ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬುಧವಾರ ರಾತ್ರಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆ ಎದುರು ನಡೆದಿರುವ ಹಿಂಸಾಚಾರ ಪೂರ್ವ ಯೋಜಿತವೇ ಎನ್ನುವ ಸಂಶಯ ಮೂಡುವಂತಿದೆ.
ಅಂಬುಲೆನ್ಸ್ ಗೆ ಬೆಂಕಿ ಹಚ್ಚು ಮುನ್ನ ನಡೆದಿರುವ ಕಲ್ಲು ತೂರಾಟ, ಬೆಂಕಿ ಹಚ್ಚಿರುವ ಕೃತ್ಯ, ಅಷ್ಟೊಂದು ಜನರು ಅಲ್ಲಿ ಸೇರಿರುವ ರೀತಿ, ಇನ್ನಿತರ 5-6 ವಾಹನಗಳಿಗೆ ಕಲ್ಲು ತೂರಿರುವುದನ್ನು ನೋಡಿದರೆ ಇದು ಪಕ್ಕಾ ಪೂರ್ವಯೋಜಿತವೆನಿಸುತ್ತದೆ. 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದಾಗ್ಯೂ ಅಷ್ಟೊಂದು ಜನರು ಅಲ್ಲಿ ಸೇರಿದ್ದು, ಏಕಾಏಕಿ ಹಿಂಸಾಚಾರ ಆರಂಭಿಸಿದ್ದು ಸಂಶಯ ಮೂಡಿಸುವಂತಿದೆ.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರ ಪ್ರಕಾರ ರೋಗಿ ಮೃತಪಟ್ಟಿದ್ದರಿಂದ ಜನರು ಭಾವನಾತ್ಮಕರಾಗಿ ಈ ಕೃತ್ಯ ನಡೆಸಿದ್ದಾರೆ. 19ರಂದು ಉಸಿರಾಟದ ತೊಂದರೆಯಿಂದ ದಾಖಲಾಗಿದ್ದ ಬೆಳಗಾವಿಯ ವ್ಯಕ್ತಿಯನ್ನು ಇಂದು ಐಸಿಯು ಗೆ ದಾಖಲಿಸಲಾಗಿತ್ತು. ಆದರೆ ಆತ ಬದುಕುಳಿಯಲಿಲ್ಲ. ಇದರಿಂದ ಆತನ ಸಂಬಂಧಿಕರು ಈ ಕೃತ್ಯ ನಡೆಸಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ.
ಆದರೆ ಅಲ್ಲಿ ತೂರಲಾಗಿರುವ ಕಲ್ಲುಗಳನ್ನು ನೋಡಿದರೆ ಅದೆಲ್ಲ ಪೂರ್ವಯೋಜಿತದಂತೆಯೇ ಕಾಣುತ್ತಿದೆ. ಕೆಲವು ವರ್ಷ ಬೆಳಗಾವಿಯ ಕೆಲವು ಗಲ್ಲಿಗಳಲ್ಲಿ ನಡೆಯುತ್ತಿದ್ದ ಕೋಮು ಗಲಭೆಯ ವೇಳೆಯೂ ಇದೇ ರೀತಿ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡು ತೂರಲಾಗುತ್ತಿತ್ತು. ಹಾಗೆಯೇ ಇಲ್ಲೂ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿತ್ತೇ ಎನ್ನುವ ಸಂಶಯ ಮೂಡುವಂತಿದೆ.
ಬಿಮ್ಸ್ ಎದುರು ರಸ್ತೆ ತುಂಬ ಕಲ್ಲುಗಳು ಬಿದ್ದಿವೆ. ವಾಹನಗಳಿಗೆ ಎಸೆದಿರುವ ಕಲ್ಲುಗಳು ಒಂದರಿಂದ 5 ಕಿಲೋ ತೂಕದವರೆಗೂ ಇದೆ. ಅತ್ಯಂತ ವ್ಯವಸ್ಥಿತವಾಗಿ ಗಲಭೆ ನಡೆಸಿ ದುಷ್ಕರ್ಮಿಗಳು ಪಾರಾಗಿದ್ದಾರೆ. ಈ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಮೃತರ ಸಂಬಂಧಿಕರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.
ಘಟನೆಯಿಂದ ವೈದ್ಯಕೀಯ ಸಿಬ್ಬಂದಿ ಅಕ್ಷರಶಃ ಕಂಗೆಟ್ಟು ಹೋಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ತಂಡ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಆಸ್ಪತ್ರೆಗೆ ಹೆಚ್ಚಿನ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೆ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇನ್ನಷ್ಟು ಬಿಗಿ ಬಂದೋಬಸ್ತ್ ಏರ್ಪಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ