*ಅಮ್ಮಿನಬಾವಿಯಲ್ಲಿ ಶ್ರಾವಣ ಮಾಸದ ನಿಮಿತ್ತ ಲೋಕಕಲ್ಯಾಣ ಸಂಕಲ್ಪದೊಂದಿಗೆ ಅಭಿನವ ಶಾಂತಲಿಂಗ ಶ್ರೀಗಳ ಇಷ್ಟಲಿಂಗ ಮಹಾಪೂಜೆ*

ಪ್ರಗತಿವಾಹಿನಿ ಸುದ್ದಿ: ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಐತಿಹಾಸಿಕ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಲೋಕಕಲ್ಯಾಣ ಮತ್ತು ವಿಶ್ವಶಾಂತಿ ಸಂಕಲ್ಪದೊಂದಿಗೆ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಸೋಮವಾರ (ಆಗಷ್ಟ-5 ರಂದು) ಆರಂಭಗೊಳ್ಳಲಿದ್ದು, ಸಪ್ಟಂ.1 ರವರೆಗೆ ಜರುಗಲಿದೆ. ನಿತ್ಯ ಪ್ರಾತಃಕಾಲ 8 ಗಂಟೆಗೆ ಮಠದ ಪ್ರಾಂಗಣದಲ್ಲಿ ಆರಂಭಗೊಳ್ಳುವ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯಲ್ಲಿ ಭಕ್ತ ಸಮೂಹ ಪಾಲ್ಗೊಳ್ಳಬಹುದಾಗಿದೆ.
*ವಿಶೇಷ ಪೂಜೆ* : ಶ್ರೀಮಠದ ಕರ್ತೃ ಗದ್ದುಗೆಗೆ ಹಾಗೂ ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿಗೆ ಪ್ರಾತಃಕಾಲದಲ್ಲಿ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿಯ ವಿಶೇಷ ಪೂಜಾ ಕೈಂಕರ್ಯಗಳು ಸೋಮಲಿಂಗಶಾಸ್ತ್ರಿ ಗುಡ್ಡದಮಠ, ಶಿವಯೋಗಿ ಹಿರೇಮಠ, ವಿನಾಯಕ ಹಿರೇಮಠ, ಈರಯ್ಯ ಹಿರೇಮಠ ಅವರಿಂದ ನಡೆಯಲಿವೆ.
2022 ರಿಂದ ಆರಂಭಗೊಂಡಿರುವ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯು ಪ್ರಸ್ತುತ 3ನೆಯ ವರ್ಷದಲ್ಲಿ ಮುನ್ನಡೆದಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳೂ ಸೇರಿದಂತೆ ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ಹಾರೋಬೆಳವಡಿ ಸೇರಿದಂತೆ ಹತ್ತಿರದ ಗ್ರಾಮಗಳ ಭಕ್ತ ಸಮೂಹ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀಮಠದ ವ್ಯವಸ್ಥಾಪಕ ಶಿವಾನಂದಸ್ವಾಮಿ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ