
ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಗಾಳಿಪಟ ಉತ್ಸವವು ಭಾರತೀಯ ಸಂಸ್ಕೃತಿ ಮತ್ತು ಇಡಿ ಜಗತ್ತಿಗೆ ಅಮೂಲ್ಯ ಕೊಡುಗೆಯಾಗಿದೆ. ಚಳಿಗಾಲದಲ್ಲಿ ಗಾಳಿಪಟ ಹಾರಿಸುವುದರಿಂದ ಉಂಟಾಗುವ ವ್ಯಾಯಾಮ ಮತ್ತು ಏಕಾಗ್ರತೆಯ ಶಕ್ತಿಯು ಆರೋಗ್ಯವನ್ನು ಸುಧಾರಿಸುತ್ತದೆ. ಆದ್ದರಿಂದ ಗಾಳಿಪಟ ಉತ್ಸವ ನನ್ನ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಜೊಲ್ಲೆ ಗ್ರೂಪ್ ವತಿಯಿಂದ ಸ್ಥಳೀಯ ಶ್ರೀಪೇವಾಡಿ ರಸ್ತೆಯಲ್ಲಿರುವ ಶಿವಶಂಕರ್ ಜೊಲ್ಲೆ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಎರಡನೇ ದಿನವಾದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನಮ್ಮ ಭಾರತ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯ ಸಂಸ್ಕಾರದ ಗಣಿಯಾಗಿದೆ. ಆದ್ದರಿಂದಲೇ ನಮ್ಮ ದೇಶದ ಸಂಸ್ಕೃತಿ ಇಡೀ ವಿಶ್ವದಲ್ಲೇ ಶ್ರೇಷ್ಠವಾಗಿದೆ. ನಾವು ಆಚರಿಸುವ ಪ್ರತಿಯೊಂದು ಹಬ್ಬದ ಹಿಂದೆ ವೈಜ್ಞಾನಿಕ ದೃಷ್ಟಿಕೋನ ಅಡಗಿದೆ. ಮಕರ ಸಂಕ್ರಾಂತಿಯನ್ನು ನಮ್ಮ ಭಾಗಗಳಲ್ಲಿ ಎಳ್ಳುಬೆಲ್ಲ ಹಂಚಿ ಶುಭ ಹಾರೈಸುವ ಮೂಲಕ ಆಚರಿಸಲಾಗುತ್ತದೆ. ಗುಜರಾತಿನಲ್ಲಿ ಈ ಹಬ್ಬವನ್ನು ಗಾಳಿಪಟ ಉತ್ಸವವನ್ನಾಗಿ ಆಚರಿಸಲಾಗುತ್ತದೆ’ ಎಂದರು.
‘ದೇಶದ ವಿವಿಧ ರಾಜ್ಯಗಳಿಂದ 40 ಜನ ಕೈಟ್ ಫ್ಲೇಯರ್ಸ್ ಈ ಉತ್ಸವದಲ್ಲಿ ಪಾಲ್ಗೊಂಡಿದ್ದು, ವಿದೇಶದಿಂದ 10 ಜನ ಕೈಟ್ ಫ್ಲೇಯರ್ಸ್ ಭಾಗವಹಿಸಿದ್ದಾರೆ. ರಾತ್ರಿ ಸಮಯದಲ್ಲೂ ಎಲ್‌ಇಡಿಯೊಂದಿಗೆ ಗಾಳಿಪಟ ಹಾರುತ್ತಿರುವ ದೃಶ್ಯಗಳು ಸ್ಥಳೀಯರನ್ನು ಮಂತ್ರಮುಗ್ಧಗೊಳಿಸಿವೆ. ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಶಿವಗರ್ಜನೆಯಂತಹ ಮಹಾನಾಟಕಗಳನ್ನೂ ಸಹ ಹಮ್ಮಿಕೊಳ್ಳಲಾಗಿದೆ’ ಎಂದರು.
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಡಾ. ವರ್ಷಾ ಪಾಟೀಲ, ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಪ್ರವೀಣ ಜೈನ್, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ ಮತ್ತು ಸದಸ್ಯರು, ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ನಾಗರಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಜಯ್ ರಾವುತ್ ನಿರೂಪಿಸಿ ವಂದಿಸಿದರು.
*ಕೌಜಲಗಿ ಹೊಸ ತಾಲೂಕು ರಚನಗೆ ಸಂಪೂರ್ಣ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ*
https://pragati.taskdun.com/balachandra-jarakiholikoujalaginew-taluksupport/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ