ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೋ? ಕಾಂಗ್ರೆಸ್ ನಲ್ಲಿದ್ದಾರೋ? – ಜೊಲ್ಲೆ ಆಕ್ರೋಶ
ಪ್ರಗತಿವಾಹಿನಿ ಎಕ್ಸಕ್ಲೂಸಿವ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯ ಜಲಸಂಪನ್ಮೂಲ ಸಚಿವರೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ ಜಾರಕಿಹೊಳಿ ವಿರುದ್ಧ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾ ಸಾಹೇಬ ಜೊಲ್ಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರೊಂದಿಗೂ ಚರ್ಚಿಸದೆ ಏಕಾ ಏಕಿ ಇಂತಹ ಹೇಳಿಕೆ ನೀಡಲು ಇವರ್ಯಾರು ಎಂದು ಪ್ರಶ್ನಿಸಿದ್ದಾರೆ.
ರಮೇಶ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೋ ಅಥವಾ ಕಾಂಗ್ರೆಸ್ ನಲ್ಲಿದ್ದಾರೋ ಎಂದು ಜೊಲ್ಲೆ ಪ್ರಶ್ನಿಸಿದ್ದಾರೆ.
ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅಣ್ಣಾಸಾಹೇಬ ಜೊಲ್ಲೆ ರಮೇಶ ಜಾರಕಿಹೊಳಿ ವಿರುದ್ಧ ಸಿಡಿಮಿಡಿಗೊಂಡರು. ಜವಾಬ್ದಾರಿ ಸ್ಥಾನಜದಲ್ಲಿದ್ದು ಈ ರೀತಿ ಏಕೆ ಹೇಳುತ್ತಾರೋ ಎಂದು ಆಕ್ರೋಶಗೊಂಡರು.
ನಿನ್ನೆ ಗೋಕಾಕದಲ್ಲಿ ನಡೆದ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ ಜಾರಕಿಹೊಳಿ, “ಪಕ್ಷದ ಕಾರ್ಯಕರ್ತರ ಗೊಂದಲದಲ್ಲಿ ಚಿಕ್ಕೋಡಿ, ನಿಪ್ಪಾಣಿ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಮುನ್ನಡೆ ಸಾಧಿಸಿರಬಹುದು. ನಾನು ಮನಸ್ಸು ಮಾಡಿದರೆ ೨೪ ಗಂಟೆಗಳಲ್ಲಿ ಚಿಕ್ಕೋಡಿ, ನಿಪ್ಪಾಣಿ ಕ್ಷೇತ್ರಗಳಲ್ಲಿ ಗ್ರಾಪಂ ಸದಸ್ಯರನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬಹುದು” ಎಂದು ಹೇಳಿಕೆ ನೀಡಿದ್ದರು.
ಚಿಕ್ಕೋಡಿ ಮತ್ತು ನಿಪ್ಪಾಣಿ ಎರಡೂ ಕಡೆ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ಸ್ಥಾನಗಳನ್ನು ಗೆದ್ದಿದೆ. ನಮಗೆ ಹಿನ್ನಡೆಯಾಗಿಲ್ಲ, ಹಿನ್ನಡೆಯಾಗುವ ಪ್ರಶ್ನೆಯೇ ಇಲ್ಲ. ಅಂತದ್ದರಲ್ಲಿ ರಮೇಶ ಜಾರಕಿಹೊಳಿ ಬಹಿರಂಗ ಸಭೆಯಲ್ಲಿ ಇಂತಹ ಹೇಳಿಕೆ ಏಕೆ ನೀಡಬೇಕು ಎಂದು ಅಣ್ಣಾ ಸಾಹೇಬ ಜೊಲ್ಲೆ ಪ್ರಶ್ನಿಸಿದ್ದಾರೆ.
ನಿಪ್ಪಾಣಿಯಲ್ಲಿ ಬಿಜೆಪಿ 11, ಕಾಂಗ್ರೆಸ್ 12 ಹಾಗೂ ಇತರರು 2 ಪಂಚಾಯಿತಿಗಳಲ್ಲಿ ಗೆದ್ದಿದ್ದಾರೆ. ಚಿಕ್ಕೋಡಿಯಲ್ಲಿ ಬಿಜೆಪಿ 12, ಕಾಂಗ್ರೆಸ್ 10 ಹಾಗೂ ಇತರರು 3 ಕಡೆ ಗೆದ್ದಿದ್ದಾರೆ. ಹಾಗಾಗಿ ನಮಗೆ ಹೇಗೆ ಹಿನ್ನಡೆಯಾಗುತ್ತದೆ ಎಂದು ಪ್ರಶ್ನಿಸಿದರು. ಈ ಕುರಿತು ಸಂಪೂರ್ಣ ವಿವರವುಳ್ಳ ಕೊಷ್ಠಕವನ್ನೂ ಜೊಲ್ಲೆ ಪ್ರಗತಿವಾಹಿನಿಗೆ ನೀಡಿದರು.
ನಮ್ಮ ಜೊತೆ ಅಥವಾ ಬೇರೆ ಯಾರದೇ ಜೊತೆಗೆ ಚರ್ಚಿಸಿದ್ದರೆ ಅವರಿಗೆ ನಿಜ ವಿಷಯ ಗೊತ್ತಾಗುತ್ತಿತ್ತು. ಯಾರೊಂದಿಗೂ ಚರ್ಚಿಸದೆ ಈ ರೀತಿ ಮಾತನಾಡಿದ್ದೇಕೆ? ಇವರು ಯಾವ ಪಕ್ಷದಲ್ಲಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನವರು ನಮಗೆ ಬಹುಮತ ಬಂದಿದೆ ಎಂದು ಹೇಳಿಕೊಂಡು ಓಡಾಡಬಹುದು. ಅದು ರಾಜಕೀಯ. ನಾವು ಪ್ರಶ್ನಿಸುವುದಿಲ್ಲ. ಆದರೆ ಬಿಜೆಪಿಯವರಾಗಿಕೊಂಡು, ಅದರಲ್ಲೂ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ಹೇಳಿಕೆಯನ್ನು ಹೇಗೆ ನೀಡುತ್ತಾರೆ ಎಂದು ಪ್ರಶ್ನಿಸಿದರು.
ನಾನು ಮನಸ್ಸು ಮಾಡಿದರೆ ೨೪ ಗಂಟೆಗಳಲ್ಲಿ ಚಿಕ್ಕೋಡಿ, ನಿಪ್ಪಾಣಿ ಕ್ಷೇತ್ರಗಳಲ್ಲಿ ಗ್ರಾಪಂ ಸದಸ್ಯರನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ಮನಸ್ಸು ಮಾಡಲು ಇವರಿಗೇ ಯಾರು ಹೇಳಬೇಕು? ಇವರು ಬಿಜೆಪಿಯಲ್ಲಿದ್ದರೆ ಮೊದಲೇ ಮನಸ್ಸು ಮಾಡಬೇಕಿತ್ತು. ಮನಸ್ಸು ಮಾಡಬೇಡಿ ಎಂದು ಹೇಳಿದವರ್ಯಾರು? ಎಂದು ಪ್ರಶ್ನಿಸಿದ್ದಾರೆ.
ರಮೇಶ ಜಾರಕಿಹೊಳಿ ಹೇಳಿಕೆ ನೋಡಿ ಶಾಕ್ ಆಯಿತು. ಮೊದಲಿನಿಂದಲೂ ಇವರು ಇಂತದ್ದು ಒಂದಿಲ್ಲೊಂದು ಮಾಡುತ್ತಲೇ ಬಂದಿದ್ದಾರೆ. ಈ ರೀತಿ ಏಕೆ ಮಾಡುತ್ತಾರೆ? ಹೀಗೆಲ್ಲ ಏಕೆ ಮಾತನಾಡುತ್ತಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಜೊಲ್ಲೆ ಹೇಳಿದರು.
ಜ.16ರಂದು ಅಮಿತ್ ಶಾ ಬೆಳಗಾವಿಗೆ – ರಮೇಶ್ ಜಾರಕಿಹೊಳಿ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ