Latest

ಆತ್ಮಹತ್ಯೆಯೇ ಅಂತಿಮ ಪರಿಹಾರವೇ?

ಗಿರೀಶ್ ಭಟ್

ಸುಶಾಂತ್ ಸಿಂಗ್ ರಜಪೂತ್ ಎನ್ನುವ ಯುವ ಬಾಲಿವುಡ್ ನಟ ಆತ್ಮಹತ್ಯೆ ಮಾಡಿಕೊಂಡಿದ್ದು ದುರಾದೃಷ್ಟವೇ ಸರಿ. ೨೦೧೬ ರಲ್ಲಿ ಬಿಡುಗಡೆಯಾದ ಎಂ.ಎಸ್. ಧೋನಿ ದಿ ಅನ್‌ಟೋಲ್ಡ್ ಸ್ಟೋರಿ ಖ್ಯಾತಿಯ ಈ ಬಾಲಿವುಡ್ ನಟ ಕಳೆದ ಭಾನುವಾರ ಮುಂಬೈ ನಗರದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಆದರೆ ಈ ಪ್ರಕರಣದ ತನಿಖೆ ನಡೆಯಬೇಕಿದೆ ಅಷ್ಟೆ. ಬಾಲಿವುಡ್‌ನಲ್ಲಿ ಅವಕಾಶ ಸಿಗಲು ಗಾಡ್ ಫಾದರ್‌ಗಳ ಸಹಾಯ ಬೇಕಾಗುತ್ತದೆ. ಯಾವುದೂ ಇಲ್ಲದೆ ಸರಳ ಹಿನ್ನೆಲೆಯಿಂದ ಬಂದವರನ್ನು ಕೀಳಾಗಿ ಕಾಣುತ್ತಾರೆ ಎಂಬೆಲ್ಲಾ ಅಭಿಪ್ರಾಯಗಳನ್ನು ಹಲವು ಬಾಲಿವುಡ್ ನಟ-ನಟಿಯರು ಹೊರಹಾಕಿದ್ದು ಇದಕ್ಕೆ ಪುಷ್ಟಿ ನೀಡಿದಂತಿದೆ. ಆತ್ಮಹತ್ಯೆ ಎಂದರೆ ಮನುಷ್ಯನು ತನ್ನ ಆತ್ಮವನ್ನೇ ನಾಶಪಡಿಸಿದಂತಾಗುತ್ತದೆ. ಅದಕ್ಕೆ ಆತ್ಮಹತ್ಯೆ ಎನ್ನುವ ಎಷ್ಟೊಂದು ಅರ್ಥವಿರುವ ಶಬ್ದವೇ ಹೇಳುತ್ತದೆ. ನಿನ್ನ ಆತ್ಮವನ್ನು ನೀನೇ ನಾಶಪಡಿಸಿದಂತೆ ಎಂದು.
ಎಷ್ಟೋ ಪುಣ್ಯ ಮಾಡಿದ್ದರಿಂದ ನಮಗೆ ಮನುಷ್ಯ ಜನ್ಮ ಪ್ರಾಪ್ತವಾಗಿದೆ ಎಂದು ಹಿರಿಯರು ಯಾವಾಗಲೂ ಹೇಳುತ್ತಿರುತ್ತಾರೆ. ಹೌದು, ಇದು ನಿಜವಾಗಿಯೂ ಸತ್ಯ. ಏಕೆಂದರೆ ಮನುಷ್ಯ ಜನ್ಮದಲ್ಲಿ ಹುಟ್ಟಬೇಕೆಂದರೆ ಅದು ಎಷ್ಟೋ ಜನ್ಮಗಳ ಪುಣ್ಯದ ಫಲವೇ ಆಗಿದೆ. ಮನುಷ್ಯ ತನ್ನ ಜೀವನದುದ್ದಕ್ಕೂ ಸುಖ-ದುಃಖಗಳನ್ನು ಕಾಣುತ್ತಾನೆ. ನಮಗೆ ಜೀವನದಲ್ಲಿ ಎಷ್ಟೇ ಸಮಸ್ಯೆ ಬರಲಿ. ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ಪರಿಹಾರ ಸಿಗುವುದು ಸ್ವಲ್ಪ ತಡವಾಗಬಹುದು ಅಥವಾ ಮೊದಲಿಗೆ ಅದಕ್ಕೆ ಪರಿಹಾರ ಸಿಗುವುದೇ ಇಲ್ಲವೇನೋ ಎಂದು ಭಾಸವಾಗಬಹುದು. ಆದರೆ ಅದಕ್ಕೆ ಪರಿಹಾರ ಖಂಡಿತವಾಗಿಯೂ ಇದ್ದೇ ಇರುತ್ತದೆ. ತಾಯಿ ಮಗುವಿಗೆ ಜನ್ಮದ ಜೊತೆಗೆ ಮೃತ್ಯುವನ್ನೂ ನೀಡುತ್ತಾಳೆ ಎಂದು ಮಹಾಭಾರತದಲ್ಲಿ ಶ್ರೀ ಕೃಷ್ಣನು ಹೇಳಿದ್ದಾನೆ. ಹುಟ್ಟಿನೊಂದಿಗೆ ಸಾವು ನಿಶ್ಚಿತ. ಕೆಲವರು ೬೦-೭೦ ರ ಆಸುಪಾಸಿನಲ್ಲಿ, ಇನ್ನೂ ಕೆಲವರು ೮೦-೯೦ ರ ತನಕವೂ ಬದುಕಿ ಸಾಯಬಹುದು. ಒಂದು ದಿನ ಬರುವ ಸಾವಿಗೆ ಜೀವನ ಪೂರ್ತಿ ಕಾಯಬೇಕೇ ಎಂದು ಹತಾಶೆ ಗೊಂಡವರು ಹೇಳುವುದೂ ಉಂಟು. ಅದು ಅವರವರ ಅದೃಷ್ಟ-ಹಣೆಬರಹ ಎಂದುಕೊಳ್ಳೋಣ. ಆದರೆ ಮನುಷ್ಯನ ಹುಟ್ಟು ಯಾವಾಗ ಎಂದು ಗೊತ್ತಿರುತ್ತದೆ. ಸಾವು ಮಾತ್ರ ದೇವರಿಗೇ ಗೊತ್ತು. ಆದ್ದರಿಂದ ಪ್ರತಿಯೊಬ್ಬ ಮಾನವನಿಗೂ ತಾನೆಷ್ಟು ವರುಷ ಬದುಕಬಲ್ಲೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಆತ್ಮಹತ್ಯೆ ಮಹಾಪಾಪ ಎಂದು ಧರ್ಮ ಗ್ರಂಥಗಳೇ ಹೇಳುತ್ತವೆ. ಆದರೆ ದೇಶದಲ್ಲಿ ಆತ್ಮಹತ್ಯೆಯಂತಹ ಘಟನೆಗಳು ಆಗಾಗ ವರದಿ ಆಗುತ್ತಲೇ ಇರುತ್ತವೆ.
ಇಷ್ಟೆಲ್ಲ ಹುಟ್ಟು-ಸಾವಿನ ಬಗ್ಗೆ ವಿಶ್ಲೇಷಣೆಗೆ ಕಾರಣ ಮೊನ್ನೆ ಸುಶಾಂತ್ ಸಿಂಗ್ ರಜಪೂತ್ ಘಟನೆಯಾಯಿತು. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಜಾಹಿರಾತು ನಿರೂಪಕಿ ಹಾಗೂ ನಟಿ ವಿ.ಕೆ. ಚಂದನಾ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೇವಲ ಪ್ರಿಯಕರ ಕೈಕೊಟ್ಟ ಕಾರಣಕ್ಕೆ ಆತ್ಮಯತ್ಯೆಯಂತಹ ಹಾದಿ ತುಳಿದಿರುವುದು ಸರಿಯೆ? ಮದುವೆ ಆಗುವುದಾಗಿ ನಂಬಿಸಿದ್ದ ಪ್ರಿಯಕರ, ದೈಹಿಕ ಸಂಬಂಧ ಬೆಳೆಸಿ, ಗರ್ಭಪಾತ ಮಾಡಿಸಿದ್ದು, ನಂತರ ಮದುವೆ ಆಗಲು ಹಿಂದೇಟು ಹಾಕಿದ್ದು ಇವೇ ಆತ್ಮಹತ್ಯೆಗೆ ಕಾರಣಗಳಂತೆ. ಚಂದನಾ ಸೆಲ್ಪಿ ವಿಡಿಯೋ ಮಾಡಿಟ್ಟು, ವಿಷಸೇವಿಸಿದ್ದಾಳೆ. ನಂತರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಇನ್ನೊಂದು ಘಟನೆಯಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅಗತ್ಯ ಸೌಲಭ್ಯಗಳಿಲ್ಲದ ಕಾರಣ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕೇರಳದ ವಾಲಂಚೇರಿ ಎಂಬಲ್ಲಿ ನಡೆದಿತ್ತು.
ಮುಖ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮಾನವ ಮನಸ್ಸು ಮಾಡಿದರೆ ಅದು ಅವನ ದುಡುಕುತನವೇ ಆಗಿದೆ. ಹೀಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿದಾಗ ಆತ/ಆಕೆ ಕೇವಲ ೩೦ ನಿಮಿಷದಿಂದ ಒಂದು ಘಂಟೆ ಅವಧಿ ಸರಿಯಾಗಿ ಯೋಚಿಸಿದರೆ ಎಷ್ಟೋ ವರ್ಷಗಳ ಆತ/ಆಕೆಯ ಬದುಕು ಬಚಾವ್ ಆಗುತ್ತದೆ. ಅಂದಲ್ಲಿ ಮಾತ್ರ ಆತ್ಮಹತ್ಯೆಯಂತಹ ಘಟನೆಗಳು ನಡೆಯುವುದಿಲ್ಲವೇನೊ? ಕೆಲವರಿಗೆ ಮಾನಸಿಕ ಖಿನ್ನತೆಯೂ ಆತ್ಮಹತ್ಯೆಗೆ ಕಾರಣವಾಗಬಹುದು. ಅಸಹಾಯಕತೆಯೂ ಕಾರಣವಾಗಬಹುದು. ಹೀಗೆ ದುಡುಕಿ ಸಾಯುವವರು ಸಾಯುತ್ತಾರೆ. ಹೋಗಲಿ ಕೊನೆಯ ಬಾರಿ ತಮ್ಮ ಆಪ್ತ ಗೆಳೆಯ/ಗೆಳತಿಯರೊಡನೆ ತಮಗಾದ ದುಃಖ ತೋಡಿಕೊಂಡರೂ ಮನಸ್ಸು ಹಗುರವಾಗುತ್ತದೆಯಲ್ಲವೆ? ಆದರೆ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವವರು ಕುಟುಂಬಕ್ಕೆ ಅಪಾರ ನೋವು-ದುಃಖವನ್ನು ಕೊಡುಗೆಯಾಗಿ ನೀಡಿಯೇ ಹೋಗಿರುತ್ತಾರೆ. ಒಂದಷ್ಟು ವರ್ಷಗಳ ಹಿಂದೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಸದ್ದು ಮಾಡಿದ್ದ ರೈತರ ಆತ್ಮಹತ್ಯೆ ಪ್ರಕರಣ ವ್ಯಾಪಕವಾಗಿ ನಡೆದಿತ್ತು. ಆ ರೈತ ತಾನು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ. ಆದರೆ ಅದರ ಪ್ರತಿಫಲ ಉಣ್ಣುವವರು ಅವನ ಕುಟುಂಬದವರಾಗಿರುತ್ತಿದ್ದರು. ನಂತರ ಅವನನ್ನು ಅವಲಂಬಿಸಿದವರ ಅವನ ಮನೆಯವರ ಜೀವನ ನರಕಯಾತನೆ.
ನಮಗೆ ನಮ್ಮ ದೇಹಕ್ಕೆ ಮನೆಯಲ್ಲಿ ಏನಾದರೂ ಕೆಲಸ ಮಾಡುವಾಗ, ಕ್ಷೌರ ಮಾಡುವಾಗ ಮುಖಕ್ಕೆ ಬ್ಲೇಡ್‌ನಿಂದ ಸ್ವಲ್ಪ ಗಾಯವಾಗಿ ರಕ್ತ ಹೋದರೂ ಒಂದಷ್ಟು ಸಮಯ ಮನಸ್ಸಿಗೆ ಹೇಗೆ ಬೇಸರವಾಗುತ್ತದೆ ಅಲ್ಲವೆ? ಇನ್ನು ರಸ್ತೆಯಲ್ಲಿ ಚಿಕ್ಕ-ಪುಟ್ಟ ಅಪಘಾತವಾಗಿ ನಾವು ರಸ್ತೆಯಲ್ಲಿ ಬಿದ್ದು ಗಾಯ ಮಾಡಿಕೊಂಡಾಗ ನಾವೆಷ್ಟು ನೊಂದುಕೊಳ್ಳುತ್ತೇವೆ. ನಮಗೆ ಮನಸ್ಸು ಮೊದಲಿನಂತಾಗಲು ತಿಂಗಳುಗಟ್ಟಲೇ ಬೇಕು ಅಲ್ಲವೆ? ಆದರೆ ಕೆಲವರು ಆತ್ಮಹತ್ಯೆ ಹೆಸರಿನಲ್ಲಿ ತಮ್ಮ ಜೀವನವನ್ನೇ ಕೊನೆಗೊಳಿಸಿಕೊಳ್ಳುತ್ತಾರೆ ಎಂದರೆ? ನಮ್ಮನ್ನು ಹುಟ್ಟಿಸಿದ ಪರಮಾತ್ಮ ಎಲ್ಲಿಯವರೆಗೂ ನಮಗೆ ಬದುಕಲು ಅಮೂಲ್ಯ ಅವಕಾಶ ನೀಡುತ್ತಾನೋ ಅಲ್ಲಿಯವರೆಗೆ ನಿಮಿಷ ನಿಮಿಷವೂ ದೇವರು ಕೊಟ್ಟ ವರ ಈ ನನ್ನ ಜೀವನ ಎಂದುಕೊಂಡು ಬದುಕು ಸಾಗಿಸುವ ಹಂಬಲವಿರಬೇಕು. ಭೂತಕಾಲದ ಬಗ್ಗೆ ಯೋಚಿಸಿ ಸಮಯ ವ್ಯರ್ಥಮಾಡಿಕೊಳ್ಳದೆ ವರ್ತಮಾನದ ಬಗ್ಗೆ ಹೆಚ್ಚಾಗಿ ಯೋಚಿಸಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಬೇಕು. ಅಂತೆಯೇ ಭವಿಷ್ಯದ ಕಾಲದ ಬಗ್ಗೆ ದಿನ್ನಕೊಂದು ಅರ್ಧ ಘಂಟೆ ಚಿಂತಿಸಿದರೆ ಸಾಕು.
ಹಾಂ. ಕೆಲವರು ನಿಂದಿಸುತ್ತಾರೆ. ನಿನ್ನ ಜೀವನವೇ ನಿಷ್ಪ್ರಯೋಜಕ ಎಂದು ಜರಿಯುತ್ತಾರೆ. ಉದಾ: ವಿದ್ಯಾರ್ಥಿ/ನಿ ಜೀವನದಲ್ಲಿ ಸರಿಯಾಗಿ ಓದು ಎಂದು ಬಯ್ಯುತ್ತಾರೆ. ಶಾಲೆ-ಹೈಸ್ಕೂಲ್-ಕಾಲೇಜಿನಲ್ಲಿ ಶಿಕ್ಷಕರು ಹುಡುಗಿಯರ/ಹುಡುಗರ ಎದುರಿಗೆ ನಮಗೆ ಕ್ಲಾಸಿನ ಬೆಂಚಿನ ಮೇಲೆ ನಿಲ್ಲಿಸಲೂಬಹುದು. ಅಥವಾ ಕೆಟ್ಟ ಮುಖ ಮಾಡಿಕೊಂಡು ನಿಂದಿಸಲೂ ಬಹುದು. ಆಗ ನಮಗೆ ಅಲ್ಲಿ ಕ್ಲಾಸಿನ ಎಲ್ಲ ಹುಡುಗ/ಹುಡುಗಿಯರ ಮುಂದೆ ಮುಖಭಂಗವಾದಂತಾಗುತ್ತದೆ ನಿಜ. ಇವೆಲ್ಲ ಜೀವನದಲ್ಲಿ ಬರುವ ಸ್ವಲ್ಪ ವರ್ಷಗಳಷ್ಟೆ. ನಂತರ ಮದುವೆಯಾದ ಮೇಲೆ ಹೆಂಡತಿ/ಗಂಡ/ಮಕ್ಕಳು ಜಗಳವಾಡುವುದೂ ಇವೆಲ್ಲ ನಡೆದೇ ಇರುತ್ತವೆ. ಇವೆಲ್ಲ ಜೀವನದಲ್ಲಿ ಬರುವ ಕಾಲಗಳಿದ್ದಂತೆ. ಹೇಗೆ ಛಳಿಗಾಲ, ಮಳೆಗಾಲ, ಬೇಸಿಗೆಗಾಲ ಬಂದಾಗ ವಾತಾವರಣ ಬದಲಾಗುತ್ತದೆಯೋ ಹಾಗೆ. ಕೆಲವರಂತೂ ಬೇಕೆಂತಲೇ ನಮ್ಮ ಧೈರ್ಯ ಕುಗ್ಗಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ. ಅಂಥವರಿಗೆ ಕೇವಲ ನಮ್ಮ ಉತ್ತಮ ಪರೀಕ್ಷಾ ಫಲಿತಾಂಶ ಮತ್ತು ಜೀವನದ ನಂತರದ ಘಟ್ಟದಲ್ಲಿಯಾದರೆ ನಮ್ಮ ಸಾಧನೆಯಿಂದ ಉತ್ತರಿಸಬೇಕು. ಅಯ್ಯೊ ಅಂದು ನಾನು ಹಾಗೆ ಆತ/ಆಕೆಯನ್ನು ನಿಂದಿಸಲಿಲ್ಲವೆಂದರೆ ಆತ/ಆಕೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲವೇನೋ ಎಂದು ಆ ವೈರಿ ತನ್ನೊಳಗೇ ಉರಿದು ಬೀಳಬೇಕು.
ಮೊನ್ನೆ ಹಾಗೆ ಆಯಿತು. ಮೊದಲು ವಿದ್ಯುತ್ ಬಿಲ್ ಹೆಚ್ಚು ಬಂತೆಂದು ನಮ್ಮ ಮನೆಯ ಹತ್ತಿರ ವಿದ್ದ ಕಚೇರಿಗೆ ಹೋಗಿ ನೋಡಿ ವಿದ್ಯುತ್ ಬಿಲ್ ಇಷ್ಟೇಕೆ ಬಂದಿದೆ ಎಂದು ಅಲ್ಲಿ ಸಂಬಂಧಪಟ್ಟವರನ್ನು ಕೇಳಿದೆ. ಅದಕ್ಕೆ ಆ ಅಧಿಕಾರಿ ಇದು ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ, ವಿದ್ಯಾಗಿರಿಗೆ ತೆರಳಿ ಎಂದರು. ಸರಿ ಅಲ್ಲಿ ತೆರಳಿದಾಗ ಇಲ್ಲಿ ನಿಮ್ಮ ವಿದ್ಯುತ್ ಬಿಲ್ ಸಂಖ್ಯೆ ನೋಡಲು ಆಗುವುದಿಲ್ಲ. ವಿಜಯಾ ಟಾಕೀಸ್ ಬಳಿ ಕಚೇರಿಗೆ ತೆರಳಿ ಎಂದರು. ಅಲ್ಲಿ ಹೋದಾಗ ಬೆಳಿಗ್ಗೆಯಿಂದ ಸರ್ವರ್ ಇಲ್ರಿ ಎಂಬ ಉತ್ತರ. ಕೊನೆಗೂ ಅಂದು ಆ ವಿದ್ಯುತ್ ಬಿಲ್ ಕೆಲಸ ಹಾಗೆಯೇ ಉಳಿಯಿತು. ಮರುದಿನ ಅಂತು ವಿದ್ಯುತ್ ಬಿಲ್‌ನಲ್ಲಿ ೨೦೦ ರೂ. ಗಳಿಗೂ ಅಧಿಕವಾಗಿ ಪಾವತಿ ಹಾಕಿದ್ದು ತಿಳಿಯಿತು. ಈ ಸಲ ಎಲ್ಲ ಕಡೆಯಲ್ಲೂ ವಿದ್ಯುತ್ ಬಿಲ್ ಹೆಚ್ಚಿಗೆ ಬಂದಿದೆ ಎಂದೇ ಬಹಳ ಜನರ ಗೋಳಾಗಿದೆ. ಅಂದರೆ ತುಂಬಿದರೆ ತುಂಬಿ ಬಿಡಲಿ ಎನ್ನುವುದು ಸರ್ಕಾರದ ಇರಾದೆಯಾಗಿತ್ತೇ ಹೇಗೆ ಎಂದು ಅನುಮಾನ ಮೂಡುತ್ತದೆ. ಏಕೆ ಈ ಘಟನೆಯನ್ನು ಹೇಳಬೇಕಾಯಿತೆಂದರೆ ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಬಹಳ ತಾಳ್ಮೆ ಬೇಕು. ರೇಶನ್ ಕಾರ್ಡ್ ಅರ್ಜಿ ಹಾಕಿ ಬರೋಬ್ಬರಿ ಒಂದು ವರುಷವಾಯಿತು. ಮನೆಯಲ್ಲಿ ರೇಷನ್ ಕಾರ್ಡ್ ಮಾಡಿಸಿಲ್ಲ ಎಂದು ಮನೆಯವರು ಪದೆ ಪದೆ ನೆನೆಪಿಸುವುದು ನಡೆದೇ ಇದೆ. ಅಂದರೆ ಇಂತಹ ಚಿಕ್ಕ ಚಿಕ್ಕ ವಿಷಯಗಳೇ ಮನುಷ್ಯನಿಗೆ ಹತಾಶೆಗೊಳ್ಳಲು ಕಾರಣವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿನಲ್ಲಿಯೇ ಒಬ್ಬ ಗೆಳೆಯನನ್ನು ತಯಾರು ಮಾಡಿಟ್ಟುಕೊಳ್ಳಬೇಕು. ಎಂತಹ ಉದ್ವೇಗ ಪರಿಸ್ಥಿತಿ ಬಂದರೂ ಮನಸ್ಸು ಶಾಂತಗೊಳಿಸಲು ಇವನು ಸಹಾಯ ಮಾಡುತ್ತಾನೆ. ನಂತರ ಮನಸ್ಸಿಗೆ ನೋವು ಕೊಡುವಂತಹ ಚಿಕ್ಕ ಚಿಕ್ಕ ಘಟನೆಗಳನ್ನು ಮರೆಯಲು ಟೇಕ್ ಇಟ್ ಈಸಿ ಪಾಲಿಸಿ ಅನುಸರಿಸಬೇಕು. ಇಗ್ನೋರ್ ಇಟ್ ಎಂದರೂ ಅಡ್ಡಿಯಿಲ್ಲ. ಕೆಲವರಿಗೆ ಗೆಳೆಯ/ಗೆಳತಿ ಹೆಚ್ಚಾಗಿ ಇರುವುದಿಲ್ಲ. ಇದ್ದರೂ ಕೆಲವರು ಯಾರೊಂದಿಗೂ ತಮ್ಮ ನೋವನ್ನು ಹೇಳಿಕೊಳ್ಳುವುದಿಲ್ಲ. ಅಂತವರು ತಮ್ಮ ಮನಸ್ಸಿನಲ್ಲೆ ತಯಾರು ಮಾಡಿಕೊಂಡ ಗೆಳೆಯನೊಡನೆ ತಮ್ಮ ದುಃಖವನ್ನು ಹೇಳಿಕೊಂಡು ಸಮಾದಾನ ಪಟ್ಟುಕೊಳ್ಳಬಹುದಲ್ಲವೆ? ಇಂತಹ ಸುಲಭ ದಾರಿ ಹುಡುಕಿಕೊಳ್ಳುವುದನ್ನು ಬಿಟ್ಟು ಇಂದಿನ ಅದರಲ್ಲೂ ವಿಶೇಷವಾಗಿ ಯುವ ಜನತೆ ಆತ್ಮಹತ್ಯೆಯಂತಹ ದಾರಿ ತುಳಿಯುವುದು ಎಷ್ಟು ಸರಿ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button