*13 ವರ್ಷದ ಪ್ರೀತಿ ಮುಚ್ಚಿಟ್ಟು ಬೇರೊಂದು ವಿವಾಹವಾದ ವ್ಯಕ್ತಿ: ಮದುವೆಯಾದ 3 ತಿಂಗಳಿಗೆ ಶವವಾಗಿ ಪತ್ತೆಯಾದ ಪತ್ನಿ*

ಹುಬ್ಬಳ್ಳಿ: ಮದುವೆಯಾಗಿ ಮೂರು ತಿಂಗಳಿಗೆ ನವವಿವಾಹಿತೆ ನೇಣು ಬಿಗಿಸ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ನಂದಗೋಕುಲ ಬಡಾವಣೆಯಲ್ಲಿ ಜಯಶ್ರೀ ಬಡಿಗೇರ (31) ಶವವಾಗಿ ಪತ್ತೆಯಾಗಿದ್ದಾರೆ. ಮೇಯಲ್ಲಿ ಮದುವೆಯಾಗಿದ್ದ ಜಯಶ್ರೀ ಈಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ ಶಿವಾನಂದ ಎಂಬಾತನ ಜೊತೆ ಜಯಶ್ರೀ ವಿವಾಹವಾಗಿತ್ತು. ಮದುವೆಗೂ ಮುನ್ನ ಶಿವಾನಂದ ಬೇರೊಬ್ಬ ಯುವತಿಯನ್ನು 13 ವರ್ಷಗಳಿಂದ ಪ್ರೀತಿಸುತ್ತಿದ್ದನಂತೆ. ಈ ವಿಷಯ ಮುಚ್ಚಿಟ್ಟು ಆತ ಜಯಶ್ರೀಯನ್ನು ವಿವಾಹವಾಗಿದ್ದ. ಮದುವೆ ಬಳಿಕ ಶಿವಾನಂದ ಪ್ರೀತಿಸಿದ್ದ ಯುವತಿ, ಜಯಶ್ರೀಗೆ ಈ ವಿಷಯ ತಿಳಿಸಿದ್ದಾಳೆ. ಇದರಿಂದ ಜಯಶ್ರೀ ಹಾಗೂ ಶಿವಾನಂದ ದಂಪತಿ ನಡುವೆ ಜಗಳವಾಗಿದೆ. ಏನೇ ಆದರೂ ಪತಿ ಶಿವಾನಂದನ ಜೊತೆಯೇ ವಾಸವಾಗಲು ಜಯಶ್ರೀ ನಿರ್ಧರಿಸಿದ್ದಳು. ಇದೇ ವಿಚಾರವಾಗಿ ನಿನ್ನೆ ರಾತ್ರಿ ಕೂಡ ಗಂಡ-ಹೆಂಡತಿ ನಡುವೆ ಮತ್ತೆ ಜಗಳವಾಗಿದೆ. ಈಗ ಬೆಳಗಾಗುವಷ್ಟರಲ್ಲಿ ಜಯಶ್ರೀ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಮದುವೆ ಬಳಿಕ ಶಿವಾನಂದ ಜಯಶ್ರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನಂತೆ. ಇಲ್ಲಸಲ್ಲದ ಕಾರಣ ಹೇಳಿ ಕಿರಿಕಿರಿ ಮಾಡುತ್ತಿದ್ದನಂತೆ. ಈಗ ಮಗಳನ್ನು ಕೊಲೆ ಮಾಡಿ ನೇಣು ಬಿಗಿದ್ದಾನೆ ಎಂದು ಜಯಶ್ರೀ ಪೋಷಕರು ಆರೋಪಿಸಿದ್ದಾರೆ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
					 
				 
					 
					 
					 
					
 
					 
					 
					


