Latest

ರೋಗಕ್ಕಿಂತ ಅದರ ಬಗೆಗಿನ ಭಯ ಹೆಚ್ಚು ಆತಂಕಕಾರಿ: ಲೋಕಾಯುಕ್ತ SP ಯಶೋದಾ ವಂಟಗೋಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಆಧುನಿಕ ವೈದ್ಯಕೀಯ ತಂತ್ರಜ್ಞಾನದಿಂದಾಗಿ ಎಲ್ಲ ರೋಗಗಳಿಗೂ ಉತ್ತಮ ಚಿಕಿತ್ಸೆ ಇದೆ. ಹಾಗೆಯೇ ಕ್ಯಾನ್ಸರ್ ಬಂದಾಗಲೂ ಧೈರ್ಯ ಕಳೆದುಕೊಳ್ಳದೇ, ಧನಾತ್ಮಕ ಮನಸ್ಸಿನಿಂದ ಚಿಕಿತ್ಸೆ ಪಡೆದರೆ ಅದನ್ನು ಗುಣಮುಖಗೊಳಿಸಬಹುದು” ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಚಿಕ್ಕಮಕ್ಕಳ ಕ್ಯಾನ್ಸರ್ ವಿಭಾಗ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಇಂದು  ಏರ್ಪಡಿಸಿದ್ದ ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.

“ಏನೂ ಅರಿಯದ ಮಕ್ಕಳಲ್ಲಿ ಕ್ಯಾನ್ಸರ ಕಂಡು ಬಂದರೆ ಅವರ ಪಾಲಕರು ಗಾಬರಿಗೊಂಡು ಧೈರ್ಯ ಕಳೆದುಕೊಳ್ಳುತ್ತಾರೆ. ಭಯವೇ ಒಂದು ದೊಡ್ಡ ರೋಗ. ಅದನ್ನು ಎದುರಿಸುವ ಶಕ್ತಿ ಇರಬೇಕು. ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಚಿಕಿತ್ಸೆ ನೀಡಲು ಪಾಲಕರು ಸಹಕರಿಸಿ,” ಎಂದು ಕರೆ ನೀಡಿದರು.

“ಮಕ್ಕಳಲ್ಲಿರುವ ಭಯ ಹೋಗಲಾಡಿಸುವ ಕಳಕಳಿಯನ್ನು ದೊಡ್ಡವರು ತೋರ್ಪಡಿಸಬೇಕು. ನಾವು ಜೀವನ ನಡೆಸುತ್ತೇವೆ ಎಂಬ ಆಶಾಭಾವನೆ ಅವರಲ್ಲಿ ಮೂಡಬೇಕು. ಮುಖ್ಯವಾಗಿ ಎಲ್ಲ ಮಕ್ಕಳಿಗೂ ಚಿಕಿತ್ಸೆ ಲಭಿಸಲು ಅನುಕೂಲವಾಗುವುದಕ್ಕೆ ಪ್ರಥಮ ಹೆಜ್ಜೆಯಾಗಿ ಜಾಗೃತಿ ಮೂಡಿಸುವುದು ಅಗತ್ಯ. ಅದರಂತೆ ರೋಗಿಗಳೂ   ನಿಗದಿತ ಸಮಯಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಬೇಕು” ಎಂದು ಸಲಹೆ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಮಾತನಾಡಿ, “ಕ್ಯಾನ್ಸರ್ ನಿಂದ ಮಕ್ಕಳು ಬಳಲುತ್ತಿದ್ದರೆ ಅತ್ಯಧಿಕ ಸಮಸ್ಯೆ ಎದುರಿಸುವವರು ಪಾಲಕರು. ಅವರು ಧನಾತ್ಮಕವಾಗಿರುವುದು ಮುಖ್ಯ. ಎಲ್ಲಿಯೇ ಹೋದರೂ ಚಿಕ್ಕ ಮಕ್ಕಳ ಕ್ಯಾನ್ಸರ್ ತಜ್ಞರ ಕಾರ್ಯ ಬಹಳ ಮುಖ್ಯ” ಎಂದರು.

ಚಿಕ್ಕಮಕ್ಕಳ ತಜ್ಞವೈದ್ಯ ಡಾ. ವಿ.ಡಿ.ಪಾಟೀಲ ಮಾತನಾಡಿ, “ಮುಂಚಿನಂತೆ ಈಗಿಲ್ಲ. ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದೆವರಿದಿದೆ. ತಂತ್ರಜ್ಞಾನದಿಂದ ಸೂಕ್ತ ಚಿಕಿತ್ಸೆ ಇದೆ. ಚಿಕಿತ್ಸೆಯು ಮೊದಲು ಕಷ್ಟ ಎನಿಸಿದರೂ ನಂತರ ರೂಢಿಯಾಗಿ ಗುಣಮುಖವಾಗುತ್ತದೆ. ಆರ್ಥಿಕವಾಗಿ ದುರ್ಬಲರಾದವರಿಗೆ ಸಂಘಸಂಸ್ಥೆಗಳು ಇನ್ನಷ್ಟು ಸಹಾಯ ಕಲ್ಪಿಸಲಿ ಎಂದರು.

ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಮಾತನಾಡಿದರು. ಚಿಕ್ಕಮಕ್ಕಳ ಕ್ಯಾನ್ಸರ್ ತಜ್ಞವೈದ್ಯೆ ಡಾ. ಅಭಿಲಾಷಾ ಎಸ್.  ಪ್ರಾಸ್ತಾವಿಕ ಮಾತನಾಡಿದರು.

ಕ್ಯಾನ್ಸರ್ ನಿಂದ ಗುಣಮುಖಗೊಂಡ ಹಳಿಯಾಳದ 9 ವರ್ಷದ ಮೋಹಿತ್ ದೇಸಾಯಿ ಮಾತನಾಡಿ, ತನ್ನ ಜೀವನದಲ್ಲಾದ ಏರು ಪೇರು ಹಾಗೂ ಬದುಕುಳಿದ ಸಂದರ್ಭವನ್ನು ಅತ್ಯಂತ ಭಾವುಕವಾಗಿ ತಿಳಿಸಿದ್ದಲ್ಲದೆ, ವೈದ್ಯರು ತೋರಿದ ಕಾಳಜಿ, ಅವರ ಪಾಲಕರು ಪಟ್ಟ ತೊಂದರೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟನು. ತನ್ನ ಜೀವ ಉಳಿಸಿ ಸಮಾಜದಲ್ಲಿ ಎಲ್ಲ ಬಾಲಕರಂತೆ ಜೀವಿಸುವ ಅವಕಾಶ ನೀಡಿದ ವ್ಶೆದ್ಯರಿಗೆ ಧನ್ಯವಾದ ಅರ್ಪಿಸಿದ. ನೇಗಿನಹಾಳದ 13 ವರ್ಷದ ಬಾಲಕ ಪ್ರಥಮ ಗಂಗಪ್ಪ ಜೋಗಮೇಳ ಸಹ ಅನುಭವ ಹಂಚಿಕೊಂಡನು.

ಡಾ. ರೂಪಾ ಬೆಲ್ಲದ, ಡಾ. ಅರೀಫ್ ಮಾಲ್ದಾರ್, ಡಾ. ತನ್ಮಯಾ ಮೆಟಗುಡ್ಡ, ಡಾ. ಮೀನಾಕ್ಷಿ ಬಿ.ಆರ್., ಎಸ್.ವಿ. ವಿರಗಿ ಮತ್ತಿತರರು ಉಪಸ್ಥಿತರಿದ್ದರು.

 

*ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ; ಸಂಕಷ್ಟದಲ್ಲಿರುವ ಜನರಿಗಾಗಿ ಎರಡು ಗ್ಯಾರಂಟಿ ಯೋಜನೆ ಘೋಷಣೆ; ಡಿ.ಕೆ.ಶಿವಕುಮಾರ್*

https://pragati.taskdun.com/d-k-sivakumarhunasuruprajadhwani/

ಸರಕಾರದ ವಿರುದ್ಧ ಮಠಾಧೀಶರ ಆರೋಪ ಪಟ್ಟಿ; ಬರುವ ಚುನಾವಣೆಯಲ್ಲಿ ಮಠಾಧೀಶರು ಕಣಕ್ಕಿಳಿಯುತ್ತಾರಾ? – ಏನಂದ್ರು ಸಿದ್ದರಾಮ ಸ್ವಾಮೀಜಿ?

https://pragati.taskdun.com/list-of-charges-against-the-government-by-the-pontiff/

*BJP ಶಾಸಕ ಸತೀಶ್ ರೆಡ್ದಿ ಕೊಲೆಗೆ ಸುಪಾರಿ ಕೇಸ್; ಇಬ್ಬರ ಬಂಧನ*

https://pragati.taskdun.com/bjp-mla-satish-reddymurder-suparitwo-accused-arrested/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button