‘ಸಬ್ ಕುಚ್ ಠೀಕ್ ಹೈ’ ಅನ್ನುವುದೆಷ್ಟು ನಿಜ?

ಶ್ಯಾಮ ಹಂದೆ,  ಮುಂಬೈ: ಇಂದು ನಮ್ಮ ದೇಶ ಮಾತ್ರವಲ್ಲ , ಪ್ರಪಂಚವೇ ಗಂಭೀರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು ಅನೇಕ ದೇಶಗಳು ಈ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತ್ತಿರುವಾಗ ನಮ್ಮಲ್ಲಿ ಏನು ನಡೆಯುತ್ತಿದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಪೆಟ್ರೋಲ್ ಬೆಲೆ ಪುನ: ಏರುವ ಹಂತದಲ್ಲಿದೆ. ಬಹುತೇಕ ಎಲ್ಲ ಮಾಧ್ಯಮಗಳು, ವರದಿಗಾರರು, ರಾಜಕೀಯ ವಿಶ್ಲೇಷಕರು ಮತ್ತು ಇತರರು ಮಹಾನ್ ನಟ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣ, ಮತ್ತು ಪ್ರಕರಣವನ್ನು ಸಿಬಿಐ ಕಡೆ ವರ್ಗಾಯಿಸಿ ದ್ದರಿಂದ ಆಗುವ ಸಂಭಾವ್ಯ ಪರಿಣಾಮಗಳು, ರಾಜ್ಯ-ರಾಜ್ಯಗಳಲ್ಲಿ ನಡೆಯುತ್ತಿರುವ ರಾಜಕೀಯ ಪಕ್ಷಗಳ ಕೆಸರೆರಚಾಟಗಳಂತಹ ಚರ್ಚೆಯಲ್ಲಿ ತೊಡಗಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದು,ಬಹುಸಂಖ್ಯಾತ ಭಾರತೀಯರು ಆ ಚರ್ಚೆಗಳಿಂದ ಸಿಡಿಯುವ ಜ್ಞಾನದ ಕಣಗಳನ್ನು ಹೆಕ್ಕುವಲ್ಲಿ ತೊಡಗಿರುವಂತಿದೆ.

ಭಾರತದ ಅಳಿಯನ ಕರಾಮತ್ತು;
ವಾಸ್ತವವಾಗಿ, ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಹೇಗೆ ಹೊಸ-ಹೊಸ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿಯವರ ಅಳಿಯ, ಇಂಗ್ಲೆಂಡ್‌ನ ಹಣಕಾಸು ಸಚಿವರಾದ ರಿಷಿ ಸುನಕ್ ಅಂತವರು ತೋರಿಸಿಕೊಟ್ಟಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಟೆಲ್‌ಗೆ ಹೋಗಿ ತಿನ್ನಬೇಕೆಂದು ವಿಶೇಷ ಯೋಜನೆಯನ್ನು ಅವರು ಘೋಷಿಸಿದರು. ಅದರಂತೆ, ಆ ದೇಶದಲ್ಲಿ, ಹೋಟೆಲ್ ತಿನ್ನಾಟದ ಮೇಲಾಗುವ ಖರ್ಚಿನ ತಲಾ 10 ಪೌಂಡ್ ವರೆಗಿನ ಬಿಲ್ ವೆಚ್ಚದ ಅರ್ಧದಷ್ಟು ಹಣವನ್ನು ಸರ್ಕಾರ ಭರಿಸುತ್ತದೆ. ಪರಿಣಾಮವಾಗಿ, ಹೋಟೆಲ್‌ಗಳಲ್ಲಿ ಜನರ ಸಾಲು ಕಾಣಲಾರಂಭಿಸಿ ಆ ದೇಶದ 18 ಲಕ್ಷ ರೆಸ್ಟೋರೆಂಟ್ ಕಾರ್ಮಿಕರ ಉದ್ಯೋಗ ಬಚಾವಾಯಿತು. ಜರ್ಮನಿ, ಅಮೇರಿಕಾ ಮತ್ತು ಯುರೋಪ್ ನ ಇತರ ಕೆಲವು ದೇಶಗಳು ಸಹ ಇಂತಹ ಹೊಸ-ಹೊಸ ಕ್ರಮಗಳನ್ನು ಯೋಜಿಸುವ ಮೂಲಕ ಜನರಿಂದ ಬೇಡಿಕೆ ಹೆಚ್ಚಿಸಲು ಪ್ರಯತ್ನಿಸಿದ್ದರಿಂದ ಆ ದೇಶದ ಅರ್ಥ ವ್ಯವಸ್ಥೆ ಮೇಲೆ ಇದರ ಸಕಾರಾತ್ಮಕ ಪರಿಣಾಮ ಸ್ಪಷ್ಟವಾಗಿ ಗೋಚರಿಸಲಾರಂಭಿಸಿವೆ.

ಐಸಿಯೂಗೆ ಸೇರಿದ ಅರ್ಥವ್ಯವಸ್ಥೆ:
ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಕೊರೋನಾ ವೈರಸ್‌ನಿಂದ ಉಲ್ಬಣಗೊಂಡಿವೆ ಎಂದು ಹೇಳಲು ವ್ಯವಸ್ಥೆ ಇದೆ. ಆದರೆ ಈ ಕೊರೋನಾ ಸೊಂಕು ಪ್ರಾರಂಭವಾಗುವ ಮೊದಲೇ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ನಿಶ್ಯಕ್ತವಾಗಿರುವುದರಿಂದ ಕೊರೋನಾಕ್ಕೆ ಅಪವಾದಿಸಿ ಪ್ರಯೋಜನವಿಲ್ಲ. ನಮ್ಮ ದೇಶದ ಅರ್ಥ ವ್ಯವಸ್ಥೆ ಕೊರೋನಾ ಮುನ್ನವೆ ಅಸ್ತವ್ಯಸ್ತವಾಗಿತ್ತು. ಕೊರೋನಾದಿಂದ ಅದು ನೇರವಾಗಿ ಐಸಿಯೂಗೆ ಸೇರಿದೆ ಅಷ್ಟೆ. ಈ ಹಿನ್ನೆಲೆಯಲ್ಲಿ, ನಾವು ನಮ್ಮ ವಾಸ್ತವವನ್ನು ತೆರೆದ ಕಣ್ಣುಗಳಿಂದ ನೋಡಲಿದ್ದೇವೆಯೋ ಎಂಬುದು ನಿಜವಾದ ಪ್ರಶ್ನೆ?

ಪೂರೈಕೆ ಇದ್ದರೂ, ಡಿಮಾಂಡ್ ಜೀರೋ:
ಏಕೆಂದರೆ, ಅರ್ಥಶಾಸ್ತ್ರಜ್ಞರ ಪ್ರಕಾರ, ನಮ್ಮ ಅರ್ಥವ್ಯವಸ್ಥೆಯ ಗತಿ ಶೂನ್ಯಕ್ಕಿಂತ ಕೆಳಗಿಳಿಯಲಿದೆ. ನಮ್ಮ ಅರ್ಥವ್ಯವಸ್ಥೆ ಈ ಮೊದಲು ಹಲವು ಬಾರಿ ಕುಸಿದಿದೆ ಮತ್ತು ಅದರ ವೇಗ ಕೂಡ ಮಂದಗತಿ ಕಾಣಿಸಿದೆ. ಆದರೆ 1979 ರಿಂದ ಎಂದಿಗೂ ವಜಾ ಆಗಿರಲಿಲ್ಲ. ಈ ಬಾರಿ ಆ ಹಂತಕ್ಕೆ ತಲುಪಿದೆ. 1980 ರ ದಶಕದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಜಾಗತಿಕ ತೈಲ ಸಮಸ್ಯೆ ಕಾರಣವಾಗಿ ಎಲ್ಲಾ ದೇಶಗಳ ಪರಿಸ್ಥಿತಿ ಶೋಚನೀಯವಾಗಿತ್ತು. ಈಗ ಹಾಗೇ ಹೇಳಲು ಸಾಧ್ಯವಿಲ್ಲ. ನಮ್ಮಂತಹ ದೇಶಗಳು ಪ್ರಸ್ತುತ ಬಿಕ್ಕಟ್ಟಿನಲ್ಲಿ ಇತರರಿಗಿಂತ ಹೆಚ್ಚು ಹೊಡೆತಕ್ಕೆ ಒಳಗಾಗಲಿವೆ. ಅನೇಕ ತಜ್ಞರ ಪ್ರಕಾರ, ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನವು ಈ ವರ್ಷ ಕನಿಷ್ಠ ಶೇಕಡ 5 ರಿಂದ 10ಕ್ಕೆ ಇಳಿಯಬಹುದು. ಹಿಂದಿನ ಮತ್ತು ಪ್ರಸ್ತುತ ಬಿಕ್ಕಟ್ಟಿನ ನಡುವಿನ ವ್ಯತ್ಯಾಸವೆಂದರೆ ಹಿಂದಿನ ಅರಿಷ್ಟತೆಯಿಂದಾಗಿ ಬಡವರಿಗೆ ಊಟಕ್ಕೂ ಗತಿ ಇರುತ್ತಿರಲಿಲ್ಲ. ಆದರೆ, ಕೆಲವು ಹಿರಿಯ ಪತ್ರಕರ್ತರು ತಮ್ಮ ವರದಿಯಲ್ಲಿ ಪ್ರಕಟಿಸಿದ ಪ್ರಕಾರ, ಈ ವರ್ಷ ಧಾನ್ಯದ ಗೋದಾಮುಗಳು ತುಂಬಿ ತುಳುಕುವಷ್ಟು ಬೆಳೆಯಾಗಲಿವೆ. ಆದರೆ,ಹೆಚ್ಚಿನ ಸಂಖ್ಯೆಯ ಜನರಿಗೆ ಈ ಧಾನ್ಯಗಳನ್ನು ಖರೀದಿಸುವ ಸ್ಥಿತಿಯೇ ಇರಲಿಕ್ಕಿಲ್ಲ. ಇದರರ್ಥ ಆರ್ಥಿಕ ಬಿಕ್ಕಟ್ಟಿನ ಈ ಕಾಲದಲ್ಲಿ ಪೂರೈಕೆ ಸಮಸ್ಯೆಯಲ್ಲ,ಸಮಸ್ಯೆ ಬೇಡಿಕೆಯ ಕೊರತೆ.

ಆರ್ಥಿಕ ಅಜ್ಞಾನ:
ಬೇಡಿಕೆ ಇಲ್ಲ ಏಕೆಂದರೆ ಜನರ ಕೈಯಲ್ಲಿ ಹಣವಿಲ್ಲ ಮತ್ತು ಇದ್ದವರು ನಾಳೆಯ ಚಿಂತೆಯಿಂದಾಗಿ ಅದನ್ನು ಖರ್ಚು ಮಾಡಲು ಸಿದ್ದರಿಲ್ಲ.ಆದ್ದರಿಂದ ಬೇಡಿಕೆ ಹೇಗೆ ಹೆಚ್ಚಾಗಬಹುದು ಎಂಬುದರ ಕುರಿತು ಪ್ರಯತ್ನಿಸಬೇಕಾಗಿದೆ. ಆದರೆ ಇದರ ಬಗ್ಗೆ ಒಂದು ಮಾತು ಹೇಳಲು ಸರ್ಕಾರ ಸಿದ್ಧವಿಲ್ಲ. ನಾವು ಯೋಜಿಸಿರುವ ಕ್ರಮಗಳು ಪರಿಪೂರ್ಣವೆಂದು ಸರ್ಕಾರದ ಮನವರಿಕೆ ಮತ್ತು ಅವು ಸಾಕಾಗುವುದಿಲ್ಲ ಎಂಬ ಅಂಶದ ಬಗ್ಗೆ ಅನೇಕರಿಗಿರುವ ಅಜ್ಞಾನ. ಇಂತಹ ವಾತಾವರಣದಲ್ಲಿ ಒಂದು ಅಭಾಸದ ಆನಂದ ಸೃಷ್ಟಿಯಾಗುತ್ತದೆ ಮತ್ತು ಎಲ್ಲರೂ ಸಂತೋಷದಿಂದ ಅದರಲ್ಲಿ ಮಗ್ನರಾಗುವಂತಹ ನಮ್ಮ ಪರಿಸ್ಥಿತಿ ಆಗಿದೆ.

ಅಗ್ಗದ ಸಾಲ ಉಪಯೋಗವೇನು?:
ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ಸರ್ಕಾರದ ಯೋಜನೆಗಳು ಸಾಲ ಖಾತರಿ ಮಿತಿಯನ್ನು ಹೆಚ್ಚಿಸುವುದರ ಹೊರತು ಹೆಚ್ಚೇನು ಮಾಡಿಲ್ಲ. ಅದರಲ್ಲಿ ಕೈಗಾರಿಕೋದ್ಯಮಿಗಳಿಗೆ ಸಾಲದ ಮಿತಿಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಬೇಡಿಕೆಯಿಲ್ಲದಿದ್ದಾಗ ಹೆಚ್ಚು ಮತ್ತು ಅಗ್ಗದ ಸಾಲದ ಆಧಾರದಲ್ಲಿ ಹೆಚ್ಚುವರಿ ಉತ್ಪಾದನೆ ಉತ್ಪಾದಿಸಿ ಮಾರುಕಟ್ಟೆಗೆ ರವಾನಿಸಿ ಉಪಯೋಗವೇನು?

ಆಪಲ್ ಕಂಪನಿ ಉದಾಹರಣೆ:
ಈ ಹಿನ್ನೆಲೆಯಲ್ಲಿ, ಜಗತ್ತಿನ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆಪಲ್ ನಂತಹ ಕಂಪನಿಗಳ ಉದಾಹರಣೆ ದೃಷ್ಟಿಯಲ್ಲಿರಬೇಕು. ಕಾರಣ -ಆಪಲ್ ಕಂಪೆನಿ ಇತ್ತೀಚೆಗೆ 2 ಲಕ್ಷ ಕೋಟಿ ಡಾಲರ್ ಮಾರುಕಟ್ಟೆ ಮೌಲ್ಯದ ಗಡಿ ದಾಟಿದೆ. ಈ ಉತ್ತುಂಗವನ್ನು ತಲುಪಿದ ಅಮೆರಿಕದ ಇದು ಮೊದಲ ಕಂಪನಿಯಾಗಿದೆ. ಡಾಲರ್ ಸರಾಸರಿ ದರ 75 ರೂ ಎಂದು ಉಹಿಸಿ, ಈ ಮೌಲ್ಯದ ಭಾರತೀಕರಣ ಮಾಡಿದಲ್ಲಿ ಆಗುವ ಮೊತ್ತ 15,0000000000000! ಆಪಲ್ ನಂತಹ ಕಂಪನಿಗಳು ಜಾಗತಿಕ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಉದಾಹರಣೆಯನ್ನು ಪ್ರ ಸ್ತುತಪಡಿಸುವ ಉದ್ದೇಶ, ಆಪಲ್ ಯಶಸ್ಸಿನ ಪ್ರಶಂಸೆ ಹಾಡುವುದಲ್ಲ. ನಾವು ಏನು ಮಾಡಬೇಕಾಗಿದೆ ಎಂಬುದರ ಅರಿವು ಮೂಡಿಸುವುದಿದೆ.ಇಂತಹ ಪ್ರಶ್ನೆಗಳು ನಮ್ಮ ಭಾಗ್ಯವಿಧಾತರಾದ ರಾಜಕಾರಣಿಗಳಿಗೆ ಕಾಡು ತ್ತದೆಯೇ?

ಇತಿಹಾಸದ ಪುನರಾವರ್ತಿ:
ಆಪಲ್ ಉತ್ತುಂಗಕ್ಕೇರುವ ಹೊತ್ತಿಗೆ, ನಮ್ಮ ಸಮಾಜವು ಅತ್ಯಂತ ಕಳಪೆ ವಿಷಯದಲ್ಲಿ ತಲ್ಲೀನವಾಗಿತ್ತು.ಇದು ನಮ್ಮದೇ ಇತಿಹಾಸದ ಪುನರಾವರ್ತಿ. ದೇಶಕ್ಕೆ ಚಿನ್ನ ಅಡವಿಡುವ ಕಾಲ ಬಂದಾಗ, ಬಿಕ್ಕಟ್ಟಿನ ಗಂಭೀರತೆಯ ಬಗ್ಗೆ ಗೊಡವೆ ಇಲ್ಲದ ಅನೇಕ ಜನರು ಆ ಸಮಯದಲ್ಲಿ ದೂರದರ್ಶನದ ಭಕ್ತಿಮಯ ಸೀರಿಯಲ್ ಗಳಲ್ಲಿ ತೀವ್ರ ಮಗ್ನರಾಗುತ್ತಿದ್ದರು. ಇದರಲ್ಲಿ ಯಾವುದೇ ಮುಗ್ಧತೆ ಇಲ್ಲ, ಇದ್ದರೆ ಕೇವಲ ಅಜ್ಞಾನ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button