Pragativahini Exclusive
ಯಾವಾಗ ಉಸ್ತುವಾರಿ ವಹಿಸಿಕೊಳ್ಳುತ್ತಾರೆ?
ಎಂ.ಕೆ.ಹೆಗಡೆ, ಬೆಳಗಾವಿ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ರಾತ್ರಿ ರಾಜ್ಯದ ಎಲ್ಲ ಜಿಲ್ಲೆಗಳ ಉಸ್ತುವಾರಿಗಳನ್ನು ಮರು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ರಮೇಶ ಜಾರಕಿಹೊಳಿ, ಗೋಪಾಲಯ್ಯ ಮತ್ತು ಶ್ರೀಮಂತ ಪಾಟೀಲ – ಈ ಮೂವರನ್ನು ಹೊರತುಪಡಿಸಿ ಎಲ್ಲರಿಗೂ ಜಿಲ್ಲೆಗಳನ್ನು ಹಂಚಲಾಗಿದೆ. ಕೆಲವರು ಈ ಬದಲಾವಣೆಯಿಂದ ಅಸಮಾಧಾನಗೊಂಡಿದ್ದರೆ ಇನ್ನು ಕೆಲವರು ಖುಷಿಯಾಗಿದ್ದಾರೆ.
ಎಲ್ಲಕ್ಕಿಂತ ಕುತೂಹಲ ಮೂಡಿಸಿರುವ ಅಂಶವೆಂದರೆ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬರಲು ಕಾರಣರಾಗಿದ್ದ ರಮೇಶ ಜಾರಕಿಹೊಳಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡದಿರುವುದು. ರಮೇಶ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಮೊದಲು ಹೇಳಲಾಗಿತ್ತು. ಆದರೆ ಅದು ಸಿಗಲಿಲ್ಲ. ಅವರ ಬೇಡಿಕೆಯಂತೆ ಜಲಸಂಪನ್ಮೂಲ ಖಾತೆಯನ್ನು ನೀಡಲಾಗಿದೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ರಮೇಶ ಜಾರಕಿಹೊಳಿಗೆ ಖಚಿತ ಎಂದು ಹೇಳಲಾಗಿತ್ತು. ಆದರೆ ಈಗ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ರಮೇಶ ಜಾರಕಿಹೊಳಿಗೆ ಯಾವುದೇ ಜಿಲ್ಲೆಯನ್ನೂ ನೀಡಲಾಗಿಲ್ಲ. ಈ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ರೆಕ್ಕೆ ಪುಕ್ಕಗಳನ್ನು ಹಚ್ಚಿ ಸುದ್ದಿ ಮಾಡಲಾಗುತ್ತಿದೆ. ಆದರೆ ತಮಗೆ ಉಸ್ತುವಾರಿ ಸಚಿವ ಸ್ಥಾನ ಕೈ ತಪ್ಪಿರುವ ಕುರಿತು ಸ್ವತಃ ರಮೇಶ ಜಾರಕಿಹೊಳಿ ಪ್ರಗತಿವಾಹಿನಿ ಜೊತೆ ಮಾತನಾಡಿದ್ದಾರೆ. ಕಾರಣವನ್ನು ಬಹಿರಂಗಪಡಿಸಿದ್ದಾರೆ.
ನಾನೇ ಬೇಡವೆಂದಿದ್ದೇನೆ
ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ನನಗೆ ಕೊಡುವುದು ಬೇಡ. ಸಧ್ಯಕ್ಕೆ ಜಗದೀಶ ಶೆಟ್ಟರ್ ಅವರೇ ಮುಂದುವರಿಯಲಿ ಎಂದು ನಾನೇ ಮುಖ್ಯಮಂತ್ರಿ ಬಳಿ ವಿನಂತಿಸಿದ್ದೇನೆ. ಇದರಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ರಮೇಶ ಜಾರಕಿಹೊಳಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಬೆಳಗಾವಿ ಜಿಲ್ಲೆಯ ಉಸ್ತುವಾರಿಯನ್ನು ನನಗೆ ಕೊಡಲು ಬಯಸಿದ್ದರು. ಆದರೆ ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಜವಾಬ್ದಾರಿ ದೊಡ್ಡದಿದೆ. ಜಲಸಂಪನ್ಮೂಲದಂತಹ ದೊಡ್ಡ ಖಾತೆ ನಿಭಾಯಿಸುವ ಜೊತೆಗೆ ಜಿಲ್ಲಾ ಉಸ್ತುವಾರಿಯನ್ನೂ ನಿಭಾಯಿಸುವುದು ಸಾಧ್ಯವಿಲ್ಲ ಎಂದು ಸಧ್ಯಕ್ಕೆ ನನಗೆ ಉಸ್ತುವಾರಿ ಬೇಡ ಎಂದು ತಿಳಿಸಿದ್ದೇನೆ ಎಂದು ಅವರು ತಿಳಿಸಿದರು.
ಶೆಟ್ಟರ್ ಇದ್ದರೆ ನಾನಿದ್ದಂತೆ
ಜಗದೀಶ್ ಶೆಟ್ಟರ ಉಸ್ತುವಾರಿ ಸಚಿವರಿದ್ದರೆ ನಾನು ಇದ್ದಂತೆ. ಅವರು ಬೇರೆ ಅಲ್ಲ, ನಾನು ಬೇರೆ ಅಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಉಸ್ತುವಾರಿಯನ್ನು ಮೊದಲ ಬಾರಿಗೇ ಜಿಲ್ಲೆಯ ಹೊರಗಿನ ಬೇರೆ ಒಬ್ಬರಿಗೆ ಕೊಡಲು ಮುಖ್ಯಮಂತ್ರಿಗಳು ಮುಂದಾಗಿದ್ದರು. ಆದರೆ ಜಗದೀಶ ಶೆಟ್ಟರ್ ಗೆ ಕೊಡುವಂತೆ ನಾನೇ ವಿನಂತಿಸಿದ್ದೆ. ನನ್ನ ಮನವಿಯಂತೆ ಶೆಟ್ಟರ್ ಗೆ ನೀಡಲಾಗಿದೆ. ಅವರೇ ಮುಂದುವರಿಯಲಿ ಎಂದೂ ಹೇಳಿದ್ದೆ. ಹಾಗಾಗಿ ಈಗಲೂ ಬದಲಾಯಿಸಲಿಲ್ಲ. ಜಗದೀಶ್ ಶೆಟ್ಟರ್ ಬೇರೆ ಅಲ್ಲ, ನಾನು ಬೇರೆ ಅಲ್ಲ. ಅವರಾದರೆ ನಾನು ಆದಂತೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಯಾವಾಗ ಉಸ್ತುವಾರಿ?
ಸಧ್ಯಕ್ಕೆ ನನಗೆ ಬೇಳಗಾವಿ ಜಿಲ್ಲಾ ಉಸ್ತುವಾರಿ ಬೇಡ. ಜಿಲ್ಲೆ ಬಹಳ ದೊಡ್ಡದಿದೆ. ಜಿಲ್ಲೆಯನ್ನೆಲ್ಲ ಸುತ್ತುವುದು ಕಷ್ಟ. ಜಲಸಂಪನ್ಮೂಲ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ ಎಂದಿರುವ ರಮೇಶ ಜಾರಕಿಹೊಳಿ, ತಮಗೆ ಯಾವಾಗ ಉಸ್ತುವಾರಿ ಹೊಣೆ ನೀಡಬೇಕು ಎನ್ನುವುದನ್ನೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರಂತೆ.
ಚುನಾವಣೆಗೆ ಒಂದು ವರ್ಷ ಇರುವಾಗ ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಈಗ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ. ಚುನಾವಣೆಯ ವರ್ಷ ನಾನೇ ಉಸ್ತುವಾರಿಯ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಅವರು ಪ್ರಗತಿವಾಹಿನಿಗೆ ತಿಳಿಸಿದರು.
ಒಟ್ಟಾರೆ, ರಮೇಶ ಜಾರಕಿಹೊಳಿ ಅವರ ಈ ಪ್ರತಿಕ್ರಿಯೆಯಿಂದಾಗಿ ರಾಜ್ಯದಲ್ಲಿ ತೀವ್ರ ಗೊಂದಲ ಮೂಡಿಸಿದ್ದ ಜಿಲ್ಲಾ ಉಸ್ತುವಾರಿ ಬದಲಾವಣೆ ಗೊಂದಲಗಳಿಗೆ ತಾತ್ಕಾಲಿಕ ವಿರಾಮ ಸಿಕ್ಕಿದಂತಾಗಿದೆ.
ಉಸ್ತುವಾರಿ ಸಚಿವರ ನೇಮಕ; ರಮೇಶ ಜಾರಕಿಹೊಳಿಗೆ ಯಾವ ಜಿಲ್ಲೆಯೂ ಇಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ