
ಪ್ರಗತಿವಾಹಿನಿ ಸುದ್ದಿ; ಡೆಹ್ರಾಡೂನ್: ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತದಿಂದ ಉಂಟಾದ ಭೀಕರ ಪ್ರವಾಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದ್ದು, ದುರಂತದಲ್ಲಿ 170 ಜನರು ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
ಭಾರತ-ಟಿಬೇಟ್ ಗಡಿ ಭದ್ರತಾಪಡೆ ಯೋಧರು ಸೇರಿದಂತೆ ಹಲವು ಭದ್ರತಾ ಪಡೆಗಳಿಂದ ಕಾರ್ಯಾಚರಣೆ ನಡೆದಿದ್ದು, ಭಾರತ-ಟಿಬೇಟ್ ಗಡಿ ಭದ್ರತಾಪಡೆ ನೇತೃತ್ವವನ್ನು ರಾಜ್ಯದ ಮಹಿಳಾ ಅಧಿಕಾರಿ ವಹಿಸಿರುವುದು ವಿಶೇಷ. ಡಿಐಜಿ ಅಪರ್ಣಾ ಕುಮಾರ್ ಉತ್ತರಾಖಂಡ್ ನಲ್ಲಿ ರಕ್ಷಣಾ ಕಾರ್ಯಾಚರಣೆ ನೇತೃತ್ವವಹಿಸಿದ್ದು, ಇವರು ಮೂಲತ: ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ.
ಅಪರ್ಣಾ ಕುಮಾರ್ 2002ನೇ ಸಾಲಿನ ಐಪಿಎಸ್ ಅಧಿಕಾರಿ. ದುರಂತ ಕುರಿತು ವರದಿಗೆ ತೆರಳಿರುವ ಕನ್ನಡ ಸುದ್ದಿವಾನಿಗಳ ಜೊತೆ ರಕ್ಷಣಾ ಕಾರ್ಯಾಚರಣೆ ಬಗ್ಗೆ ಅರ್ಪಣಾ ಕನ್ನಡದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.