ಬೇಡಾದದ್ದನ್ನು ಬಿಸಾಡಲು ಬೆಳಗಾವಿ ಕರ್ನಾಟಕದ ತಿಪ್ಪೆ ಗುಂಡಿಯೇ? ; ಕಟ್ಟಾ ಬಿಜೆಪಿಗ ಮಹಾಂತೇಶ ವಕ್ಕುಂದ ಸರಣಿ ಪೋಸ್ಟ್ ನೋಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಟ್ಟಾ ಬಿಜೆಪಿಗ ಮಹಾಂತೇಶ ವಕ್ಕುಂದ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸರಣಿ ಪೋಸ್ಟ್ ಹಾಕಿದ್ದಾರೆ.
ಅವರ ನೋವಿನ ಭಾವನೆಗಳನ್ನು ಹೊರಹಾಕಲು ಅವರು ಸಾಮಾಜಿಕ ಜಾಲತಾಣ ಬಳಸಿಕೊಂಡಿದ್ದಾರೆ. ಬೇಡಾದದ್ದನ್ನು ಬಿಸಾಡಲು ಬೆಳಗಾವಿ ಕರ್ನಾಟಕದ ತಿಪ್ಪೆ ಗುಂಡಿಯೇ ? ಎಂದು ಪ್ರಶ್ನಿಸಿದ್ದಾರೆ. ತಾವು ಅನ್ಯಾಯವೆಸಗಿದ ಜನರಿಂದಲೇ ಮತ ಯಾಚನೆ ಮಾಡುವಿರೇ ? ಎಂದು ಕೇಳಿದ್ದಾರೆ.
ಬೆಳಗಾವಿಯ ಮೇಲೆ ಹೊರಗಿನವರ ಹೇರಿಕೆಗೆ ನನ್ನ ಸಹಮತಿ ಇಲ್ಲ. ಭಾಜಪಾ ಬೆಳಗಾವಿಯ ಹಣೆಬರಹ ಕೆಟ್ಟು ಇದ್ದ ಸೀಟು ಕೈ ತಪ್ಪಿ ಹೋಗುವುದರಲ್ಲಿ ಸಂದೇಹವಿಲ್ಲ. ಕ್ಷಮಿಸಿ ಮೋದೀಜಿ ಎಂದು ಬರೆದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಸುರೇಶ ಅಂಗಡಿ ಕೈ ಬಿಡುತ್ತಾರೆ ಎನ್ನುವ ವದಂತಿ ಸಂದರ್ಭದಲ್ಲಿ ಮಹಾಂತೇಶ ವಕ್ಕುಂದ ಹೆಸರು ಮುನ್ನೆಲೆಗೆ ಬಂದಿತ್ತು. ಅವರನ್ನು ಅಮಿತ್ ಶಾ ದೆಹಲಿಗೂ ಕರೆಸಿಕೊಂಡು ಮಾತನಾಡಿದ್ದರು. ಆದರೆ ನಂತರದಲ್ಲಿ ಸುರೇಶ ್ಂಗಡಿಗೇ ಟಿಕೆಟ್ ನೀಡಲಾಗಿತ್ತು.
ಮಹಾಂತೇಶ ವಕ್ಕುಂದ ಅವರ ಆಯ್ದ ಪೋಸ್ಟ್ ಗಳು ಇಲ್ಲಿವೆ –
ಮೋದಿಯವರ ಮೇಲೆ, ಭಾರತ ಮಾತೆಯ ಮೇಲೆ ಎಷ್ಟು ಪ್ರೀತಿ, ಭಕ್ತಿ ಗೌರವ ಇದೆಯೋ ಅಷ್ಟೇ ಪ್ರೀತಿ, ಭಕ್ತಿ ಗೌರವ ನನಗೆ ನನ್ನ ಕ್ಷೇತ್ರದ ಜನರ ಮೇಲಿದೆ. ಅವರ ಹಿತ ಕಾಯುವುದು ನನ್ನ ಧರ್ಮ. ಬೆಳಗಾವಿಯ ಜನರ ನ್ಯಾಯಕ್ಕಾಗಿ ಧ್ವನಿ ಎತ್ತದೇ ಯಾರು ಜನ ನಾಯಕರಾಗೊಲ್ಲ. ಜನಗಳಿಗಾಗಿ ಬದುಕದ ಬದುಕು ಬದುಕಲ್ಲ.
ಭಾರತ ಮಾತಾ ಕೀ ಜೈ
—
ಕಳೆದ ೫ ಅವಧಿಗೆ ಅಂಗಡಿ ಕುಟುಂಬಕ್ಕೆ ಬೆಳಗಾವಿಯ ಮಹಾಜನತೆ ಆಶೀರ್ವಾದ ಮಾಡಿದ್ದರು. ಆ ಜನರ ಆಶೀರ್ವಾದದಿಂದಲೇ ಹೆಸರು ಕೀರ್ತಿ ಯಶಸ್ಸು ಎಲ್ಲವನ್ನು ಅವರು ಸಂಪಾದಿಸಿದರು, ವಿಪರ್ಯಾಸವೆಂದರೆ ಬೆಳಗಾವಿ ಜನರಿಂದ ಇಷ್ಟೆಲ್ಲಾ ಪಡೆದವರು ಬೆಳಗಾವಿಗರ ಅವಕಾಶ ತಪ್ಪಿಸಿ, ಬೆಳಗಾವಿ ಲೋಕಸಭೆಯನ್ನು ಹುಬ್ಬಳ್ಳಿಯ ತಮ್ಮ ಬೀಗರಿಗೆ ಬಿಟ್ಟು ಕೊಟ್ಟರು. ಅವರಿಗೆ ಇಷ್ಟೆಲ್ಲಾ ಆಶೀರ್ವಾದ ಮಾಡಿದ ನಮ್ಮ ಜಿಲ್ಲೆಯವರೇ ಮುಂದಿನ ಎಂಪಿ ಆಗಲಿ ಎಂಬ ಒಂದು ಮಾತನ್ನ ಅವರು ಆಡಲಿಲ್ಲ.
—
ಕೋರೋನಾ ಸಮಯದಲ್ಲಿ ಅತೀ ಹೆಚ್ಚಿನ ರೋಗಿಗಳು ಬೆಳಗಾವಿಯಲ್ಲಿದ್ದಾಗ, ನಮ್ಮ ಜಿಲ್ಲೆಯ ಜನಸಂಖ್ಯೆ ಹೆಚ್ಚಿದ್ದಾಗಲೂ ನಮ್ಮ ಜನರನ್ನು ಸಾಯಲು ಬಿಟ್ಟು ಜನರ ಉಸಿರನ್ನು (oxygen) ಹುಬ್ಬಳ್ಳಿ ಧಾರವಾಡಕ್ಕೆ ಬಹುಪಾಲು ಭಾಗವನ್ನು ಎತ್ತಿಕೊಂಡು ಹೋದವರು ಯಾರು ? ನಮ್ಮ ಬೆಳಗಾವಿಯ ಯೋಜನೆಗಳನ್ನು, ಉದ್ಯಮಗಳನ್ನು ಕಿತ್ತುಕೊಂಡವರು ಯಾರು ? ಈಗ ತಾವು ಅನ್ಯಾಯವೆಸಗಿದ ಜನರಿಂದಲೇ ಮತ ಯಾಚನೆ ಮಾಡುವಿರೇ ?
—
ಮೋದಿಯವರು ಗುಜರಾತಿನವರು ಅವರಿಗೆ ಉತ್ತರ ಪ್ರದೇಶದಲ್ಲಿ ಸೀಟು ಕೊಡಲಾಗಿದೆ ಎಂದು ಉದಾಹರಣೆ ನೀಡುವ ಮಹನೀಯರು ಮೋದಿ ಬೆಳಗಾವಿಯ ಅಭ್ಯರ್ಥಿಯಂತೆ ಅವಕಾಶವಾದಿಯಲ್ಲ, ಚಿಲ್ಲರೆ ಆಸೆಗೆ ಪಕ್ಷಾಂತರಿ ಆದವರಲ್ಲ, ಆರು ತಿಂಗಳಲ್ಲಿ ಪಕ್ಷದಿಂದ ಪಕ್ಷಕ್ಕೆ ಹಾರಿದವರಲ್ಲ ಎಂಬುದುನ್ನು ಮರೆತು ಬಿಟ್ಟಿದ್ದಾರೆ. ತನ್ನ ಸ್ವಾರ್ಥಕ್ಕಾಗಿ ನಮ್ಮ ಪಕ್ಷವನ್ನೇ ನಿಂದಿಸಿ, ನಮ್ಮ ಪ್ರಧಾನಿಯ ಬಗ್ಗೆ ಕೀಳಾಗಿ ಮಾತನಾಡಿದ ವ್ಯಕ್ತಿಗೆ ನಮ್ಮ ಪಕ್ಷದಿಂದ ಸ್ಪರ್ದಿಸುವ ಯಾವ ನೈತಿಕ ಹಕ್ಕಿದೆ ?
—
ಒಬ್ಬ ಕಾರ್ಯಕರ್ತ ತನ್ನ ಮನೆ, ಕೆಲಸ, ವ್ಯಾಪಾರ ಹಾಗು ಕುಟುಂಬದ ಭವಿಷ್ಯವನ್ನೂ ಅಡವಿಟ್ಟು ಪಕ್ಷಕ್ಕಾಗಿ ದುಡಿಯುತ್ತಾನೆ. ಹತ್ತಾರು ವರ್ಷ ಆಯಸ್ಸನ್ನೇ ಸವೆಸಿ ದೇಶಕ್ಕಾಗಿ ತನ್ನ ಜೀವನವನ್ನು ಸಮರ್ಪಿಸುತ್ತಾನೆ ಅಂತಹ ಕಾರ್ಯಕರ್ತ ಏನೋ ಆಗಬಲ್ಲ ಎಂಬ ಸಣ್ಣ ಆಶಾಕಿರಣ ಮೂಡುತ್ತಿರುವಾಗಲೇ ಪಕ್ಷದಿಂದ ಪಕ್ಷಕ್ಕೆ ಹಾರುವ ಹಿರಿತಲೆಗಳು ಆ ಕಾರ್ಯಕರ್ತನ ಭವಿಷ್ಯದ ಬಲಿ ಪಡೆಯುತ್ತಾರೆ. ಅಲ್ಲಿಗೆ ಉಳ್ಳವರು ಮಾತ್ರ ರಾಜಕಾರಣ ಮಾಡುವುದು, ಕಾರ್ಯಕರ್ತರು ಕೇವಲ ಧ್ವಜ ಕಟ್ಟುವುದು.
—
ಇಷ್ಟು ದೊಡ್ಡ ಜಿಲ್ಲೆಯಲ್ಲಿ, ಇಷ್ಟೆಲ್ಲಾ ಜನ ಸೇವಕರಿರುವಾಗ ಅವರಲ್ಲಿನ ಯಾರೊಬ್ಬರಿಗೆ ಅವಕಾಶ ಸಿಕ್ಕಿದ್ದರೂ ತಲೆಬಾಗಿ ಅದನ್ನು ನಾವೆಲ್ಲಾ ಒಕ್ಕೊರಲಿನಿಂದ ಒಪ್ಪಿ ಮುನ್ನಡೆಯಬಹುದು. ಆದರೆ ಪಕ್ಷದ ಸಿದ್ದಾಂತಗಳಿಗೆ ತಲೆ ಬಾಗಿ ಬೆಲೆ ಕೊಟ್ಟು ನಡೆದ ಕಾರ್ಯಕರ್ತರ ಶಿರಚ್ಛೇಧನ ಮಾಡುವ ಮಟ್ಟಕ್ಕೆ ನಾವು ತಾಯಿ ಎಂದು ನಂಬಿರುವ ಪಕ್ಷದ ಹಿರಿಯರು ಇಳಿದರೆ ನಮ್ಮಂತಹ ಅನಾಥ ಮಕ್ಕಳಿಗೆ ಆಸರೆ ಯಾರು ?
—
ಹುಬ್ಬಳ್ಳಿ ಧಾರವಾಡದ ವ್ಯಕ್ತಿ ಹುಬ್ಬಳ್ಳಿಗೆ ಎಂಪಿ (ಜೋಶಿಯವರು). ಹುಬ್ಬಳ್ಳಿ ಧಾರವಾಡದ ವ್ಯಕ್ತಿಯೇ ಹಾವೇರಿಗೂ ಎಂಪಿ, ಈಗ ಅದೇ ಹುಬ್ಬಳ್ಳಿ ಧಾರವಾಡದ ವ್ಯಕ್ತಿ ಬೆಳಗಾವಿಗೂ ಎಂಪಿ. ಹಾಗಾದರೆ ಇನ್ನುಳಿದ ಎಲ್ಲ ಉತ್ತರ ಕರ್ನಾಟಕದ ಕ್ಷೇತ್ರಗಳಿಗೂ ಅವರನ್ನೇ ಹಾಕಿಬಿಡಿ. ಮುಂಬರುವ ವಿಧಾನ ಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗೂ ಹುಬ್ಬಳ್ಳಿ ಧಾರವಾಡದವರೇ ಬಂದು ಬಿಡಲಿ, ನಾವು ಬಂದು ಹೋಗುವವರ ಚಾಕರಿ ಮಾಡಿಕೊಂಡು ಇರುತ್ತೇವೆ.
—
ದೊಡ್ಡ ದೊಡ್ಡವರ ಸಂಧಾನವಾಗಿ ಅವರು ಪಕ್ಷ ಬಿಟ್ಟು ಹೋದವರನ್ನು ಪಕ್ಷಕ್ಕೆ ಮರಳಿ ತಂದರೆ ಮರಳಿ ಬಂದ ವ್ಯಕ್ತಿಯ ಸ್ವಕ್ಷೇತ್ರದಲ್ಲಿ ಅವರಿಗೆ ಅವಕಾಶ ಕಲ್ಪಿಸಬೇಕಿತ್ತು, ಬೇಡಾದದ್ದನ್ನು ಬಿಸಾಡಲು ಬೆಳಗಾವಿ ಕರ್ನಾಟಕದ ತಿಪ್ಪೆ ಗುಂಡಿಯೇ ?
—
ದೊಡ್ಡ ದೊಡ್ಡ ನಾಯಕರು ದೊಡ್ಡ ದೊಡ್ಡ ಹೊಂದಾಣಿಕೆ, ಸಂಧಾನ ಮಾಡಿಕೊಂಡು. ವಿಧಾನ ಸಭೆಯಲ್ಲಿ ಸಣ್ಣ ಕಾರ್ಯಕರ್ತನ ಮುಂದೆ ಸೋತ ಹುಬ್ಬಳ್ಳಿಯ ರಾಜಕಾರಣಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮರಳಿ ಪಕ್ಷಕ್ಕೆ ಕರೆ ತರುತ್ತಾರಂತೆ, ಅವರಿಗೆ ಎಂಪಿ ಮಾಡುವುದಾಗಿ ಮಾತು ಕೊಡುತ್ತಾರಂತೆ, ಹಾಗಾಗಿ ಬೆಳಗಾವಿಯ ಮೇಲೆ ಅವರನ್ನು ಹೇರುತ್ತಾರಂತೆ, ಬೆಳಗಾವಿಯ ಜನ ಜೈ ಜೈ ಎನ್ನುತ್ತ ಅವರ ಚುನಾವಣೆ ಮಾಡಬೇಕಂತೆ, ಯಾಕೆ ಹೇಳಿ ? ನಾವು ಗುಲಾಮರಲ್ಲವೇ …. ನಮ್ಮನ್ನು ಯಾರು ಬೇಕಾದರೂ ಆಳಬಹುದು. ನಮಗೆ ಒಗ್ಗಟ್ಟಿಲ್ಲ. ನಮಗೆ ಪ್ರಶ್ನಿಸಲು ಮಾತನಾಡಲು ಬರೋಲ್ಲ, ಹಾಗಾಗಿ ಯಾರು ಬಂದರು ಕೋಲೆ ಬಸವನ ರೀತಿ ನಾವು ತಲೆ ಅಲ್ಲಾಡಿಸಿ ಒಪ್ಪಿಕೊಳ್ಳುತ್ತೇವೆ ಎಂಬ ಭಾವನೆ ಪಕ್ಷದ ಹಿರಿಯರದ್ದು.
—
ಸಿಕ್ಕ ಸಿಕ್ಕವರನ್ನು – ಹೊರಗಿನವರನ್ನು ನಮ್ಮ ಮೇಲೆ ಈ ರೀತಿ ಹೇರುತ್ತ ಹೋಗುವುದಾದರೆ ಸ್ಥಳೀಯ ಕಾರ್ಯಕರ್ತರು ಕೇವಲ ಪಕ್ಷದ ಹಮಾಲಿ ಕಾರ್ಯ ಮಾಡಲು ದುಡಿಯಬೇಕೆ ? ಮೋದಿಯವರನ್ನು ಸದಾ ಗೆಲ್ಲಿಸುತ್ತೇವೆ ಎಂಬ ಕಾರಣಕ್ಕೆ 19 ಲಕ್ಷ ಬೆಳಗಾವಿ ಲೋಕಸಭೆಯ ಮತದಾರರಿಗೆ ಅಭಿಪ್ರಾಯವೇ ಇಲ್ಲವೇ ? ಈ ಕ್ಷೇತ್ರದ ಮೂರು ಲಕ್ಷ ಮರಾಠ ಮತದಾರರಿಗೆ, ಇಲ್ಲಿರುವ ದೂರ ದೂರದ ಹಳ್ಳಿಗಳ ಸಾಮಾನ್ಯ ಜನಕ್ಕೆ ಈ ನಿರ್ಧಾರದಿಂದ ನ್ಯಾಯ ಸಿಗಲು ಸಾಧ್ಯವೇ ?
—
ನಮ್ಮ ಕ್ಷೇತ್ರದ ಜನರ ಭಾವನೆಗೆ ಬೆಲೆ ತುಂಬುವ ಕೆಲಸ ನಮ್ಮಿಂದಾಗಬೇಕು, ಅವರ ಆಶೋತ್ತರಳಿಗೆ ಸ್ಪಂದಿಸಬಲ್ಲ ವ್ಯಕ್ತಿ ಅವರೊಳಗಿನ ಒಬ್ಬನಾಗಿರಬೇಕು, ಅದನ್ನು ಈಡೇರಿಸುವುದು ಈ ಮಹಾಜನತೆಯ ನಾಡಿ ಮಿಡಿತ ಅರಿತವನಿಗೇ ಅದೆಷ್ಟೋ ಕಷ್ಟ ಸಾಧ್ಯವಾಗಿ ಹೋಗುತ್ತದೆ. ಅಂತಹದರಲ್ಲಿ ನನ್ನ ಕ್ಷೇತ್ರದ ಜನ ಯಾರು ಎಂಬುದನ್ನ ಅರಿಯದವ ಯಾವ ಜನಸೇವೆ ಮಾಡಬಲ್ಲ ?
—
ಸ್ನೇಹಿತರೇ.
ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಋಣಿ. ಧನ್ಯವಾದಗಳು
ನಿಮ್ಮ ನಿರೀಕ್ಷೆ ತಲುಪಲಾಗಲಿಲ್ಲ, ಕ್ಷಮೆ ಇರಲಿ.
ಬೆಳಗಾವಿಯ ಮೇಲೆ ಹೊರಗಿನವರ ಹೇರಿಕೆಗೆ ನನ್ನ ಸಹಮತಿ ಇಲ್ಲ.
ಭಾಜಪಾ ಬೆಳಗಾವಿಯ ಹಣೆಬರಹ ಕೆಟ್ಟು ಇದ್ದ ಸೀಟು ಕೈ ತಪ್ಪಿ ಹೋಗುವುದರಲ್ಲಿ ಸಂದೇಹವಿಲ್ಲ.
ಕ್ಷಮಿಸಿ ಮೋದೀಜಿ
Narendra Modi Sorry
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ