Election NewsKannada NewsKarnataka NewsLatest

*ಮತಗಟ್ಟೆಯ ಮೇಲೆ ಗ್ರಾಮಸ್ಥರಿಂದ ದಾಳಿ; ಮತಯಂತ್ರ ಪೀಠೋಪಕರಣ ದ್ವಂಸ; ಲಾಠಿ ಚಾರ್ಜ್*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸಿದ್ದ 5 ಗ್ರಾಮಗಳ ಗ್ರಾಮಸ್ಥರು ಮತಗಟ್ಟೆಯ ಮೇಲೆ ದಾಳಿ ನಡೆಸಿ, ಮತಯಂತ್ರ, ಪೀಠೋಪಕರಣಗಳನ್ನು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳ ಗ್ರಾಮಸ್ಥರು ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದರು. ಚುನಾವಣಾ ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಕೆ ಮಾಡಿ ಇಂಡಿಗನತ್ತ ಮತಗಟ್ಟೆಗೆ ಕರೆತಂದಿದ್ದಾರೆ. ಈ ವೇಳೆ ಮತದಾನದಿಂದ ದೂರ ಉಳಿದಿದ್ದ ಇನ್ನೊಂದು ಗ್ರಾಮದ ಮತದಾರರು ಮತಗಟ್ಟೆ ಸುತ್ತ ನಿಂತಿದ್ದರು.

ಅವರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲಿಸರ ಮೇಲೆ, ಅಧಿಕರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಮತಗಟ್ಟೆಗೆ ನುಗ್ಗಿ ಅಲ್ಲಿದ್ದ ಮತಯಂತ್ರ, ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳಲ್ಲಿ ಈವರೆಗೆ ವಿದ್ಯುತ್, ನೀರು, ಸಾರಿಗೆ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೇ ಗ್ರಾಮಸ್ಥರು ಇಂದಿಗೂ ಕತ್ತಲೆಯಲ್ಲಿ ಕಾಲಕಳೆಯುತ್ತಿದ್ದಾರೆ. ಜನಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ಈ ಗ್ರಾಮಗಳ ಜನರ ಸಂಕಷ್ಟವನ್ನು ಆಲಿಸುತ್ತಿಲ್ಲ. ಇದರಿಂದ ಬೇಸತ್ತು ಚುನಾವಣೆ ಬಹಿಷ್ಕರಿಸಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.


Related Articles

Back to top button