ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಬಳ ಹೆಚ್ಚಿಸಲಾಗಿದೆ.
ಬಹುದಿನಗಳ ಬೇಡಿಕೆಯಾಗಿದ್ದ ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳವನ್ನು ದೀಪಾವಳಿ ಸಂದರ್ಭದಲ್ಲಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ಖಾತೆ ಸಚಿವರಾದ ಶಶಿಕಲಾ ಜೊಲ್ಲೆ ಘೋಷಣೆ ಮಾಡಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ 2,000/-ರೂ, ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 1,250/-ರೂ ಹಾಗೂ ಸಹಾಯಕಿಯರಿಗೆ 1,000/- ರೂ ಗೌರವ ಧನವನ್ನು ಹೆಚ್ಚಳ ಮಾಡಲಾಗಿದ್ದು ನವೆಂಬರ್ ತಿಂಗಳಿನಿಂದ ಅನುಷ್ಠಾನವಾಗಲಿದೆ.
ಗೌರವ ಧನ ಹೆಚ್ಚಳಕ್ಕಾಗಿ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಹಳ ದಿನಗಳಿಂದ ಹೋರಾಟ ಮಾಡುತ್ತಿದ್ದರು, 2018 ಅಕ್ಟೋಬರ್ ತಿಂಗಳಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಬೇಡಿಕೆಗೆ ಸ್ಪಂದಿಸಿ ಗೌರವ ಧನ ಹೆಚ್ಚಳ ಮಾಡಿದ್ದರು. ಆದರೆ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿರಲಿಲ್ಲ. ನಮ್ಮ ಸರ್ಕಾರ ಬಂದ ಕೂಡಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾನು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ವೇತನ ಹೆಚ್ಚಳಕ್ಕೆ ಅನುಮೋದನೆ ಪಡೆಯಲಾಯಿತು ಎಂದು ಜೊಲ್ಲೆ ತಿಳಿಸಿದರು.
ಇತ್ತೀಚೆಗೆ ರಾಜ್ಯದಲ್ಲಿ ಅತಿವೃಷ್ಟಿಯಿಂದ ಪ್ರವಾಹ ಉಂಟಾಗಿ ಅನೇಕ ಅಂಗನವಾಡಿ ಕೇಂದ್ರಗಳು ಕುಸಿದು ಬಿದ್ದಿದ್ದು, ಪುನರ್ ನಿರ್ಮಾಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ಹಾಗೂ ಮಕ್ಕಳು ಆಟದ ಮೂಲಕ ಪಾಠ ಕಲಿಯಲು ಅನುಕೂಲವಾಗುವಂತೆ ರಾಜ್ಯದ ಅಂಗನವಾಡಿ ಕೇಂದ್ರಗಳನ್ನು ಹೈಟೆಕ್ ರೂಪದಲ್ಲಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ