Belagavi NewsBelgaum NewsKannada NewsKarnataka NewsLatest

*ಕೃಷ್ಣ ಭಕ್ತಿಯಲ್ಲಿ ಮಿಂದೆದ್ದ ಕುಂದಾನಗರಿ: ಅದ್ಧೂರಿ ಹರೇ ಕೃಷ್ಣ ಮಹೋತ್ಸವಕ್ಕೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: “ಹರೇ ಕೃಷ್ಣ ಹರೇ ಕೃಷ್ಣ | ಕೃಷ್ಣ ಕೃಷ್ಣ ಹರೇ ಹರೇ || ಹರೇ ರಾಮ್ ಹರೇ ರಾಮ್ | ರಾಮ್ ರಾಮ್ ಹರೇ ಹರೇ” ಎಂಬ ಹರಿನಾಮ ಸಂಕೀರ್ತನೆಯ ಜಯಘೋಷದೊಂದಿಗೆ ಇಸ್ಕಾನ್ ಹಮ್ಮಿಕೊಂಡಿದ್ದ ರಥಯಾತ್ರೆಯು ಶನಿವಾರ ಇಡೀ ಬೆಳಗಾವಿ ನಗರವನ್ನು ಕೃಷ್ಣಮಯವಾಗಿಸಿತು. ಮಧ್ಯಾಹ್ನ ಸರಿಯಾಗಿ 1:31 ಗಂಟೆಗೆ ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಈ ರಥಯಾತ್ರೆಯು ಭಕ್ತರ ಪಾಲಿಗೆ ಸಂಭ್ರಮದ ಉತ್ಸವವಾಗಿ ಮೂಡಿಬಂತು.

ಅಂತರರಾಷ್ಟ್ರೀಯ ಕೃಷ್ಣಭಾವನಾಮೃತ ಸಂಘ (ಇಸ್ಕಾನ್) ವತಿಯಿಂದ ಪ್ರತಿವರ್ಷ ಬೆಳಗಾವಿಯಲ್ಲಿ ರಥಯಾತ್ರೆಯನ್ನು ಆಯೋಜಿಸಲಾಗುತ್ತಿದ್ದು, ಈ ಬಾರಿ ಇದು 28ನೇ ವರ್ಷದ ಸಂಭ್ರಮವಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ಸಾವಿರಾರು ಮಹಿಳಾ ಮತ್ತು ಪುರುಷ ಭಕ್ತರು ಸಂಭಾಜಿ ವೃತ್ತದಲ್ಲಿ ಜಮಾಯಿಸಿದ ನಂತರ, ಇಸ್ಕಾನ್ ಬೆಳಗಾವಿಯ ಅಧ್ಯಕ್ಷರಾದ ಪರಮ ಪೂಜ್ಯ ಭಕ್ತಿರಸಾಮೃತ ಸ್ವಾಮಿ ಮಹಾರಾಜ್, ಸುಂದರ ಚೈತನ್ಯ ಮಹಾರಾಜ್ ಹಾಗೂ ವೃಂದಾವನದ ಬ್ರಜೇಶ್ ಚಂದ್ರ ಗೋಸ್ವಾಮಿ ಪ್ರಭು ಅವರು ಆಶೀರ್ವಚನ ನೀಡಿದರು.

ಪುಷ್ಪಾಲಂಕೃತ ರಥದಲ್ಲಿ ರಾಧಾ ಕೃಷ್ಣ, ನಿತ್ಯಾನಂದ ಮಹಾಪ್ರಭು ಮತ್ತು ಗೌರಾಂಗ ಮಹಾಪ್ರಭುಗಳ ಸುಂದರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ರಥದ ಪೂಜೆ ಮತ್ತು ಆರತಿಯ ನಂತರ ಸಂಸದರಾದ ಈರಣ್ಣ ಕಡಾಡಿ ಅವರು ಶ್ರೀಫಲ ಸಮರ್ಪಿಸಿ ರಥಯಾತ್ರೆಗೆ ಅಧಿಕೃತ ಚಾಲನೆ ನೀಡಿದರು. ರಥದ ಮುಂಭಾಗದ ಎರಡು ಬದಿಗಳಲ್ಲಿ ಹಗ್ಗಗಳನ್ನು ಕಟ್ಟಲಾಗಿದ್ದು, ಎಡಭಾಗದಲ್ಲಿ ಪುರುಷರು ಮತ್ತು ಬಲಭಾಗದಲ್ಲಿ ಮಹಿಳೆಯರು ಭಕ್ತಿಯಿಂದ ರಥವನ್ನು ಎಳೆದರು.

Home add -Advt

ಭಗವಂತನ ಭಕ್ತಿಯಲ್ಲಿ ಮಿಂದೆದ್ದ ಅಬಾಲವೃದ್ಧರಾದಿಯಾಗಿ ಎಲ್ಲರೂ ಹರೇ ಕೃಷ್ಣ ಮಹಾಮಂತ್ರವನ್ನು ಹಾಡುತ್ತಾ ಸಾಗಿದರು. ಭಕ್ತರ ಮೇಲೆ  ಸುಗಂಧ ದ್ರವ್ಯಗಳನ್ನು ಸಿಂಪಡಿಸಲಾಯಿತು. ರಥಯಾತ್ರೆಯ ಮುಂಚೂಣಿಯಲ್ಲಿ ಮಂಜೀರಿ ಬೆನಕೆ ಅವರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಯುವತಿಯರ ತಂಡವು ಆಕರ್ಷಕ ರಂಗೋಲಿಗಳನ್ನು ಬಿಡಿಸುತ್ತಾ ಸಾಗಿದವು. ಇವುಗಳ ಬೆನ್ನಲ್ಲೇ ಸುಮಾರು 20ಕ್ಕೂ ಹೆಚ್ಚು ಅಲಂಕೃತ ಎತ್ತಿನ ಗಾಡಿಗಳು ಸಾಗಿದವು. ಮತ್ತೊಂದು ವಿಶೇಷ ಅಲಂಕೃತ ರಥದಲ್ಲಿ ಇಸ್ಕಾನ್ ಸಂಸ್ಥಾಪಕ ಆಚಾರ್ಯರಾದ ಶ್ರೀ ಪ್ರಭುಪಾದರ ಪ್ರತಿಮೆಯನ್ನು ಇರಿಸಲಾಗಿತ್ತು. ಭಗವಾನ್ ಶ್ರೀಕೃಷ್ಣನ ಜೀವನ ಚರಿತ್ರೆಯನ್ನಾಧರಿಸಿದ ಭೀಷ್ಮರ ಶರಶಯ್ಯೆ, ನರಸಿಂಹ ದೇವ, ಕಾಲಿಯ ಮರ್ದನ, ಜಾರ್ಖಂಡ್ ಲೀಲೆ ಮುಂತಾದ ದೃಶ್ಯಗಳು ಜನಮನ ಸೆಳೆದವು.

ಪರಮ ಪೂಜ್ಯ ಭಕ್ತಿರಸಾಮೃತ ಸ್ವಾಮಿ ಮಹಾರಾಜರು ಮತ್ತು ಅನೇಕ ಹಿರಿಯ ಭಕ್ತರು ರಥಯಾತ್ರೆಯುದ್ದಕ್ಕೂ ಮಾರ್ಗದರ್ಶನ ನೀಡಿದರು. ತಾಳಕ್ಕೆ ತಕ್ಕಂತೆ ನೃತ್ಯ ಮಾಡುವ ಯುವತಿಯರು, ಭಜನೆ-ಕೀರ್ತನೆಯಲ್ಲಿ ಮಗ್ನರಾದ ಯುವಕರು ಮತ್ತು ವಿವಿಧ ವೇಷಭೂಷಣ ತೊಟ್ಟ ಮಕ್ಕಳು ಯಾತ್ರೆಯ ಶೋಭೆಯನ್ನು ಹೆಚ್ಚಿಸಿದರು. ಹಂದಿಗನೂರಿನ ಜ್ಞಾನೇಶ್ವರ ಭಜನಾ ಮಂಡಳಿಯ ಎರಡು ತಂಡಗಳು ಭಜನೆಗಳನ್ನು ಪ್ರಸ್ತುತಪಡಿಸಿದವು. ಯಾತ್ರೆಯ ಮಾರ್ಗದುದ್ದಕ್ಕೂ ನಾಗರಿಕರು ಪುಷ್ಪವೃಷ್ಟಿ ಮಾಡಿದ್ದಲ್ಲದೆ, ಭಕ್ತರಿಗೆ ನೀರು, ಶರಬತ್ತು ಮತ್ತು ಹಣ್ಣು-ಹಂಪಲುಗಳನ್ನು ವಿತರಿಸಿದರು. ಇಸ್ಕಾನ್ ವತಿಯಿಂದ ಸುಮಾರು 50,000ಕ್ಕೂ ಹೆಚ್ಚು ಪ್ರಸಾದದ ಪೊಟ್ಟಣಗಳನ್ನು ಹಂಚಲಾಯಿತು.

ಸಾಗಿದ ಹಾದಿ: ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಯಾತ್ರೆಯು ಸಮಾದೇವಿ ಮಂದಿರ, ಖಡೇ ಬಜಾರ್, ಗಣಪತ್ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗ ಖಿಂಡ್, ಟಿಳಕ್ ಚೌಕ್, ಶನಿ ಮಂದಿರದ ಮಾರ್ಗವಾಗಿ ಕಪಿಲೇಶ್ವರ ರೈಲ್ವೆ ಓವರ್ ಬ್ರಿಜ್ ಮೂಲಕ ಶಹಾಪುರ ತಲುಪಿತು. ಅಲ್ಲಿಂದ ನಾಥ ಪೈ ಸರ್ಕಲ್, ಕೆ.ಎಲ್.ಇ ಆಯುರ್ವೇದ ಕಾಲೇಜ್, ಕೃಷಿ ಭವನ ಮತ್ತು ಬಸವೇಶ್ವರ ವೃತ್ತದ ಮೂಲಕ ಸಾಗಿ ಸಂಜೆ 6:30ಕ್ಕೆ ಇಸ್ಕಾನ್ ಶ್ರೀ ಶ್ರೀ ರಾಧಾ ಗೋಕುಲಾನಂದ ಮಂದಿರದ ಹಿಂಭಾಗದಲ್ಲಿ ನಿರ್ಮಿಸಲಾದ ಬೃಹತ್ ಶಾಮಿಯಾನವನ್ನು ತಲುಪಿತು.

ದೇವಸ್ಥಾನದ ಆವರಣದಲ್ಲಿ ಭಗವದ್ಗೀತೆ ಪ್ರದರ್ಶನ, ಸ್ಲೈಡ್ ಶೋ, ಮೆಡಿಟೇಶನ್ ಪಾರ್ಕ್, ಗೋಸೇವಾ ಸ್ಟಾಲ್‌ಗಳು, ಆಧ್ಯಾತ್ಮಿಕ ಪುಸ್ತಕ ಪ್ರದರ್ಶನ ಮತ್ತು ಯುವಜನತೆಗೆ ಮಾರ್ಗದರ್ಶನ ನೀಡುವ ಸ್ಟಾಲ್‌ಗಳನ್ನು ಹಾಕಲಾಗಿದೆ. ಶನಿವಾರ ರಾತ್ರಿ ಹಿರಿಯ ಸನ್ಯಾಸಿಗಳಿಂದ ಪ್ರವಚನ ಹಾಗೂ ಪ್ರಸಾದ ವಿನಿಯೋಗ ಜರುಗಿತು. ಯಾತ್ರೆಯ ಯಶಸ್ವಿಗಾಗಿ ಸಂಕರ್ಷಣ ಪ್ರಭು, ಮಾಧವಚರಣ ಪ್ರಭು, ನಂದನಂದನ ಪ್ರಭು, ಸಂಜೀವಿನಿ ಕೃಪಾ ಪ್ರಭು, ನಾಗೇಂದ್ರ ಪ್ರಭು, ಪ್ರೇಮ ರಸ ಪ್ರಭು, ರಾಜಾರಾಂ ಭಾಂದುರ್ಗೆ ಸೇರಿದಂತೆ ಅನೇಕ ಕಾರ್ಯಕರ್ತರು ಶ್ರಮಿಸಿದರು.

ರವಿವಾರದ ಕಾರ್ಯಕ್ರಮಗಳು: ರವಿವಾರ ಸಾಯಂಕಾಲ 4 ರಿಂದ 5 ಗಂಟೆಯವರೆಗೆ ಲೋಕ ಕಲ್ಯಾಣಕ್ಕಾಗಿ ‘ನರಸಿಂಹ ಯಜ್ಞ’ ನಡೆಯಲಿದೆ. ಸಾಯಂಕಾಲ 6:30 ರಿಂದ ರಾತ್ರಿ 10 ರವರೆಗೆ ಭಜನೆ, ಕೀರ್ತನೆ, ಪ್ರವಚನ ಮತ್ತು ನಾಟ್ಯ ಲೀಲೆಗಳು ನಡೆಯಲಿದ್ದು, ನಂತರ ಮಹಾಪ್ರಸಾದ ಇರಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಇಸ್ಕಾನ್ ಪ್ರಕಟಣೆಯಲ್ಲಿ ಕೋರಿದೆ.

ವಾಹನ ನಿಲುಗಡೆ: ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗದಂತೆ, ಭಕ್ತಾದಿಗಳು ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಮಂದಿರದ ಹೊರಗಿನ ಮುಖ್ಯ ರಸ್ತೆಯಲ್ಲಿ ನಿಲ್ಲಿಸುವಂತೆ ವಿನಂತಿಸಲಾಗಿದೆ.

Related Articles

Back to top button