Kannada NewsKarnataka NewsLatest

ಅಪ್ರಾಪ್ತೆಯ ವಿವಾಹಕ್ಕೆ ತಡೆ : ವಿಚಿತ್ರ ತಿರುವು ಪಡೆದ ಬೆಂಡಿಗೇರಿ ಘಟನೆ

ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ – ಅಪ್ರಾಪ್ತೆಯ ವಿವಾಹವನ್ನು ತಡೆದ ಘಟನೆ ಬೆನ್ನಲ್ಲೇ ತಾಲೂಕಿನ ಬೆಂಡಿಗೇರಿಯಲ್ಲಿ ಮತ್ತೊಂದು ವಿವಾದ ಹುಟ್ಟಿಕೊಂಡು, ಕೆಲ ಸಮಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಬೆಳಗಾವಿ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ಶನಿವಾರ ಬಾಲಕಿಯೋರ್ವಳ ವಿವಾಹ ನಡೆಯುವುದಿತ್ತು. ಆದರೆ ಅಧಿಕಾರಿಗಳಿಗೆ ಮಾಹಿತಿ ಹೋಗಿದ್ದರಿಂದ ಅವರು ಅಪ್ರಾಪ್ತೆಯ ವಿವಾಹಕ್ಕೆ ತಡೆಯೊಡ್ಡಿದರು.

ಇದೇ ವೇಳೆ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆಯೂ ನಡೆಯಿತು. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ರಾಯಣ್ಣ ಪುತ್ಥಳಿಯ ಕಾಲಿನ ಭಾಗಕ್ಕೆ ಕಲ್ಲು ತೂರಲಾಗಿದ್ದು, ಪುತ್ಥಳಿ ಬಳಿ ಕಲ್ಲುಗಳು ಬಿದ್ದಿವೆ. ಪಕ್ಕದಲ್ಲಿರುವ ಪುನಿತ್ ರಾಜಕುಮಾರ ಫೋಟೋ ಅಂಟಿಸಿದ ಫ್ಲೆಕ್ಸ್ ರಾಡ್ ಗೆ ಸಹ ಹಾನಿಯಾಗಿದೆ.  ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಪುತ್ಥಳಿ ಬಳಿ ಜಮಾಯಿಸಿದರು. ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಬಂಧಿಸುವಂತೆ ಆಗ್ರಹಿಸಿದರು.

ಹಿರೇಬಾಗೇವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಆದರೆ ಕಲ್ಲು ತೂರಿದ್ದು, ಕೆಲವರು ವಿವಾಹ ಸ್ಥಗಿತಗೊಳಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮಾಡಿದ ಕುತಂತ್ರದಂತೆ ಕಾಣಿಸುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಕುರಿತು ಸಮಗ್ರ ತನಿಖೆ ನಡೆದಾಗಲೇ ನಿಜಾಂಶ ತಿಳಿಯಬೇಕಿದೆ.

ಘಟನೆ ಹಿನ್ನೆಲೆಯಲ್ಲಿ ಭಾನುವಾರ ರಾಯಣ್ಣ ಅಭಿಮಾನಿಗಳು ಕಿತ್ತೂರು ತಹಸಿಲ್ದಾರರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಮಿನಿ ಓಲಂಪಿಕ್ಸ್ ನಲ್ಲಿ ಸಾಧನೆ ಮೆರೆದ ಬೆಳಗಾವಿ ಬಾಲಕಿಯರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button