
ಪ್ರಗತಿವಾಹಿನಿ ಸುದ್ದಿ: ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಕನ್ನಡಿಗರು ಸೇರಿದಂತೆ 30 ಜನರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಉಗ್ರರು ಸಿಕ್ಕ ಸಿಕ್ಕ ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪಹಲ್ಗಾಂ ಪ್ರದೇಶಕ್ಕೆ ಕಾಲ್ನಡಿಗೆ ಅಥವಾ ಕುದುರೆ ಮೂಲಕ ಮಾತ್ರ ಹೋಗಬೇಕು. ಇಂತಹ ಪ್ರವಾಸಿ ತಾಣದಲ್ಲಿ ಸಾಮಾನ್ಯ ಜನರಂತೆ ಬಂದ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಕರ್ನಾಟಕದ ಇಬ್ಬರು, ವಿದೇಶಿ ಪ್ರಜೆಗಳು ಇಬ್ಬರು ಸೇರಿ ಒಟ್ಟು ೩೦ ಜನರು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಮಂಜುನಾಥ್ ರಾವ್ ಹಾಗೂ ಹಾವೇರಿ ಮೂಲದ ಬೆಂಗಳೂರಿನಲ್ಲಿ ವಾಸವಾಗಿದ್ದ ಭರತ್ ಭೂಷಣ್ ಎಂಬ ಇಬ್ಬರು ಕನ್ನಡಿಗರು ಮೃತ ಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ.
ಈ ನಡುವೆ ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಹೊಣೆಯನ್ನು ಟಿಆರ್ ಎಫ್ ಎಂಬ ಸಂಘಟನೆ ಹೊಣೆಹೊತ್ತುಕೊಂಡಿದೆ. ಇದು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಅಂಗ ಸಂಘಟನೆಯಾಗಿದೆ.
ಪ್ರವಾಸಿಗರ ಮೇಲೆ ಉಗ್ರರ ದಾಳಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರವಾಗಿ ಖಂಡಿಸಿದ್ದು, ಇದಕ್ಕೆ ತಕ್ಕ ಶಾಸ್ತಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.