*ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ; ಸ್ವಕ್ಷೇತ್ರದಲ್ಲಿ ಇಂದ್ರಧನುಷ್ ಲಸಿಕೆ ಕಾರ್ಯಕ್ರಮಕ್ಕೆ ಡಿಸಿಎಂ ಚಾಲನೆ*
ಪ್ರಗತಿವಾಹಿನಿ ಸುದ್ದಿ; ರಾಮನಗರ: ಇಂದು ಕೇವಲ ಲಸಿಕೆ ಹಾಕಲು ಕ್ಷೇತ್ರಕ್ಕೆ ಬಂದಿಲ್ಲ, ಜನರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ನಮ್ಮ ಮನಸ್ಸು, ವಿಚಾರಕ್ಕೆ ಶಕ್ತಿ ಬರಬೇಕು ಎಂದರೆ ಆರೋಗ್ಯ ಚೆನ್ನಾಗಿರಬೇಕು. ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ಉತ್ತಮವಾಗಿರಬೇಕು. ಈ ಉದ್ದೇಶದಿಂದ ಸರ್ಕಾರ ಐದುವರ್ಷದ ಮಗುವಿನವರೆಗೂ ಸರ್ಕಾರ ಉಚಿತ ಲಸಿಕೆ ನೀಡುತ್ತಾ ಬಂದಿದೆ. ರಾಜ್ಯದುದ್ದಗಲ ಈ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಸಾಕೇತಿಕವಾಗಿ ಉದ್ಘಾಟನೆ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಇಂದ್ರಧನುಷ್ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಕ್ಷೇತ್ರದ ಶಾಸಕರು ಇಲ್ಲಿನ ಸಮಸ್ಯೆಗಳನ್ನು ನನ್ನ ಮುಂದೆ ಇಟ್ಟಿದ್ದಾರೆ. ನನಗೆ ಕನಕಪುರ ಕ್ಷೇತ್ರ ಎಷ್ಟು ಮುಖ್ಯವೋ ಶಾಂತಿನಗರ ಕ್ಷೇತ್ರವೂ ಅಷ್ಟೇ ಮುಖ್ಯ. ಆರೋಗ್ಯ, ಸಮುದಾಯ ಭವನ ವಿಚಾರವನ್ನು ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಮಂಗಳವಾರ ಬೆಂಗಳೂರು ನಗರದ ಅಭಿವೃದ್ದಿಯ ವಿಚಾರವಾಗಿ ಸಭೆ ಕರೆದಿದ್ದು, ಅದಕ್ಕೆ ಮುಂಚಿತವಾಗಿ ಒಂದು ಪೂರ್ವಭಾವಿ ಸಭೆ ನಡೆಸಿ ಬೆಂಗಳೂರಿನ ಅಭಿವೃದ್ದಿಗೆ ಏನು ಬೇಕು ಎನ್ನುವ ಕುರಿತು ಚರ್ಚೆ ನಡೆಸಿ ಅದನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಲಿದ್ದೇವೆ. ನಿಮ್ಮ ಭಾವನೆ ಹಾಗೂ ಬೇಡಿಕೆಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಕಾರ್ಯಕತರ ಜವಾಬ್ದಾರಿ. ಸರ್ಕಾರದ ಗ್ಯಾರಂಟಿ ಯೋಜನೆಗಳು ತಲುಪದವರಿಗೆ ಜನರೇ ಮುಂದೆ ನಿಂತು ಯೋಜನೆ ತಲುಪುವಂತೆ ಮಾಡಬೇಕು, ಯಾರಿಗೂ ಕಮಿಷನ್ ಕೊಡುವಂತಿಲ್ಲ, ಲಂಚ ನೀಡುವಂತಿಲ್ಲ.
ಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಹೆಣ್ಣು ಮಕ್ಕಳು ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಓಡಾಡುತ್ತಿದ್ದೀರಿ, ಒಬ್ಬರೇ ಓಡಾಡಬೇಡಿ ನಿಮ್ಮ ಗಂಡಂದಿರನ್ನು ಕರೆದುಕೊಂಡು ಹೋಗಿ, ಅವರು ಓಡಾಡಲಿ. 10 ಕೆ.ಜಿ ಅಕ್ಕಿ ನೀಡುತ್ತಿದ್ದೇವೆ. ಈ ತಿಂಗಳಿನಿಂದ 200 ಯೂನಿಟ್ ವರೆಗೂ ನೀವು ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ನೀವು ಶಾಸಕರ ಜತೆ ಸೇರಿಕೊಂಡು ನೀವು ವಾರ್ಡ್ ಮಟ್ಟದಲ್ಲಿ ಸಭೆ ಮಾಡಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಂತೆ ಮಾಡಬೇಕು ಎಂದು ಕರೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ