Kannada NewsKarnataka News

ಹಿಂದೂ ಧರ್ಮದ ಅವಹೇಳನ ಸಹಿಸುವ ಮಾತೇ ಇಲ್ಲ: ಚಕ್ರವರ್ತಿ ಸೂಲಿಬೆಲೆ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ:  ಹಿಂದೂ  ಧರ್ಮದ ಅವಹೇಳನವನ್ನು ಸಹಿಸುವ ಮಾತೇ ಇಲ್ಲ, ಅವಹೇಳನ ಮಾಡುವವರು ತಾಕತ್ತಿದ್ದರೆ ಎದುರು ಬಂದು ಮುಖಾಮುಖಿ ಚರ್ಚೆ ಎದುರಿಸಲಿ ಎಂದು   ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಸವಾಲು ಹಾಕಿದರು.

ಯಮಕನಮರಡಿ ವಿದ್ಯಾವರ್ಧಕ ಸಂಘದ ಶಾಲಾ ಆವರಣದಲ್ಲಿ ಹಿಂದೂ ಪರ ಸಂಘಟನೆಗಳು ಆಯೋಜಿಸಿದ್ದ ‘ನಾನು ಹಿಂದೂ’ ಸಮಾವೇಶ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹಿಂದೂ ಎಂಬ ಶಬ್ದ ಅಶ್ಲೀಲ ಎಂದು ಅವಹೇಳನ ಮಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಜರಿದರು. ವೈಯಕ್ತಿಕವಾದ ಅಥವಾ ಜಾತಿ ನಿಂದನೆ ಕೂಡ ಸಹಿಸಬಹುದು. ಆದರೆ ಹಿಂದೂ ಧರ್ಮದ ಅವಹೇಳನವನ್ನು ಯಾವ ಕಾರಣಕ್ಕೂ ಸಹಿಸಲಾಗದು ಎಂದರು.

ಹಿಂದೂ ಧರ್ಮವನ್ನು ನುಂಗಲು ಬಂದಿದ್ದ ರಾವಣ- ಕಂಸ, ಘೋರಿ-ಘಜನಿ, ಬಾಬರ್, ಔರಂಗಜೇಬ್ , ಟಿಪ್ಪು, ಹಜರತ್ ಎಲ್ಲರನ್ನೂ ಧರ್ಮವೇ ನುಂಗಿ ನೀರು ಕುಡಿದಿದೆ. ಇನ್ನು ಈ ಕೊತ್ವಾಲ್ ಗಳು, ಸಾವಕಾರ್ ಗಳು ಯಾವ ಲೆಕ್ಕ ಎಂದು ಲೇವಡಿ ಮಾಡಿದರು.

ಜಗತ್ತಿನ ಪ್ರಾಚೀನ ಸಂಸ್ಕೃತಿಯಲ್ಲಿ ಹಿಂದೂ ಒಂದು ಎಂದು ಸ್ವತಃ ಡಾ. ಬಾಬಾಸಾಹೇಬ್ ಅಂಬೇಡ್ಕರ ಹೇಳಿದ್ದಾರೆ. ಅಂತಹ ಅಂಬೇಡ್ಕರ್ ಅವರ ಹೆಸರು ಹೇಳುವವರು ಅವರನ್ನೇ ಸರಿಯಾಗಿ ಓದಿಕೊಂಡಿಲ್ಲ. ಧರ್ಮ ಮತ್ತು ರಿಲಿಜನ್ ಬೇರೆ ಬೇರೆ. ಮತಾಂತರ ವಿಷಯ ರಿಲಿಜನ್ ನಲ್ಲಿ ಹೇಳಬೇಕೆ ಹೊರತು ಧರ್ಮದ ಲ್ಲಿ ಬರುವುದೇ ಇಲ್ಲ. ಚರ್ಚುಗಳ ಮುಂದೆ ಗರುಡ ಗಂಬಗಳು ಬಂದಿವೆ. ಚರ್ಚ್ ಗಳಲ್ಲಿ ಉರುಳು ಸೇವೆ, ಜಾತ್ರೆ ಆರಂಭಿಸುವ ಮೂಲಕ ಸ್ವತಃ ಚರ್ಚ್ ಗಳು ಹಿಂದೂ ಧರ್ಮಕ್ಕೆ ಮತಾತಂತರಗೊಳ್ಳುತ್ತಿವೆ ಎಂದರು.

ಭೌತಶಾಸ್ತ್ರ, ರಸಾಯನಶಾಸ್ತ್ರಗಳಿಗೆಲ್ಲ ಸಂಸ್ಥಾಪಕರಿಲ್ಲ. ಹಾಗೆಯೇ ಹಿಂದೂ ಧರ್ಮಕ್ಕೂ ಸಂಸ್ಥಾಪಕರಿಲ್ಲ. ಹಿಂದೂ ಧರ್ಮ ಒಂದು ಶುದ್ಧ ವಿಜ್ಞಾನ. ಹಿಂದೂ ಧರ್ಮದ ಒಳಗೆ ಹೋದರೆ ಜ್ಞಾನದ ಸಂಪತ್ತೇ ಸಿಗುತ್ತದೆ. ಇದನ್ನೆ ಎಲ್ಲ ದಾರ್ಶಿನಿಕರು ಒಪ್ಪಿಕೊಂಡಿದ್ದಾರೆ ಎಂದರು.

ಸನಾತನ ಧರ್ಮದ ವಿರುದ್ಧ ಪಿತೂರಿ ಮಾಡುವ ಮೀರ್ ಸಾದಿಕ್ ಗಳು ಇಂದಿಗೂ ಇದ್ದಾರೆ. ಆದರೆ, ಇಂತಹ ನೂರು ಮೀರಸಾದಿಕ್, ಮಲ್ಲಪ್ಪಶೆಟ್ಟಿಗಳು ಬಂದರೂ ಹಿಂದೂ ಧರ್ಮ ಒಂದಿಂಚೂ ಅಲ್ಲಾಡುವುದಿಲ್ಲ ಎಂದು ಸೂಲಿಬೆಲೆ ಹೇಳಿದರು.

ಭಾರತವನ್ನು ಗೆಲ್ಲಲಾಗಲಿಲ್ಲ ಎನ್ನುವ ಅಸಹಾಯಕತೆಯಿಂದೇ ಮುಸ್ಲಿಮರು ಹಿಂದೂ ಎಂದರೆ ಗುಲಾಮ ಎಂದು ಕರೆದಿದ್ದಾರೆ. ಇದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ತಿಳಿದುಕೊಳ್ಳಬೇಕು. ಸಪ್ತ ಸಿಂಧೂರಾಷ್ಟ್ರ ಪದ ಭಾರತದಿಂದಲೇ ಪರ್ಶಿಯನ್ನರಿಗೆ ಹೋಗಿದೆಯೇ ಹೊರತು ಪರ್ಶಿಯನ್ನ ರಿಂದ ಹಿಂದೂ ಪದ ಭಾರತಕ್ಕೆ ಬಂದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ-ಮುಸ್ಲಿಮರು ಕೂಡಿ ಹೋರಾಟ ಮಾಡುತ್ತಿದ್ದ ಕಾರಣಕ್ಕೆ  ಕರಾಳ ಇತಿಹಾಸವನ್ನು ಮುಚ್ಚಿ ಹಾಕಲಾಗಿದೆ. ಆದರೆ ಇಂದಿಗೂ ದುಷ್ಟ ಬುದ್ಧಿ, ವಿಕೃತ ಮನಸ್ಸು ಬದಲಾಗಿಲ್ಲ ಎನ್ನುವುದೇ ನೋವು ನೀಡುವ ವಿಷಯ. ಬೂಟ್ ಪಾಲಿಶ್ ಮಾಡಿ ಸ್ವಾಭಿಮಾನದಿಂದ ಬದುಕಬೇಕೆ ಹೊರತು ಬೂಟ ನೆಕ್ಕಿ ಬದುಕಬಾರದು.

ಹಿಂದೂ ಇಂದು ಜಾಗೃತನಾಗಿದ್ದಾನೆ. ಆರ್ಟಿಕಲ್ 370 ತೆಗೆದು ಹಾಕಿ ಭಾರತದ ಧ್ವಜ ಹಾರಾಡದ ಕಾಶ್ಮೀರದ ಎಲ್ಲೆಲ್ಲೂ ರಾಷ್ಟ್ರ ಧ್ವಜ ಹಾರಾಡಿಸುತ್ತಿದ್ದಾನೆ. ಬರೀ ಕನಸು ಎಂದೇ ಮಾತಾಡುತ್ತಿದ್ದ ರಾಮ ಜನ್ಮ ಭೂಮಿ ಇಷ್ಟರಲ್ಲಿಯೇ ತಲೆ ಎತ್ತಲಿದೆ. ಜತೆಗೆ ಕಾಶಿ ಇತಿಹಾಸ ಕೂಡ ಮರು ನಿರ್ಮಾಣಗೊಳ್ಳಲಿದೆ. ಸಿಎನ್ಎ ಜಾರಿಯಾಗುತ್ತದೆ.

ಹೊಸ ಭಾರತ ಕಟ್ಟಲು ಎಲ್ಲರೂ ಗಟ್ಟಿಯಾಗಿ ಒಟ್ಟಾಗಿ ನಿಲ್ಲಬೇಕಿದೆ. ಹಿಂದೂ ಧರ್ಮ ಹೇಡಿ ಧರ್ಮ ವಲ್ಲ, ಹಿಂದೂ ಧರ್ಮಕ್ಕೆ ನಿಂದನೆ ಮಾಡುವವರಿಗೆ ತಕ್ಕ ಪಾಠ ಕಲಿಬೇಕಿದೆ ಎಂದು ಸೂಲಿಬೆಲೆ ಕರೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಯ ಕ್ಯಾರಗುಡ್ಡದ ಶ್ರೀಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ಅನ್ಯ ಬೇರೆ ಪ್ರದೇಶಗಳಿಂದ ಹರಿದು ಬರುವ ದೇಶದ ನದಿಗಳೆಲ್ಲವೂ ಸೇರುವುದು ಮಹಾಸಾಗರದಲ್ಲಿ. ಅಂತಹ ಆಳವಾದ ವಿಶಾಲ ಸಂಸ್ಕೃತಿ, ಸಂಪ್ರದಾಯ ಹೊಂದಿರುವುದೇ ಹಿಂದೂ ಧರ್ಮ. ಭೂಮಿಯ ಮೇಲೆ ಎಷ್ಟೇ ಜಾತಿ- ಪಂಥ- ಧರ್ಮಗಳು ಮೆರೆಯುತ್ತಿದ್ದರೂ ಅವೆಲ್ಲವುಗಳಿಗೆ ಆಶ್ರಯ ನೀಡಿ ಮೆರೆಸುತ್ತಿರುವುದೇ ಹಿಂದೂ ಧರ್ಮ. ಅಂತಹ ಧರ್ಮ ನನ್ನದು, ನಾನು ಹಿಂದೂ ಎನ್ನಲು ಇನ್ನಿಲ್ಲದ ಹೆಮ್ಮೆ ನಮಗಿದೆ ಎಂದರು.

ಹಿರೇಹಡಗಲಿಯ ಹಾಲಸಂಸ್ಥಾನ ಮಠದ ಶ್ರೀಅಭಿನವ ಹಾಲಸ್ವಾಮೀಜಿ ಮಾತನಾಡಿ, ಪಕ್ಷ, ಜಾತಿ, ವ್ಯಕ್ತಿಯ ಆದರ್ಶಗಳ ತಪ್ಪು ಮಾಡಿದವರಿಗೆ ಮನೆಯವರೆ ಬುದ್ದಿ ಕಲಿಸಬೇಕು ಎನ್ನುವಂತೆ,
ಧರ್ಮ ನಿಂದನೆ ಮಾಡುವವರಿಗೆ ಕ್ಷೇತ್ರದ ಜನತೆಯೇ ಪಾಠ ಕಲಿಸಬೇಕು ಎಂದರು.

ಮನೆಯಲ್ಲಿ ಹೆಂಡತಿಯೇ ಮಾತು ಕೇಳದಿರುವಾಗ ಸಮಾಜಕ್ಕೆ ಮಾರ್ಗದರ್ಶನ ಬರುವ ಜನ ಹೆಚ್ಚಾಗಿ ಬರುತ್ತಿದ್ದಾರೆ. ಬಾಯಿ ಬಿಟ್ಟರೆ ಬುದ್ಧ, ಬಸವ, ಅಂಬೇಡ್ಕರ ಹೆಸರು ಹೇಳುವವರ ನಿಯತ್ತೇ ಸರಿ ಇಲ್ಲ. ಸನಾತನ ಧರ್ಮವನ್ನು ವಿರೋಧ ಮಾಡುವವರ ಜೀವನ ಆದರ್ಶವಾಗಿರಬೇಕೆ ಹೊರತು ಅನಾಗರಿಕರಾಗಬಾರದು. ಬುದ್ಧ, ಬಸವ, ಅಂಬೇಡ್ಕರ್ ಹೆಸರು ಮಾತ್ರ ಬೇಕು. ಆದರೆ ಬಳಸುವ ಫೋಟೋ ಮಾತ್ರ ಸ್ವಂತದ್ದು  ಎಂದರು.

ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾರುತಿ ಅಷ್ಟಗಿ,
ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶಶಿಕಾಂತ ನಾಯಿಕ, ಬಿಜೆಪಿ ಚಿಕ್ಕೋಡಿ ಘಟಕ ಅಧ್ಯಕ್ಷ ಡಾ. ರಾಜೇಶ್ ನೇರ್ಲಿ, ಎಸ್ಟಿ ಘಟಕ ಅಧ್ಯಕ್ಷ ಬಸವರಾಜ ಹುಂದ್ರಿ, ಬಿಜೆಪಿ ಬೆಳಗಾವಿ ಜಿಲ್ಲಾ ಪ್ರಭಾರಿ ಉಜ್ವಲಾ ಬಡವನಾಚೆ,  ರವಿ ಹಂಜಿ, ಪವನ ಕತ್ತಿ, ರುದ್ರಣ್ಣ ಚಂದರಗಿ ಮತ್ತಿತರರು ವೇದಿಕೆಯಲ್ಲಿದ್ದರು.

ಅಪಾರ ಸಂಖ್ಯೆಯ ಹಿಂದೂ ಕಾರ್ಯಕರ್ತರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜ್ಯ ಸರ್ಕಾರದಿಂದ ಮತದಾರರ ಮಾಹಿತಿ ಕಳ್ಳತನ; ಕಾಂಗ್ರೆಸ್ ಗಂಭೀರ ಆರೋಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button