Kannada NewsKarnataka NewsLatest

ಏಕಾಂಗಿಯಾದ್ರಾ ರಮೇಶ ಜಾರಕಿಹೊಳಿ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 17 ಜನರ ಸೈನ್ಯ ಕಟ್ಟಿಕೊಂಡು ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಕೆಡವಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ತರುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ರಮೇಶ ಜಾರಕಿಹೊಳಿ ಈಗ ಒಬ್ಬಂಟಿಯಾದ್ರಾ?

ಶನಿವಾರ ಮಾಧ್ಯಮಗಳು ಅವರಿಗೆ ಇದೇ ಪ್ರಶ್ನೆಯನ್ನು ಮುಂದಿಟ್ಟಿದ್ದವು.

ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುವ ಯೋಚನೆ ಮಾಡಿ ಈಚೆಗೆ ಸುದ್ದಿಯಾಗಿದ್ದ ರಮೇಶ ಜಾರಕಿಹೊಳಿ, ಸಧ್ಯಕ್ಕೆ ಅದು ಮುಗಿದುಹೋದ ಅಧ್ಯಾಯ. ಮುಂದೆ ನೋಡೋಣ ಎನ್ನುವ ಮೂಲಕ ತಮ್ಮ ಯೋಜನೆ ಇನ್ನೂ ಜೀವಂತವಿದೆ ಎನ್ನುವ ಸುಳಿವು ನೀಡಿದರು.

ಕೆಲವು ಹಿತೈಷಿಗಳ ಸಲಹೆಯಂತೆ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಅವರು ತಿಳಿಸಿದರು. ರಾಜಿನಾಮೆ ನೀಡುವ ಯೋಚನೆ ಮಾಡಿದ್ದು ಸುಳ್ಳು, ಇವೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಅವರು ಬೇರೆ ರಾಜಕಾರಣಿಗಳಂತೆ ಹೇಳಲಿಲ್ಲ.

ರಮೇಶ ಜಾರಕಿಹೊಳಿ ಅನೇಕ ಸಂದರ್ಭದಲ್ಲಿ ದುಡುಕಿ ಮಾತನಾಡುತ್ತಾರೆ, ದುಡುಕಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಹೋದರ ಬಾಲಚಂದ್ರ ಜಾರಕಿಹೊಳಿ ಕಳೆದ ಕೆಲವು ವರ್ಷಗಳಿಂದ ರಮೇಶ ಜಾರಕಿಹೊಳಿಗೆ ಸರಿದಾರಿಯಲ್ಲಿ ಸಾಗುವಂತೆ ಸಲಹೆ ನೀಡುತ್ತಿದ್ದಾರೆ. ಸರಕಾರ ಕೆಡವಿ, ಸರಕಾರ ಕಟ್ಟುವ ಸಂದರ್ಭದಲ್ಲೂ ಮುಂದೆ ನಿಂತು ಮಾರ್ಗದರ್ಶನ ಮಾಡಿದವರೇ ಬಾಲಚಂದ್ರ ಜಾರಕಿಹೊಳಿ.

ಈಗಲೂ ರಾಜಿನಾಮೆ ವಿಚಾರ ಮಾತನಾಡದಂತೆ ಬಾಲಚಂದ್ರ ನಿಯಂತ್ರಿಸಿರುವ ಸಾಧ್ಯತೆ ಇಲ್ಲದಿಲ್ಲ. ಬಾಲಚಂದ್ರ ಜೊತೆ ಚರ್ಚಿಸದೆ ಅಥವಾ ಅವರ ತಾಳ್ಮೆಗೆ ಬೆಸರಿಸಿಕೊಂಡು ರಮೇಶ ಏಕಾಏಕಿ ರಾಜಿನಾಮೆ ನಿರ್ಧಾರ ಪ್ರಕಟಿಸಿರಬಹುದಾದ ಸಾಧ್ಯತೆ ಇದೆ. ಬಾಲಚಂದ್ರ ಎಂದೂ ದುಡುಕಿ ನಿರ್ಧಾರ ತೆಗೆದುಕೊಳ್ಳುವವರಲ್ಲ. ಎಲ್ಲವನ್ನೂ ಅಳೆದು ತೂಗಿ ನಿರ್ಧರಿಸುವವರು.

ಬಿಜೆಪಿ ಸರಕಾರ ರಚನೆಯಾಗುತ್ತಿರುವ ಸಂದರ್ಭದಲ್ಲಿ ಸಚಿವಸ್ಥಾನಕ್ಕಾಗಿ ನಡೆಯಬಹುದಾದ ಕಚ್ಚಾಟವನ್ನು ಊಹಿಸಿ, ಮುಂಚಿತವಾಗಿಯೇ ಕೆಎಂಎಫ್ ಅಧ್ಯಕ್ಷಸ್ಥಾನ ಪಡೆದು ಸೈಲಂಟ್ ಆಗಿ ಜಾಣ್ಮೆ ಮೆರೆದವರು ಬಾಲಚಂದ್ರ ಜಾರಕಿಹೊಳಿ.

ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಏಕಾಏಕಿ ನಿರ್ಧರಿಸಿದ್ದು ಅವರ ಮಿತ್ರಮಂಡಳಿಯಲ್ಲೇ ಹಲವರಿಗೆ ಶಾಕ್ ನೀಡಿದೆ. ಆದರೆ ಹೆಚ್ಚಿನವರು ಅವರ ಈ ನಿರ್ಧಾರವನ್ನು ಬೆಂಬಲಿಸಿ ಮಾತನಾಡಲಿಲ್ಲ. ಗಂಭೀರವಾಗಿ ಅವರಿಗೆ ನ್ಯಾಯ ಒದಗಿಸುವುದಕ್ಕೆ ಯಾರೂ ಮುಂದಾಗಲಿಲ್ಲ. ಬಿ.ಸಿ.ಪಾಟೀಲ ಸೇರಿ ಒಂದಿಬ್ಬರು ಬಹಿರಂಗ ವಿರೋಧವನ್ನೂ ವ್ಯಕ್ತಪಡಿಸಿದರು. ಇದಾದ ನಂತರ ಅವರು ದೆಹಲಿಗೆ ಹೋಗಿ ಬಂದಾರಾದರೂ ಅಲ್ಲೂ ಪೂರಕ ಪ್ರತಿಕ್ರಿಯೆ ಸಿಕ್ಕಿದಂತಿಲ್ಲ.

ಈ ಎಲ್ಲ ಬೆಳವಣಿಗೆ ನಂತರ ಬಹುತೇಕ ಮಿತ್ರರು ಅವರಿಂದ ಅಂತರ ಕಾಯ್ದುಕೊಂಡಂತಿದೆ. ಹಾಗಾಗಿ ರಮೇಶ ಜಾರಕಿಹೊಳಿ ಒಬ್ಬಂಟಿಯಾಗಿರುವ ಸಾಧ್ಯತೆಯ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ಕುರಿತು ಶನಿವಾರ ಅವರನ್ನು ಪ್ರಶ್ನಿಸಿದಾಗ ಅವರು ಅದನ್ನು ನಿರಾಕರಿಸಿದರು. ನಾನು ಒಬ್ಬಂಟಿಯಾಗಿಲ್ಲ. ಉಳಿದವರೊಂದಿಗೆ ನಾನೇ ಮಾತನಾಡಲು ಹೋಗಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ ಎಂದು ಹೇಳಿದ್ದಾರೆ. 

ಆದರೆ, ರಮೇಶ ಜಾರಕಿಹೊಳಿಯಿಂದಲೇ ಅಧಿಕಾರ ಪಡೆದವರು ಅವರನ್ನು ಎಷ್ಟು ಬೆಂಬಲಿಸಬೇಕಿತ್ತೊ ಅಷ್ಟು ಮಾಡುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟ. ಏನೇ ಆದರೂ ರಮೇಶ ಸುಮ್ಮನೇ ಕೂಡ್ರುವ ವ್ಯಕ್ತಿಯಂತೂ ಅಲ್ಲ. ನಮ್ಮ ಮನೆಯಲ್ಲಿ ಇನ್ನೂ 10 ಹುಲಿಗಳಿವೆ ಎನ್ನುವ ಎಚ್ಚರಿಕೆಯನ್ನು ಈಗಾಗಲೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಈ ರಾಜಕೀಯ ಬೆಳವಣಿಗೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

 

ಸಂಬಂಧಿಸಿದ ಸುದ್ದಿಗಳನ್ನು ಈ ಲಿಂಕ್ ಗಳನ್ನು ಕ್ಲಿಕ್ ಮಾಡಿ ಓದಬಹುದು –

ಶಾಸಕ ಸ್ಥಾನಕ್ಕೂ ರಮೇಶ ಜಾರಕಿಹೊಳಿ ರಾಜಿನಾಮೆ?

ರಮೇಶ ಜಾರಕಿಹೊಳಿಗೆ ನ್ಯಾಯ ಕೊಡುವುದರಲ್ಲಿ ದುರುದ್ದೇಶದಿಂದ ವಿಳಂಬ – ಯೋಗೀಶ್ವರ ಗಂಭೀರ ಆರೋಪ (ವಿಡೀಯೋ ಸಹಿತ ಸುದ್ದಿ)

ಬುಧವಾರ ರಮೇಶ ಜಾರಕಿಹೊಳಿ ರಾಜಿನಾಮೆ?; 20 ಸಾವಿರ ಕೋಟಿ ರೂ. ವಿವಾದದ ಸುತ್ತ….

ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಯೋಚನೆ ಹಿಂದೆ ದೊಡ್ಡ ಪ್ಲ್ಯಾನ್?

ರಮೇಶ ಜಾರಕಿಹೊಳಿಗೆ ಮಧ್ಯರಾತ್ರಿ 2 ಗಂಟೆಗೆ ಫೋನ್ ಮಾಡಿದವರ್ಯಾರು?; ಮೂವರ ವಿಡೀಯೋ ಬಹಿರಂಗ

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button