ಮನೆಯಿಂದ ಹಿಡಿದು ಸಮಾಜದ ವಿವಿಧ ಸ್ಥಳಗಳಲ್ಲಿ ಮಹಿಳೆಗೆ ಅನ್ಯಾಯವಾದಾಗ ಪ್ರತಿಯೊಬ್ಬ ಸ್ತ್ರೀಯರು ಸ್ಪಂದಿಸಬೇಕು; ಅಪರಾಧ ವಿಭಾಗದ ಉಪ ಆಯುಕ್ತೆ ಸ್ನೇಹಾ ಪಿ. ವಿ. ಕರೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಮನೆಯೇ ಮೊದಲ ಪಾಠ ಶಾಲೆ, ತಾಯಿ ತಾನೆ ಮೊದಲ ಗುರು ಎನ್ನುವ ಮಾತೊಂದಿದೆ. ಶಾಲಾ ಕಾಲೇಜುಗಳಲ್ಲಿ ಔಪಚಾರಿಕ ಶಿಕ್ಷಣ ಕಲಿಸಿದರೆ, ಮನೆಯಲ್ಲಿ ಜೀವನದ ಪಾಠ ಕಲಿಸಲಾಗುತ್ತದೆ. ಮನೆಯಲ್ಲಿ ಮಹಿಳೆಯು ತಾಯಿ, ಅತ್ತೆ, ಹೆಂಡತಿ, ಮಗಳು, ಸೊಸೆ, ಅಕ್ಕ, ತಂಗಿ ಹೀಗೆ ವಿವಿಧ ಸ್ಥಾನದಲ್ಲಿ ನಿಂತು ಕುಟುಂಬಕ್ಕೆ ಮೂಲ ಆಧಾರವಾಗಿರುತ್ತಾಳೆ. ಅಂಥ ಸ್ತ್ರೀಯರಿಗೆ ಸಮಾಜ ಸಮನಾದ ಗೌರವ ನೀಡಬೇಕು” ಎಂದು ಬೆಳಗಾವಿಯ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಉಪ ಆಯುಕ್ತರಾದ ಸ್ನೇಹಾ ಪಿ. ವಿ. ಕರೆ ನೀಡಿದರು.
ನಗರದ ಹಿಂಡಾಲ್ಕೋ ಕಂಪನಿಯ ವತಿಯಿಂದ ಹಿಂಡಾಲ್ಕೋ ಸಭಾ ಭವನದಲ್ಲಿ ಜರುಗಿದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ” ಸಮಾಜದಲ್ಲಿ ಮಹಿಳೆಯರಿಗೆ ಆಗುವ ಅನ್ಯಾಯ, ದೌರ್ಜನ್ಯಗಳನ್ನು ಖಂಡಿಸಬೇಕು. ಅದರಲ್ಲಿ ಪುರುಷರಷ್ಟೇ ಸ್ತ್ರೀಯರ ಪಾತ್ರವೂ ಮುಖ್ಯವಾಗಿದೆ. ಮನೆಯಿಂದ ಹಿಡಿದು ಸಮಾಜದ ವಿವಿಧ ಸ್ಥಳಗಳಲ್ಲಿ ಮಹಿಳೆಗೆ ಅನ್ಯಾಯವಾದಾಗ ಅಲ್ಲಿರುವ ಎಲ್ಲ ಸ್ತ್ರೀಯರು ಸ್ಪಂದಿಸಬೇಕು. ಅಂದಾಗ ಮಾತ್ರ ಮಹಿಳೆಯರ ರಕ್ಷಣೆಯಾಗುತ್ತದೆ. ಮಹಿಳಾ ಕಾರ್ಮಿಕರಿಗಾಗುತ್ತಿದ್ದ ವೇತನ ತಾರತಮ್ಯ ಖಂಡಿಸಿ ಉಂಟಾದ ಪ್ರತಿಭಟನೆಯ ಪ್ರತಿಫಲವಾಗಿ ಇಂದು ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಹಿಂಡಾಲ್ಕೋ ಕಂಪನಿ ಮಹಿಳೆಯರಿಗೆ ವಿಶೇಷ ಆದ್ಯತೆ, ಸೌಕರ್ಯ ನೀಡಿದರ ಫಲವಾಗಿ ಕೆಲಸದಲ್ಲಿ ಮಹಿಳಾ ಕಾರ್ಮಿಕರ ಶ್ರದ್ಧೆ ಮತ್ತು ಕಾರ್ಯದಕ್ಷತೆ ಉತ್ತಮವಾಗಿದೆ. ಅದೇ ರೀತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಮಹಿಳೆಯರು ಸಂವಿಧಾನಾತ್ಮಕ ಸವಲತ್ತುಗಳನ್ನು ಪಡೆಯುವಂತಾಗಲಿ ” ಎಂದರು.
ಬೆಳಗಾವಿಯ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಯಾಸ್ಮಿನ್ ವಾಲಿಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ” ಮಹಿಳೆಯರ ಕುರಿತು ಕಂಪನಿ ತೆಗೆದುಕೊಳ್ಳುತ್ತಿರುವ ಆಸಕ್ತಿ ಮತ್ತು ಕಾಳಜಿಯನ್ನು ಶ್ಲಾಘಸಿದರು”.
ಬೆಳಗಾವಿಯ ಪ್ರಾದೇಶಿಕ ಪರಿಸರ ಅಧಿಕಾರಿ ಶೋಭಾ ಜಿ. ಹಾಗೂ ಹಿಂಡಾಲ್ಕೋ ಲೇಡಿಜ್ ಕ್ಲಬ್ ಅಧ್ಯಕ್ಷೆ ಅನೂಷ್ಕಾ ಬಂಡಿ ಆಗಮಿಸಿ ಮಾತನಾಡಿದರು. ಬೆಳಗಾವಿ ಹಿಂಡಾಲ್ಕೋ ಕಂಪನಿಯ ಮುಖ್ಯಸ್ಥರಾದ ಅಭಿಜಿತ ಬಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಸಾಧಕಿಯರನ್ನು ಮಹಿಳಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಹಾಗೂ ಶಾಲಾ ಶಿಕ್ಷಕಿಯರು, ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ವಿಶ್ವಾಸ ಶಿಂಧೆ, ರವಿ ಬಿಸಗುಪ್ಪಿ ವಿವಿಧ ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಶ್ರದ್ಧಾ ಬೆಲ್ಲದ ಹಾಗೂ ಅರುಣಾ ತುಂಗಲ ಸ್ವಾಗತಿಸಿದರು. ಯಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು. ದೀಪಾ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ