Latest

ಶಿಶು ಮರಣ ಪ್ರಮಾಣವನ್ನು ಒಂದಂಕಿಗೆ ಇಳಿಸುವ ಗುರಿ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಿಶು ಮರಣ ಪ್ರಮಾಣವು ರಾಜ್ಯದಲ್ಲಿ ಶೇ 2 ರಷ್ಟಿದ್ದು, ಇದನ್ನು ಒಂದಂಕಿಗೆ ಇಳಿಸುವುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ರೇನ್ಬೋ ಚಿಲ್ಡ್ರನ್ ಹಾಸ್ಪಿಟಲ್ ಆಯೋಜಿಸಿರುವ ಮಕ್ಕಳ ವೈದ್ಯಕೀಯ ಶಾಸ್ತ್ರದಲ್ಲಿನ ವಿಶೇಷ ನವೀಕರಣಗಳ ಕುರಿತ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.

ತಾಯಿ ಮರಣ ಪ್ರಮಾಣದಲ್ಲಿಯೂ ಇಳಿಕೆಯಾಗಬೇಕು. ರಾಜ್ಯದ 5-6 ಜಿಲ್ಲೆಗಳ ಕಾರಣದಿಂದ ಈ ಪ್ರಮಾಣ ಇಳಿಕೆಯಾಗುತ್ತಿಲ್ಲ. ಈ ಕಾರಣದಿಂದ ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳನ್ನು ಗುರುತಿಸಿ ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ, ಮಹಿಳಾ ಮತ್ತು ಮಕ್ಕಳ ಆರೋಗ್ಯದ ಮಾನದಂಡಗಳನ್ನು ಇರಿಸಿಕೊಂಡು ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಈ 5 ಜಿಲ್ಲೆಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಐ.ಎಂ.ಆರ್ ಇಳಿಕೆ ಮಾಡಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಸ್ವಸ್ಥ ಭವಿಷ್ಯಕ್ಕಾಗಿ ಮಕ್ಕಳ ತಜ್ಞರು ಈ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಒತ್ತು
ಆಯವ್ಯಯದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಅನುದಾನವನ್ನು ಹೆಚ್ವಿಸಲಾಗಿದೆ. ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಒತ್ತು ನೀಡಲಾಗಿದೆ. ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ನೀಡುವ ಆಹಾರವನ್ನೇ ಸಾಮಾನ್ಯ ಅಪೌಷ್ಟಿಕತೆಯುಳ್ಳ ಮಕ್ಕಳಿಗೂ ನೀಡಲಾಗುತ್ತಿದೆ. ಅಂಗನವಾಡಿ ಗಳಲ್ಲಿ ಮಕ್ಕಳಿಗೆ ಉತ್ತಮ ಆಹಾರ ನೀಡುತ್ತಿರುವುದಲ್ಲದೆ, ಕಾರ್ಮಿಕರ ಮಕ್ಕಳಿಗೂ ವಿಶೇಷ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ನಮ್ಮದು ಸೂಕ್ಷ್ಮ ಚಿಂತನೆಗಳುಳ್ಳ ಸರ್ಕಾರ. ಬಡತನ ನಿರ್ಮೂಲನೆಗೆ ಕ್ರಮ ವಹಿಸಲಾಗಿದೆ. ಶಿಕ್ಷಣ, ಮೂಲ ಸೌಕರ್ಯ ಸೇರಿದಂತೆ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ತಾಂತ್ರಿಕ ಆಧಾರಿತ ರಾಜ್ಯ ನಮ್ಮದು. ಹಳ್ಳಿಗಳಲ್ಲಿ ಕೂಡ ನಮ್ಮ ಯುವಕರು ತಾಂತ್ರಿಕವಾಗಿ ಕೌಶಲ್ಯಯುಳ್ಳವರಾಗಿರಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ. ನಾವೆಲ್ಲರೂ ಪರಿಹಾರದ ಭಾಗವಾಗೋಣ. ಆರೋಗ್ಯ ಕುರಿತ ಸವಾಲುಗಳನ್ನು ಗೆಲ್ಲೋಣ ಎಂದರು. ತಾಯಿ ಗರ್ಭದಿಂದ ಭೂ ಗರ್ಭದವರೆಗಿನ ಪಯಣದ ಮಧ್ಯೆ ನಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸೋಣ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಉಪರಾಷ್ಟ್ರಪತಿ ಚುನಾವಣೆ: ಯುಪಿಎ ಅಭ್ಯರ್ಥಿ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button