ಭಾರತದ ಆಚಾರ-ವಿಚಾರ ಇಡೀ ಜಗತ್ತಿಗೆ ಮಾದರಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ – ಘಟಪ್ರಭಾ : ಇಲ್ಲಿಗೆ ಸಮೀಪದ ಅರಭಾವಿಯಲ್ಲಿ ಜರುಗುತ್ತಿರುವ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗತಿಸಿಹೋದ ನಮ್ಮ ಬಾಲ್ಯದ ನೆನಪುಗಳು ಜಾತ್ರೆಗಳು ಮಾಡಿಕೊಡುತ್ತವೆ ಎಂದು ಹೇಳಿದರು.
ಅರಭಾವಿಯಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಜಾತ್ರೆ ಭಕ್ತರನ್ನು ತನ್ನೆಡೆ ಸೆಳೆಯುತ್ತಿದೆ. ಸಾವಿರಾರು ಭಕ್ತರು ತಮ್ಮ ಇಷ್ಠಾರ್ಥಗಳಿಗೆ ದೇವರಲ್ಲಿ ಮೊರೆ ಹೋಗುತ್ತಾರೆ. ಇದು ನಾವು ಧರ್ಮದಲ್ಲಿ ಇಟ್ಟಿರುವ ನಂಬಿಕೆ. ನಮ್ಮ ನಂಬಿಕೆಗಳಿಗೆ ದೇವರು ಎಂದೂ ಮೋಸ ಮಾಡುವುದಿಲ್ಲ. ನಮ್ಮ ಇಷ್ಠಾರ್ಥಗಳನ್ನು ಖಂಡಿತವಾಗಿಯೂ ದೇವರು ಈಡೇರಿಸುತ್ತಾನೆಂದು ಅವರು ಹೇಳಿದರು.
ನಮ್ಮ ದೇಶದ ಇತಿಹಾಸ ಹಾಗೂ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಇಲ್ಲಿ ಎಲ್ಲರೂ ಪರಸ್ಪರ ಅಣ್ಣ-ತಮ್ಮಂದಿರರಂತೆ, ಅಕ್ಕ-ತಂಗಿಯರಂತೆ ಬದುಕುತ್ತಾರೆ. ಜಾತಿ-ಧರ್ಮಗಳು ನಾನಾ ಪ್ರಕಾರದಲ್ಲಿ ಇದ್ದರೂ ಆಚರಣೆಯಲ್ಲಿ ಒಂದೇ ವಿಧದಂತೆ ಇರುತ್ತದೆ. ಇದುವೇ ನಮ್ಮ ರಾಷ್ಟ್ರ ಜಾತ್ಯಾತೀತಗಳ ಬೀಡು ಎಂದು ಭಾರತೀಯ ಆಚಾರ-ವಿಚಾರಗಳನ್ನು ಪ್ರಶಂಸಿಸಿದರು.
ನಾಡಿಗೆ ಒಳ್ಳೆಯದಾಗಲಿ : ಈ ಬಾರಿ ಉತ್ತಮ ಮಳೆಯಾಗಲಿ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಬರಲಿ. ಮಳೆಯಾಗಿ ನಾಡು ಸಮೃದ್ಧವಾಗಲಿ. ರೈತ ಸಂತೋಷವಾಗಿದ್ದರೆ, ಇಡೀ ಜಗವೇ ಸುಖವಾಗಿರುತ್ತದೆ. ಮಳೆ ಬಂದು ಉತ್ತಮ ಫಸಲು ಬರಲಿ. ನಾಡಿಗೆಲ್ಲ ಒಳ್ಳೆಯದಾಗಲಿ ಎಂದು ದೇವರಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಾರ್ಥಿಸಿಕೊಂಡರು.
ಇಡೀ ಊರೇ ಬಂಡಾರಮಯ : ಜು.೧ ರಿಂದ ಆರಂಭಗೊಂಡಿರುವ ಅರಭಾವಿ ಗ್ರಾಮ ದೇವತೆ ಜಾತ್ರೆ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತಿದ್ದು ಒಟ್ಟು ಐದು ದಿನಗಳವರೆಗೆ ಜರುಗಲಿದೆ. ಜಾತ್ರೆ ನಿಮಿತ್ಯ ಇಡೀ ಅರಭಾವಿ ಬಂಡಾರಮಯವಾಗಿದೆ. ಪರಸ್ಪರ ಭಕ್ತರು ಬಂಡಾರ ಎರಚುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು, ಬರುವ ಶುಕ್ರವಾರದಂದು ಅರಭಾವಿ ಜಾತ್ರೆ ಸಂಪನ್ನವಾಗಲಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮದೇವತೆ ದರ್ಶನ ಪಡೆದರು. ಬಳಿಕ ಪಟ್ಟಣದ ಪ್ರಮುಖರು ಶಾಸಕರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಶಿವಯ್ಯಾ ಹಿರೇಮಠ, ಶಂಕರ ಬಿಲಕುಂದಿ, ನಿಂಗಪ್ಪ ಈಳಿಗೇರ, ಮುತ್ತೆಪ್ಪ ಝಲ್ಲಿ, ರಾಯಪ್ಪ ಬಂಡಿವಡ್ಡರ, ಭೀಮಪ್ಪ ಹಳ್ಳೂರ, ರಮೇಶ ಮಾದರ, ವಿಠ್ಠಲ ದೇವುಗೋಳ, ಕೆಂಪಣ್ಣ ಕಡಲಗಿ, ಸಾತಪ್ಪ ಜೈನ್, ಕೆಂಚಪ್ಪ ಮಂಟೂರ, ಪಟ್ಟಣ ಪಂಚಾಯತ ಸದಸ್ಯರು ಹಾಗೂ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಸಮೀತಿಯ ಸದಸ್ಯರುಗಳು ಉಪಸ್ಥಿತರಿದ್ದರು.////
Web Title : India is a model for the whole world says Balachandra Jarkiholi
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ