Kannada NewsLatest

ಸತ್ಯ ಸ್ವಾತಂತ್ರ್ಯ

ಜನವರಿ 26ರ ಗಣರಾಜ್ಯೋತ್ಸವ, ಅಗಸ್ಟ್ 15ರ ಸ್ವಾತಂತ್ರ್ಯ್ರ ದಿನ, ಅಕ್ಟೋಬರ್ 2ರ ಗಾಂಧಿ ಜಯಂತಿ ಈ ಮೂರು ಉತ್ಸವಗಳು ರಾಷ್ಟ್ರೀಯ ಹಬ್ಬಗಳಾಗಿವೆ. ಭಾರತದಲ್ಲಿ ಈ ಹಬ್ಬಗಳನ್ನು ದೇಶ-ಪ್ರೇಮ ಮತ್ತು ರಾಷ್ಟಭಕ್ತಿ-ಭಾವದಿಂದ ಆಚರಿಸುತ್ತಾರೆ. ಅಂದು ಅನೇಕ ಸ್ಥಳಗಳಲ್ಲಿ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಭಾರತ ದೇಶವು ಸ್ವತಂತ್ರವಾಗಿ ಇಂದು 75 ವರ್ಷಗಳು ಕಳೆದಿವೆ. ಸ್ವಾತಂತ್ರ್ಯ ಹೋರಾಟಗಾರರಾದ ತಾತ್ಯಾ ಟೋಪೆ, ವೀರ ಸಾವರ್ಕರ್, ಸುಭಾಷ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತಸಿಂಗ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮುಂತಾದ ಅನೇಕ ಗಣ್ಯರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ. ನಮ್ಮ ಸಂವಿಧಾನದ ಪ್ರಕಾರ ನಮಗೆ ಆಚಾರ-ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವಿದೆ.

ಸ್ವತಂತ್ರವಾಗಿರಲು ಯಾರು ಇಷ್ಟಪಡುವುದಿಲ್ಲ? ಈ ಸೃಷ್ಟಿಯಲ್ಲಿ ಪ್ರತಿಯೊಬ್ಬರು ತಾನು ಸ್ವತಂತ್ರವಾಗಿ ಇರಬೇಕು ಮತ್ತು ಸ್ವತಂತ್ರವಾಗಿ ಬಾಳಬೇಕೆಂದು ಬಯಸುತ್ತಾರೆ. ಮೃಗಾಲಯದ ಪ್ರಾಣಿಗಳಿಗೆ, ಪಂಜರದ ಪಕ್ಷಿಗೆ, ಬಲೆಯಲ್ಲಿ ಸಿಕ್ಕಿರುವ ಮೀನುಗಳಿಗೆ, ಜೈಲುಗಳಲ್ಲಿರುವ ಕೈದಿಗಳಿಗೆ ಮುಕ್ತರಾಗಬೇಕೆಂಬ ಹಂಬಲವಿರುತ್ತದೆ. ಮಾನವನ ಮನಸ್ಸು ಸ್ವತಂತ್ರವಾಗಿ ನೀಲಿ ಆಕಾಶದಲ್ಲಿ ಹಕ್ಕಿಯಂತೆ ಹಾರುತ್ತಿರಬೇಕೆಂದು ಬಯಸುತ್ತದೆ. ಮನುಷ್ಯನು ಯಾವುದೇ ಭಯ, ಚಿಂತೆ, ಒತ್ತಡ, ಕಾಯಿಲೆ, ಸಮಸ್ಯೆಗಳಿಗೆ ವಶನಾಗದೇ ನಿರ್ಭಯನಾಗಿರಬೇಕೇಂದು ಬಯಸುತ್ತಾನೆ.

ಈಶ್ವರೀಯ ವಿಶ್ವವಿದ್ಯಾಲಯ ಜ್ಞಾನದ ಪ್ರಕಾರ ಮತ್ತು ಭಗವಂತನ ಜ್ಞಾನದ ಆಧಾರದಿಂದ ಸರ್ವಾಂಗೀಣ ಸ್ವಾತಂತ್ರ್ಯವನ್ನು 6 ವಿಭಾಗಗಳಲ್ಲಿ ವಿಂಗಡಿಸಬಹುದು.

1. ಶಾರೀರಿಕ ಸ್ವಾತಂತ್ರ್ಯ : ಮಾನವ ಯಾವುದಾದರೂ ಕಾಯಿಲೆಗಳು, ದೈಹಿಕ ನ್ಯೂನ್ಯತೆ ಮತ್ತು ಅಪಘಾತಗಳಿಗೆ ತುತ್ತಾಗುತ್ತಾನೆ. ವೃದ್ಧಾವಸ್ಥೆಯನ್ನು ತಲುಪಿದಾಗ ಅನೇಕ ಶಾರೀರಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವನು ರೋಗಗಳಿಂದ ಮುಕ್ತನಾಗಲು ತನ್ನ ಹಣವನ್ನು ನೀರಿನಂತೆ ಖರ್ಚು ಮಾಡಲು ತಯಾರಾಗುತ್ತಾನೆ. ಶರೀರ ಸದೃಢವಾಗಿರದಿದ್ದರೆ ಅವನ ಜೀವನ ನೀರಸವೆನಿಸುತ್ತದೆ.

2. ಆರ್ಥಿಕ ಸ್ವಾತಂತ್ರ್ಯ : ಮಾನವ ಹಣದ ಕೊರತೆಯಿಂದ ಪ್ರಭಾವಿತನಾಗಿ ಕಳ್ಳತನ, ದರೋಡೆ, ಮೋಸ, ವಂಚನೆ, ಮಾಡಲು ಪ್ರಾರಂಭಿಸುತ್ತಾನೆ. ಅವನಿಗೆ ಜೀವನ ಸಾಗಿಸಲು ಸಾಕಷ್ಟು ಸಂಪತ್ತು ಇರಬೇಕು.

3. ಮಾನಸಿಕ ಸ್ವಾತಂತ್ರ್ಯ : ಆರೋಗ್ಯ ಸರಿಯಿದ್ದರೂ ಸಂಪತ್ತಿನ ಕೊರತೆಯಿದ್ದರೆ ಅವನಿಗೆ ಚಿಂತೆ ಕಾಡುತ್ತ್ತಿರುತ್ತದೆ. ಆಗ ಅವನು ಸುಖಿಯಾಗಲು ಸಾಧ್ಯವಿಲ್ಲ. ಮನಸ್ಸಿನಲ್ಲಿ ಅಪಘಾತ, ಸಂಕಟದ ಭಯವಿದ್ದರೆ ಅವನ ಜೀವನ ದು:ಖಿಯಾಗುತ್ತದೆ.

4. ಸಂಬಂಧದ ಸ್ವಾತಂತ್ರ್ಯ: ಅನೇಕ ಸಂಬಂಧಗಳು ಮಾನವನಿಗೆ ದು:ಖವನ್ನು ನೀಡುತ್ತವೆ ತಂದೆ ತಾಯಿಯ ಆಸೇಗಳು, ಮಕ್ಕಳ ಕಾಟ, ಪತ್ನಿಯ ಬೇಡಿಕೆಗಳು, ಅಧಿಕಾರಿಯ ಸೂಚನೆಗಳು ಅವನಿಗೆ ಚಿಂತೆಯ ವಿಷಯವಾಗಿರುತ್ತವೆ. ಸಂಬಂಧಗಳಲ್ಲಿ ಪ್ರೀತಿ, ಸ್ನೇಹ ಸಹಯೋಗವಿದ್ದರೆ ಜೀವನ ಸುಖಮಯವಾಗಿರುತ್ತದೆ.

5. ಪ್ರಕೃತಿಯ ಸ್ವಾತಂತ್ರ್ಯ : ನಿರೋಗಿ ಕಾಯ, ಸಂಪತ್ತು, ಸಂಬಂಧಗಳ ಸುಖ, ಮಾನಸಿಕ ಅರೋಗ್ಯ ಎಲ್ಲವೂ ಇದ್ದು, ಪ್ರಕೃತಿಯ ವಿಕೋಪವಿದ್ದರೆ ಅವನ ಜೀವನ ಸಂಕಟಮಯವಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿ, ಮಂಗನ ಕಾಯಿಲೆ, ಕರೊನಾ 3 ನೇ ಅಲೆ, ಡೆಲ್ಟಾ, ಡೆಂಗ್ಯೂ ಜ್ವರ, ಬಿಸಿಲು, ಚಳಿಯಿಂದ ಮಾನವ ಪರಿತಪಿಸುತ್ತಿದ್ದಾನೆ.

6. ರಾಜಕೀಯ ಸ್ವಾತಂತ್ರ್ಯ : ನಮ್ಮ ದೇಶ ಸಾವಿರಾರು ವರ್ಷಗಳಿಂದ ಪರತಂತ್ರವಾಗಿತ್ತು. ರಾಜಕೀಯ ಸ್ವಾತಂತ್ರ್ಯಕ್ಕೆ ಬಹಳ ಮಹತ್ವವಿದೆ. ದೇಶ ರಕ್ಷಣೆಗಾಗಿ ಮಿಲಿಟರಿ ಇರುತ್ತದೆ. ಶತ್ರು ದೇಶಗಳ ಆಕ್ರಮಣದ ಚಿಂತೆ ಸದಾ ಇರುತ್ತದೆ.

ಮನುಷ್ಯನು ಪಕೃತಿಗೆ ಮಾಲೀಕನಾಗಿರಬೇಕು. ಪ್ರಕೃತಿಯೆಂದರೆ ಕೇವಲ ಪಂಚ ತತ್ವಗಳಷ್ಟೇ ಅಲ್ಲ, ನಮ್ಮ ಶರೀರದಲ್ಲಿರುವ ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಬಾಯಿ, ಕೈ ಕಾಲು, ಚರ್ಮಗಳೂ ಸಹ ಪ್ರಕೃತಿಯೇ. ಇವುಗಳೊಂದಿಗೆ ಸೂಕ್ಷ್ಮ ಕರ್ಮೇಂದ್ರಿಯಗಳಾದ ಮನಸ್ಸು-ಬುದ್ಧಿ-ಸಂಸ್ಕಾರಗಳು ನಮ್ಮ ಹತೋಟಿಯಲ್ಲಿದ್ದರೆ ಮಾತ್ರ ನಾವು ನಿಜವಾದ ಸ್ವತಂತ್ರರು.

ಸ್ವಾತಂತ್ರ್ಯತೆ ಮತ್ತು ಸ್ವಚ್ಛಂದತೆಯಲ್ಲಿ ಅಂತರವಿದೆ. ಆದರೆ ಇಂದು ಮಾನವ ತನ್ನ ದುರ್ಬಲತೆಗಳಿಂದಾಗಿ ಸ್ವಾತಂತ್ರ್ಯದ ಯಥಾರ್ಥವನ್ನು ತಿಳಿದುಕೊಳ್ಳದೇ ಕಾಮ, ಕೋಧ, ಲೋಭ, ಮೋಹ, ಅಹಂಕಾರ ಮುಂತಾದ ವಿಕಾರಗಳಿಗೆ ವಶನಾಗಿ ಸ್ವಚ್ಛಂದ ಜೀವನಕ್ಕೆ ದಾಸನಾಗಿದ್ದಾನೆ. ಆದ್ದರಿಂದಲೇ ಮಾನವ ದು:ಖ, ಅಶಾಂತಿ, ಭಯ, ರೋಗ, ಚಿಂತೆ, ಪ್ರ‍್ರಾಕೃತಿಕ ವಿಕೋಪಗಳು ಮತ್ತು ಇತರೆ ಸಮಸ್ಯೆಗಳ ಭವಸಾಗರದಲ್ಲಿ ಮುಳುಗಿದ್ದಾನೆ.

ಬನ್ನಿ, ಈ ಸ್ವಾತಂತ್ರ್ಯ ದಿನಾಚರಣೆಯಂದು ನಾವೆಲ್ಲಾ ವಿಕಾರಗಳಿಂದ ಮುಕ್ತರಾಗಲು ರಾಜಯೋಗವನ್ನು ಕಲಿಯೋಣ. ಸರ್ವ ಶಕ್ತಿವಂತ ಭಗವಂತನ ಅತಿಪ್ರಿಯವಾದ ಮಗು ಎಂದು ತಿಳಿದುಕೊಳ್ಳೋಣ. ಅವನ ಛತ್ರಛಾಯೆಯೊಳಗಿದ್ದು ದು:ಖ, ಅಶಾಂತಿ, ಭಯ, ರೋಗ, ಚಿಂತೆ, ಪ್ರ‍್ರಾಕೃತಿಕ ವಿಕೋಪಗಳು ಮತ್ತು ಇತರೆ ಸಮಸ್ಯೆಗಳಿಂದ ಮುಕ್ತರಾಗೋಣ. ವಿನಾಶಕಾಲೇ ವಿಪರೀತ ಬುದ್ಧಿಯಾಗದೇ ಈ ಅಂತಿಮ ಸಮಯದಲ್ಲಿ ಭಗವಂತನ ಆದೇಶದಂತೆ ನಡೆದು ರಾಮರಾಜ್ಯ (ಸ್ವರ್ಗ) ಸ್ಥಾಪನೆಗೆ ಸಹಾಯ ಮಾಡೋಣ.

“ಜಹಾ ಡಾಲ್-ಡಾಲ್ ಪರ್ ಸೋನೇ ಕಿ ಚಿಡಿಯಾ ಕರತಿ ಹೈ ಬಸೇರಾ
ವೋ ಭಾರತ ದೇಶ ಹೈ ಮೇರಾ ವೋ ಭಾರತ ದೇಶ ಹೈ ಮೇರಾ”
(ರೆಂಬೆ-ಕೊಂಬೆಗಳಲ್ಲಿ ಸ್ವರ್ಣಿಮ ಪಕ್ಷಿ ವಾಸಿಸುವಂತಹ ಭಾರತ ದೇಶ ನನ್ನದು).

ಗಮನವಿರಲಿ : ರಾಷ್ಟ್ರಧ್ವಜದ ಬಗ್ಗೆ ಗೌರವವಿರಲಿ, ಪ್ಲಾಸ್ಟಿಕ್ ಧ್ವಜಗಳನ್ನು ತ್ಯಜಿಸೋಣ. ತ್ರಿವರ್ಣದ ಮಾಸ್ಕ್ಗಳನ್ನು ಧರಿಸದಿರಿ.
“ಜೈ ಹಿಂದ್, ಜೈ ಭಾರತಾಂಬೆ, ಜೈ ಜಗನ್ಮಾತೆ.”

ವಿಶ್ವಾಸ ಸೋಹೋನಿ.
ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್,
7349632530 9483937106

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button