಬರುತ್ತಿರುವ ಹಿನ್ನಲೆ ನೀರು ಬಿಡುಗಡೆಗೂ ಚಿಂತನೆ ನಡೆದಿದ್ದು ಜಲಾಶಯದ ನೀರು ಮಾರ್ಕಂಡೇಯ ನದಿ ಸೇರಲಿದ್ದು ರಾಕಸಕೊಪ್ಪ ಜಲಾಶಯದಿಂದ ನೀರು ಬಿಡುಗಡೆಯಾದರೆ ಮಾರ್ಕಂಡೇಯ ನದಿ ಪಾತ್ರದ ಜನರಿಗೂ ಪ್ರವಾಹದ ಭೀತಿ ಎದುರಾಗಲಿದೆ. ಬೆಳಗಾವಿ ನಗರದ ಹೊರವಲಯದಲ್ಲೇ ಹರಿದು ಹೋಗುವ ಮಾರ್ಕಂಡೇಯ ನದಿ ತಟದಲ್ಲಿ ಬೆಳಗಾವಿ ನಗರದ ಸಾವಿರಾರು ಹೆಕ್ಟೇರ್ ಜಮೀನಿಗೆ ನೀರು ನುಗ್ಗುವ ಆತಂಕವಿದ್ದು ಬೆಳಗಾವಿಯ ಮಹಾನಗರ ಹಲವು ಪ್ರದೇಶಗಳಿಗೂ ಪ್ರವಾಹ ಉಂಟಾಗುವ ಭೀತಿ ಎದುರಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ