Kannada NewsKarnataka NewsNationalPolitics

*ವರ್ಗಾವಣೆಯಿಂದ ಹಣ ಮಾಡಿಕೊಳ್ಳಲು ಕಾಂಗ್ರೆಸ್ ಶಾಸಕರಿಗೆ ಸೂಚನೆ: ಬಸವರಾಜ ಬೊಮ್ಮಾಯಿ ಆರೋಪ*

ಪ್ರಗತಿವಾಹಿನಿ ಸುದ್ದಿ: ರಾಜಭವನವನ್ನು ಅತಿ ಹೆಚ್ಚುಬಾರಿ ದುರಪಯೋಗ ಪಡೆಸಿಕೊಂಡಿರುವ ಶ್ರೇಯಸ್ಸು ಕಾಂಗ್ರೆಸ್ಸಿಗಿದೆ, ದೇಶದಲ್ಲಿ ಸುಮಾರು 56ಕ್ಕಿಂತಲೂ ಹೆಚ್ಚುಬಾರಿ ರಾಜಭವನವನ್ನು ದುರುಪಯೋಗ ಪಡೆಸಿಕೊಂಡು ಸರ್ಕಾರಗಳನ್ನು ಉರುಳಿಸಿದ್ದು ಕಾಂಗ್ರೆಸ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು ರಾಜ್ಯಭವನವನ್ನು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅತಿ ಹೆಚ್ಚು ವಿವಾದಾತ್ಮಕ ಹಾಗೂ ಪ್ರಶ್ನಾರ್ಹ ರಾಜ್ಯಪಾಲರಾಗಿದ್ದ ಗ್ರೇಟ್ ಹಂಸರಾಜ ಭಾರದ್ವಾಜ್ ಅವರು ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಏನೂ ಪ್ರಕರಣ ಇಲ್ಲದೇ ಅವರ ವಿರುದ್ಧ ತನಿಖೆಗೆ ಆದೇಶ ನೀಡಿದ್ದರು. ಈಗ ಆ ಪ್ರಕರಣ ಬಿದ್ದುಹೋಗಿದೆ. ಕಾಂಗ್ರೆಸ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳುತ್ತದೆಯೇ ಎಂದು ಪ್ರಶ್ನಿಸಿದರು. ರಾಜಭವನವನ್ನು ಅತಿ ಹೆಚ್ಚು ದುರುಪಯೋಗ ಮಾಡಿಕೊಂಡಿರುವ ಶ್ರೇಯಸ್ಸು ಕಾಂಗ್ಸೆಸ್ಸಿಗಿದೆ. ದೇಶದಲ್ಲಿ ಸುಮಾರು 56 ಕ್ಕಿಂತಲೂ ಹೆಚ್ಚುಬಾರಿ ರಾಜಭವನ ದುರುಪಯೋಗ ಮಾಡಿಕೊಂಡು ಕೇರಳ ಸೇರಿದಂತೆ ಅನೇಕ ಸರ್ಕಾರಗಳನ್ನು ಉರುಳಿಸಿರುವ ಶ್ರೇಯಸ್ಸು ಕಾಂಗ್ರೆಸ್ಸಿಗಿದೆ. ಅವರೇನು ನಮಗೆ ಪಾಠ ಹೇಳುವುದು ಎಂದು ಖಾರವಾಗಿ ಉತ್ತರಿಸಿದರು. 

ಇನ್ನು ಹಿಂದಿನ ಸರ್ಕಾರದಲ್ಲಿ ನಡೆದ ಹಗರಣಗಳನ್ನು ಬಹಿರಂಗ ಪಡೆಸುವುದಾಗಿ ಹೇಳುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ತಿರುಗೇಟು ನೀಡಿದ ಅವರು, ಇವರದೇ ಸರ್ಕಾರ ಇದೆ. ಯಾವುದೇ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

ಪಿಎಸ್‌ಐ ಸಾವಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ವರ್ಗಾವಣೆ ದಂಧೆ ಆರಂಭವಾಗಿದೆ. ಅಭಿವೃದ್ಧಿಯಲ್ಲಿ ನಯಾಪೈಸೆ ಕೊಡುತ್ತಿಲ್ಲ. ಶಾಸಕರೆಲ್ಲ ಗಂಟು ಬಿದ್ದಿದ್ದಾರೆ. ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ನಾಯಕರೆಲ್ಲ ವರ್ಗಾವಣೆಯಲ್ಲಿಯೇ ದುಡ್ಡು ಮಾಡುವಂತೆ ಶಾಸಕರಿಗೆ ಸೂಚನೆ ನೀಡಿದ್ದಾರೆ. ಭ್ರಷ್ಟಾಚಾರಕ್ಕೆ ಸಾಂಸ್ಥಿಕ ರೂಪ ನೀಡಿದ್ದಾರೆ. ಆ ಅಡಿಯಲ್ಲಿಯೇ ವರ್ಗಾವಣೆಗಳು ನಡೆಯುತ್ತಿವೆ. ವಿಪರೀತ ಹಣ ಕೇಳುವುದರಿಂದ ಇಡೀ ನೌಕರರ ಸಮೂಹ ಒತ್ತಡದಲ್ಲಿದೆ. 

ಸಾವಿಗೀಡಾದವರಷ್ಟೇ ಅಲ್ಲ. ಬಹಳ ಜನ ತೀವ್ರ ಒತ್ತಡದಲ್ಲಿದ್ದಾರೆ. ಅವರು ಹಣ ಕೊಡಲು ಆಗುವುದಿಲ್ಲ. ಹಣ  ಕೊಟ್ಟವರು ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುತ್ತಾರೆ. ಭ್ರಷ್ಟಾಚಾರವನ್ನು ಮೇಲಿನಿಂದ ಕೆಳಗೆ ವ್ಯವಸ್ಥಿತವಾಗಿ ಮಾಡಿರುವುದರಿಂದ ಈ ರೀತಿಯ ಸಾವುಗಳು ನಡೆಯುತ್ತವೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button