ದಾವಣಗೆರೆಯಲ್ಲಿ ಕೆ.ಎಚ್.ಮುನಿಯಪ್ಪ ಜೊತೆ ಪತ್ರಿಕಾಗೋಷ್ಠಿ
ಪ್ರಗತಿವಾಹಿನಿ ಸುದ್ದಿ, ದಾವಣಗೆರೆ – ಕರ್ನಾಟಕದ ಬಿಜೆಪಿ ಸರ್ಕಾರ ಕೋವಿಡ್-19 ನಿರ್ವಹಣೆಯ ಹೆಸರಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಎರಡು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಲೂಟಿ ಹೊಡೆದಿದ್ದು, ಸತ್ಯಾಸತ್ಯತೆ ಪರಿಶೀಲನೆಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು ಹಾಗೂ ಇದರ ಬಗ್ಗೆ ಚರ್ಚಿಸಲು ಕೂಡಲೇ ವಿಧಾನಮಂಡಲದ ಅಧಿವೇಶನವನ್ನು ಕರೆಯಬೇಕು ಎಂದು ಕೇಂದ್ರದ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ಕೆ ಎಚ್ ಮುನಿಯಪ್ಪ ಮತ್ತು ಕಾಂಗ್ರೆಸ್ ನಾಯಕಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು, ‘ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆಗೆ ರೂ, 4,167 ಕೋಟಿ ವೆಚ್ಚ ಮಾಡಲಾಗಿದೆ. ರೂ, 324 ಕೋಟಿ ಮಾತ್ರ ಖರ್ಚು ಮಾಡಲಾಗಿದೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ, ಮತ್ತೊಬ್ಬ ಸಚಿವರು ರೂ, 780 ಕೋಟಿ ವೆಚ್ಚವಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಕ್ಕೆ ನೀಡಿದ್ದಾರೆ. ಆದರೆ, ಸರ್ಕಾರ ರೂ, 2,128 ಕೋಟಿಗೆ ಲೆಕ್ಕ ನೀಡಿದೆ. ಹಾಗಾದರೆ ಕೋವಿಡ್-19 ನಿರ್ವಹಣೆಗೆ ಖರ್ಚು ಮಾಡಿದ ನೈಜ ಹಣವೆಷ್ಟು? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ರೂ 4 ಲಕ್ಷಕ್ಕೆ ಒಂದರಂತೆ 50 ಸಾವಿರ ವೆಂಟಿಲೇಟರಗಳನ್ನು ಖರಿದಿಸಿದೆ. ತಮಿಳುನಾಡು ಸರ್ಕಾರ ಪ್ರತಿ ವೆಂಟಿಲೇಟರ್ ಗೆ ರೂ, 4.78 ಲಕ್ಷ ವೆಚ್ಚ ಮಾಡಿದೆ. ಕರ್ನಾಟಕದಲ್ಲಿ ರೂ, 18 ಲಕ್ಷ ನೀಡಿ ವೆಂಟಿಲೇಟರ್ ಖರೀದಿಸಲಾಗಿದೆ. ಇದನ್ನು ಭ್ರಷ್ಟಾಚಾರವೆಂದು ಹೇಳಿದರೆ ಬಿಜೆಪಿ ನೋಟಿಸ್ ನೀಡುತ್ತದೆ. ಧೈರ್ಯವಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೋಟಿಸ್ ನೀಡಲಿ.ಪಿಪಿಇ ಕಿಟ್ ಖರೀದಿಯಲ್ಲಿ ಆರೋಗ್ಯ ಇಲಾಖೆ ಅವ್ಯವಹಾರ ನಡೆಸಿದೆ. ರೂ 330 ಬೆಲೆಯ ಪಿಪಿಇ ಕಿಟ್ ಗೆ ರೂ,2,117 ಬಿಲ್ ಮಾಡಿದೆ. ರೂ, 50 ಕ್ಕೆ ಸಿಗುವ ಮಾಸ್ಕ್ ಗೆ 150 ದರ ನೀಡಲಾಗಿದೆ. ಆಮ್ಲಜನಕ ಪೂರೈಕೆ ಉಪಕರಣವನ್ನು ಕೇರಳ ರಾಜ್ಯ ಸರ್ಕಾರ ರೂ, 2.6 ಲಕ್ಷಕ್ಕೆ ಖರೀದಿಸಿದೆ. ಕರ್ನಾಟಕ ಸರ್ಕಾರ ಇದೇ ಉಪಕರಣಕ್ಕೆ ರೂ, 4.36 ಲಕ್ಷ ನೀಡಿದೆ. ರೂ. 650 ಕ್ಕೆ ಸಿಗುವ ಥರ್ಮಲ್ ಸ್ಕ್ಯಾನರ್ ಗೆ ರೂ. 2,200 ಬೆಲೆ ತತ್ತಿದೆ. ಸಮಾಜ ಕಲ್ಯಾಣ ಇಲಾಖೆ ಥರ್ಮಲ್ ಸ್ಕ್ಯಾನರ್ ಒಂದಕ್ಕೆ ರೂ, 9 ಸಾವಿರ ವೆಚ್ಚ ತೋರಿಸಿದೆ. ಇದು ಕೋವಿಡ್-19 ನೆಪದಲ್ಲಿ ಮಾಡಿದ ಲೂಟಿ ಅಲ್ಲವೇ? ಎಂದು ಹೆಬ್ಬಾಳಕರ್ ಪ್ರಶ್ನಿಸಿದರು.
ಆರೋಗ್ಯ ಸಚಿವ ಬಿ ಶ್ರೀರಾಮುಲು ಸುತ್ತ ಹೈದ್ರಾಬಾದ್ ಗುಂಪೊಂದು ನಿರ್ಮಾಣವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರತಿ ವ್ಯವಹಾರವನ್ನು ಈ ಗುಂಪು ನಿರ್ವಹಿಸುತ್ತದೆ. ಜನರ ಆರೋಗ್ಯ ಕಾಪಾಡುವಲ್ಲಿ ಸಚಿವರು ಸಕ್ರಿಯರಾಗಿ ಕೆಲಸ ಮಾಡಬೇಕಿತ್ತು, ಆದರೆ ಅವರು ಅನ್ಯ ಕೆಲಸದಲ್ಲಿ ತಲ್ಲೀನರಾಗಿದ್ದಾರೆ ಎಂದರು.
ಕೊರೋನಾ ಸಂದರ್ಭದಲ್ಲಿ ಬಿಜೆಪಿ ಸ್ವಾರ್ಥ ರಾಜಕೀಯ ಮಾಡುತ್ತಿದೆ. ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ನಡೆಯುತ್ತಿದೆ. ಅಲ್ಲಿನ ಸರಕಾರವನ್ನು ಅಸ್ಥಿರಗೊಳಿಸಿ ಅಧಿಕಾರಕ್ಕೇರಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಇದೊಂದಗು ನಾಚಕೆಗೇಡಿನ ವಿದ್ಯಮಾನ ಎಂದೂ ಲಕ್ಷ್ಮಿ ಹೆಬ್ಬಾಳಕರ್ ಟೀಕಿಸಿದರು.
ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ಮಾಜಿ ಎಂ ಎಲ್ ಸಿ ಅಬ್ದುಲ್ ಜಬ್ಬಾರ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಬಿ ಮಂಜಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮಾಜಿ ಶಾಸಕಡಿ ಜಿ ಶಾಂತಾಗೌಡರು, ಮಾಜಿ ಶಾಸಕ ರಾಜೇಶ, ಶಾಸಕಎಸ್ ರಾಮಪ್ಪ, ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಅನಿತಾ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ