Latest

ಮೂರನೇ ಜಾಗತಿಕ ಯುದ್ಧ ಸನ್ನಿಹಿತವೆಂಬುದೇ ಸುಳ್ಳು

ಪ್ರಗತಿವಾಹಿನಿ ವಿಶೇಷ:  ಜಾಗತಿಕ ಯುದ್ಧಗಳ ಪರಿಣಾಮ ತಿಳಿದ ಮೇಲೆ ಮತ್ತೊಮ್ಮೆ ಅದರ ಗೊಡವೆಯೇ ಬೇಡ ವೆಂದು ಸ್ಥಾಪಿಸಿದ ವಿಶ್ವ ಸಂಸ್ಥೆಯು, ಶಾಂತಿ ಸ್ಥಾಪನೆಗೆ ಮುಂದಾಗಿದ್ದೇನೋ ನಿಜ. ಆದರೆ ‘ಬರುಬರುತ್ತಾ ರಾಜನ ಕುದುರೆ ಕತ್ತೆಯಾಯ್ತು’ ಎಂಬಂತೆ, ಅಮೆರಿಕದ ತಂತ್ರ ಬೇರೆ ರೀತಿ ಕಾಣಿಸುತ್ತದೆ. ಉಳಿದೆಲ್ಲ ದೇಶಗಳು ಸದಾ ತನ್ನಡಿಯಲ್ಲಿಯೇ ಇರಬೇಕೆಂದು ಪರೋಕ್ಷ ಮತ್ತು ಪ್ರತ್ಯಕ್ಷ ಸಂದೇಶ ಸಾರಿದ್ದೇ ಅದರ ಮಾತಿಗೆ ಮಹತ್ವ ಇಂದು ಕುಸಿದು ಹೋಗತೊಡಗಿದೆ.

ಸಿರಿವಂತಿಕೆಯ ಮುಸುಕಿನೊಳಗೆ ಬಡ ಮತ್ತು ಮಧ್ಯಮ ವರ್ಗದ ದೇಶಗಳಿಗೆ ಸಾಲ ಕೊಡುವ ಮೂಲಕ ತೆಕ್ಕೆಗೆ ತೆಗೆದುಕೊಂಡಿದ್ದು, ಅದರ ಮೇಲೆ ಹತೋಟಿ ಸಾಧಿಸಿದ್ದು ಗೊತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಸದಾ ಕಾವಲಿಡುವ ಮೂಲಕ ಅದನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಈ ದಬ್ಬಾಳಿಕೆಯ ನೀತಿಯಿಂದ ಬೇಸತ್ತ ಕೆಲ ರಾಷ್ಟ್ರಗಳು ಅದರ ವಿರುದ್ದವಾಗಿ ನೇರ ವಾಗ್ದಾಳಿಗಿಳಿದಿವೆ. ಅಂತಹವುಗಳಲ್ಲಿ ಉಲ್ಲೇಖಿಸಬೇಕಾದ ರಾಷ್ಟ್ರ ಉತ್ತರ ಕೊರಿಯಾ. ಕಿಮ್ ಜಾಂಗ್ ಉನ್ ಅತ್ಯಂತ ಕಿರಿಯ ವಯೋಮಾನದಲ್ಲಿ ಸರ್ವಾಧಿಕಾರಿ ಪಟ್ಟಕ್ಕೇರಿ, ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಡೋಸ್ ಕೊಟ್ಟ ಬಗೆ ನಿಮಗೆ ನೆನಪಿದೆಯೇ ? ಪುಡಿಗಾಸಿನ ಕಿಮ್ಮತ್ತನ್ನು ಕೊಡಲು ಒಪ್ಪಲಿಲ್ಲ. ಕೇವಲ 30 ರ ಆಸು ಪಾಸಿನಲ್ಲಿರುವ ಯುವಕ!

ಎರೆಡನೆಯ ವಿಶ್ವ ಯುದ್ದದ ಸಮಯದಲ್ಲಿ ಜಪಾನ್ ಮಾಡಿದ ಸಣ್ಣ ಎಡವಟ್ಟು, ಅಗಾಧ ಪ್ರಮಾಣದಲ್ಲಿ ಬೆಲೆ ತೆರುವಂತಾಯಿತು. ತನ್ನೆರೆಡು ಪ್ರಮುಖ ಬಂಡವಾಳ ನಗರಗಳು ಹಿರೋಷಿಮಾ, ನಾಗಾಸಾಕಿ ಗಳನ್ನು, ಫ್ಯಾಟ್ ಮ್ಯಾನ್ ಮತ್ತು ಲಿಲ್ಲಿ ಪುಟ್ ಎಂಬೆರೆಡು ಅಣ್ವಸ್ತ್ರಗಳು ನುಂಗಿ ಹಾಕಿದವು. ನಂತರ ಪ್ರಬಲ ರಾಷ್ಟ್ರವಾಗಿ ಪ್ರವರ್ಧಮಾನಕ್ಕೆ ಬಂದ ಅಮೆರಿಕಾದ ಅಣು ಶಕ್ತಿಗೆ ಇಡೀ ಜಗತ್ತೇ ತಲ್ಲಣಿಸಿತ್ತು. ಅದರ ಮುಂದೆ ನಿಲ್ಲಲಾಗದ ರಾಷ್ಟ್ರಗಳು, ಅದನ್ನು ಅಪ್ರತ್ಯಕ್ಷವಾಗಿ ನಾಯಕನೆಂದು ಒಪ್ಪಿಕೊಂಡಿದ್ದವು. ಅದರ ತೀರ್ಮಾನಗಳಿಗೆ ವಿರುದ್ಧವಾಗಿ ಹೋಗುವ ಇಚ್ಛೆಯನ್ನು, ಅದರ ಪ್ರತಿ ಸ್ಪರ್ಧಿ ರಾಷ್ಟ್ರಗಳು ಹೊರಗೆ ನೇರವಾಗಿ ವ್ಯಕ್ತಪಡಿಸಲೇ ಇಲ್ಲ. ಯಾವಾಗ 1991 ರಲ್ಲಿ ಯು ಎಸ್ ಎಸ್ ಆರ್ ಒಡೆದು 14 ರಾಷ್ಟ್ರಗಳಾಗಿ ಒಡೆದಾಗಿನಿಂದ ರಷ್ಯಾ ತೀವ್ರ ತರದಲ್ಲಿ ಮುನಿಸಿಕೊಂಡಿತು. ಶೀತಲ ಸಮರ ಮೊದಲಿಂದಲೂ ಇದ್ದದ್ದೇ, ಆದರೆ ನೇರಾನೇರ ಆವೇಶದ ಮಾತಿಗಿಳಿಯುತ್ತಿರಲಿಲ್ಲ. ಇಂದು ಅಮೆರಿಕಾ ಕ್ಕೆ ಪೂರ್ಣ ರೀತಿಯ ವಿರುದ್ಧವಾಗಿ ನಿಂತಿದೆ ರಷ್ಯಾ.

ಉಕ್ರೈನ್ ವಿಷಯದಲ್ಲಿ ಉಂಟಾದ ಗೊಂದಲಕ್ಕೆ ನೇರ ಕಾರಣ ಅಮೆರಿಕ ! ತನ್ನ ಸಾಮರ್ಥ್ಯಕ್ಕೆ ಪ್ರತಿ ಸವಾಲೊಡ್ಡುವ ದೇಶವನ್ನು ಹದ್ದು ಬಸ್ತಿನಲ್ಲಿಡಲು ಸದಾ ಯತ್ನಿಸಲು ಹೋಗಿ ಕೈ ಸುಟ್ಟುಕೊಂಡಿದೆ. ಪ್ರಬಲ ರಷ್ಯಾದ ವಿರುದ್ದ ಹೋರಾಡಲು ಉಕ್ರೈನ್ ಹೆಣಗಾಡುತ್ತಿದೆ. ಅಮೆರಿಕಾಕ್ಕೆ ಈಗ ಸಂಕಟ ಶುರುವಾಗಿದೆ. ಉಕ್ರೈನ್ ನ್ನು ಬೆಂಬಲಿಸಿದೆ. ಆ ಮೂಲಕ ರಷ್ಯಾದ ಕೆಂಗಣ್ಣಿಗೆ ಗುರಿಯಾಗಿದೆ. ಉಕ್ರೈನ್ ನಲ್ಲಿ ನ್ಯಾಟೋ ಸ್ಥಾಪನೆಯ ಪ್ರಸ್ತಾಪಕ್ಕೇ ಈ ಪರಿ ಪರಿಣಾಮ ಎದುರಿಸ ಬೇಕಾಯಿತು. ಪಕ್ಕದಲ್ಲೇ ಇರುವ ಪುಟ್ಟ ಶತ್ರುವಿಗೆ ಅಮೆರಿಕಾ ಕೊಡ ಮಾಡುವ ಶಕ್ತಿಯನ್ನು ಕಂಡು ಸುಮ್ಮನಿರಲಾದೀತೇ ?

ಅಮೆರಿಕಾ ಬೆಳೆದ, ಬೆಳೆಯುವ ರಾಷ್ಟ್ರಗಳಿಗೆ ಯಾವತ್ತೂ ಸದ್ದಿಲ್ಲದಂತೆ ಅದರ ಸೊಲ್ಲಡಗಿಸುವ ಹುನ್ನಾರದಲ್ಲಿರುತ್ತದೆ. ತನಗೆ, ತನ್ನ ಸ್ಥಾನಕ್ಕೆ ಕುಂದುಂಟಾಗಬಾರದು ಎಂದೇ ಕಪಟ ಸ್ನೇಹದ ನಾಟಕವಾಡುತ್ತದೆ. ಎಂದೂ ಕೂಡಾ ವಿಶ್ವ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುವ ಮನಸಿಲ್ಲ. ಬ್ರಿಟನ್, ಫ್ರಾನ್ಸ್ , ಚೀನಾ, ರಷ್ಯಾಗಳು ತನ್ನ ತೀರ್ಮಾನವನ್ನು ಸದಾ ಬೆಂಬಲಿಸುವಂತೆ ಕೋರುತ್ತದೆ ಇಲ್ಲವೇ ಒತ್ತಡ ಹೇರುತ್ತದೆ. ರಷ್ಯಾ ಮತ್ತು ಚೀನಾ ನೇರ ಅಭಿಪ್ರಾಯ ವ್ಯಕ್ತಪಡಿಸಿದರೆ, ಫ್ರಾನ್ಸ್ ಜಾಣ ನಡೆ ತೋರಿಸುತ್ತದೆ. ಬ್ರಿಟನ್ ಮತ್ತು ಅಮೆರಿಕಾದ ನಡುವಿನ ಬಾಂಧವ್ಯ ಬಿಗಿಯೇ. ಯುರೋಪ್ ಖಂಡ ಬ್ರಿಟನ್ ಮುಷ್ಟಿಯಲ್ಲಿ. ಉತ್ತರ ಅಮೇರಿಕ ,ದಕ್ಷಿಣ ಅಮೇರಿಕ, ಆಫ್ರಿಕಾ ತನ್ನ ಕೈಯಲ್ಲಿ. ಇನ್ನು ಆಸ್ಟ್ರೇಲಿಯಾದ ಮೇಲೆ ಯಾವುದೇ ಒತ್ತಡವಿಲ್ಲ. ಏನಿದ್ದರೂ ಏಷ್ಯಾದ ಮೇಲೆ ನಿಯಂತ್ರಣ ಸಾಧಿಸಲು ಹರ ಸಾಹಸ ನಡೆಸುತ್ತಲೇ ಬಂದಿದೆ.

ಏಷ್ಯಾದಲ್ಲಿ ಹೇರಳವಾದ ಸಂಪತ್ತು ಇದೆ. ಅದರಲ್ಲೂ ಭಾರತ ಜಗತ್ತಿನ ಪಾಲಿಗೆ ಸರ್ವ ವಸ್ತುಗಳ ತಿಜೋರಿಯಂತಿದೆ. ಪೆಟ್ರೋಲ್ ಮತ್ತು ಯುರೇನಿಯಂ ಇವೆರೆಡನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ಹಂಚುವಷ್ಟಿದೆ. ಹಾಗಾಗಿ ಭಾರತವನ್ನು ದ್ವೇಷಿಸುವ ರಾಷ್ಟ್ರಗಳನ್ನು ಹುಡುಕಿ, ಅವುಗಳನ್ನು ಎಲ್ಲದಕ್ಕಿಂತಲೂ, ಶಸ್ತ್ರಾಸ್ತ್ರಗಳನ್ನು ಪೂರೈಸಿ, ಮಿಲಿಟರಿ ಸಾಮರ್ಥ್ಯವನ್ನು ಬಲಗೊಳಿಸುತ್ತದೆ. ಅಲ್ಲಿಯ ಸಾಮಾಜಿಕ ಜೀವನದ ಉದ್ದಾರದ ಕಾಳಜಿಗಿಂತ ಯುದ್ದ ರಂಗದ ತಾಲೀಮಿಗೆ ಅಣಿಗೊಳಿಸುತ್ತದೆ. ಇದನ್ನು ಮೊದಲಿನಿಂದಲೂ ನೀವು ಗಮನಿಸಿದಲ್ಲಿ ಸತ್ಯ ಗೋಚರವಾಗುತ್ತದೆ. ಕಾಶ್ಮೀರದ ವಿಷಯದಲ್ಲಿ ಭಾರತದೊಂದಿಗೆ ಸದಾ ಕಿರಿಕ್ ಮಾಡಿಕೊಂಡು ಬಂದ ಪಾಕಿಸ್ತಾನವನ್ನು ಎತ್ತಿ ಕಟ್ಟುವ ಭರದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸಿದರೆ, ಆ ಮಹನೀಯರು ತಾಲಿಬಾನಿಗಳಿಗೆ ಕಳಿಸಬೇಕೆ !

ಅಫ್ಘಾನಿಸ್ಥಾನದಲ್ಲಿ ಮತಾಂಧತೆಯ ಕಪ್ಪು ಕರಾಳ ಅಧ್ಯಾಯ ಆರಂಭವಾಗಿ, ಬುದ್ದನ ಮೂರ್ತಿಗಳನ್ನು ಒಳಗೊಂಡಂತೆ ಸಾಂಸ್ಕೃತಿಕ ಸಂಪತ್ತನ್ನು ನಾಶ ಪಡಿಸುವುದೇ ತಾಲಿಬಾನಿಗಳ ಕಾಯಕವಾಯಿತು. ಕಡೆಗೆ ತಮ್ಮ ಬುಡಕ್ಕೇ ತಂದ ಲಾಡೆನ್ ಎಂಬ ವಿಧ್ವಂಸಕ, ವಿಶ್ವ ವಾಣಿಜ್ಯ ಸಂಘಟನೆಯ ಅವಳಿ ಗೋಪುರಗಳನ್ನು ನಾಶ ಪಡಿಸುವ ಮೂಲಕ ಅದನ್ನು ಕೆಣಕಿದ. ಅವನನ್ನೇನೋ ಹತ್ತು ವರ್ಷಗಳ ನಂತರ, ಪಾಕಿಸ್ತಾನದ ಅಬೋತಾಬಾದ್ ನಲ್ಲಿ ಮನೆ ಹೊಕ್ಕು ಹೊಡೆದರೆಂಬುದು ಸರಿ. ಸುಮ್ಮನಿರದೇ ಇರುವೆ ಬಿಟ್ಟು ಕೊಂಡವರಾರು ? ದಶಕಗಳ ಕಾಲ ತಮ್ಮ ಕಪಿ ಮುಷ್ಟಿಯಲ್ಲಿದ್ದುದ್ದನ್ನು ಇತ್ತೀಚೆಗೆ ಕೈ ಚೆಲ್ಲಿದರು. ಅಧ್ಯಕ್ಷ ಜೋ ಬೈಡನ್ ರ ಹಿಂದಿನ ಮೆದುಳು ಬರಾಕ್ ಒಬಾಮಾ ಎಂಬುದು ತಿಳಿದಿದೆ. ಅವರ ಎಂಟು ವರ್ಷಗಳ ಆಡಳಿತದಲ್ಲಿ ಉಪಾಧ್ಯಕ್ಷರಾಗಿ ದುಡಿದಿದ್ದಾರೆ. ತೆರೆ ಮರೆಯಿಂದಲೇ ಬರಾಕ್ ರ ಹಿಡಿತವಿದೆ.

ಇನ್ನು ಚೀನಾ ಮತ್ತು ಭಾರತದ ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ, ಟಿಬೆಟ್ ಗೆ ಬೆಂಬಲ ನೀಡಿ, ನಿರಾಶ್ರಿತರಿಗೆ ಆಸರೆ ಕೊಟ್ಟಿದ್ದು, ಸಹಿಸಲಾಗುತ್ತಿಲ್ಲ. ಸಾಮರಸ್ಯ ಅಷ್ಟಾಗಿ ಚೆನ್ನಾಗಿಲ್ಲ. ಯುದ್ಧವೂ ಸಂಭವಿಸಿದೆ. ಸೋಲನ್ನು ಒಪ್ಪಿಕೊಂಡಿತೋ, ಒಪ್ಪಿಸಿದರೋ ಬೇರೆ ಮಾತು. ಅದು ಆರು ದಶಕಗಳ ಹಿಂದಿನ ಮಾತು. ಆದರೆ ಈಗ ಮುಖಾಮುಖಿ ಯುದ್ದಕ್ಕಿಳಿಯುವ ಉತ್ಸಾಹ ಎರೆಡಕ್ಕೂ ಇಲ್ಲ. ಮಾತಿನ ಸಮರವಷ್ಟೇ ನಡೆದಿದೆ. ಅನಧಿಕೃತ ಪ್ರವೇಶದ ಫಲವಾಗಿ ಮಲ್ಲಯುದ್ದ ನಡೆದಿದೆ. ಆ ಕಡೆ ಈ ಕಡೆಗೂ ಇಬ್ಬರು ಮೂವರ ಹೆಣಗಳುರುಳಿವೆ. ಕೋವಿಗಳ ಸದ್ದು ಮೊಳಗಿಲ್ಲ. ಅಮೆರಿಕಾ ಇದನ್ನು ಕುತೂಹಲದಿಂದ ಕಾದು ನೋಡುತ್ತಿದೆ. ಅದು ಬಯಸುತ್ತಿರುವುದು ಇದನ್ನೇ. ಎರೆಡು ಬಲಿಷ್ಠ ರಾಷ್ಟ್ರಗಳು ಒಗ್ಗೂಡಿದರೆ ಇಡೀ ಏಷ್ಯಾವೇ ತನ್ನ ಅಧಿಪತ್ಯದಿಂದ ಜಾರಿ ಹೋಗುತ್ತದೆಂಬ ಅಳುಕು. ಈ ದೇಶಗಳು ಒಮ್ಮತದಿಂದ ಇರಬಾರದು ಎಂಬುದು ಅದರ ಉದ್ದೇಶವಾಗಿರಲೂ ಬಹುದು.

ಮುಂಚೆಯಿಂದಲೂ ರಷ್ಯಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಭಾರತ, ಈಗಲೂ ನಂಬಿಕಸ್ಥ ದೇಶವೇ ! ಇಲ್ಲೆಲ್ಲ ಅಮೆರಿಕಾಕ್ಕೆ ತಲೆನೋವೇ ! ರಷ್ಯಾ, ಫ್ರಾನ್ಸ್, ಚೀನಾ ಇವೆಲ್ಲವೂ ಸರಿ ಹೊಂದಾಣಿಕೆ ಮಾಡಿಕೊಂಡರೆ ಅದರ ಮಹತ್ವ ಕುಂದಿ ಹೋಗುತ್ತದೆ. ರಷ್ಯಾ ತನ್ನ ಸ್ಥಾನವನ್ನು ಆಕ್ರಮಿಸಿಕೊಂಡು ಬಿಡುವ ಭೀತಿಯೂ ಇದೆ.

ಇನ್ನು ಫ್ರಾನ್ಸ್ ನೊಂದಿಗಿನ ಯುದ್ಧ ವಿಮಾನ ಖರೀದಿ ಒಪ್ಪಂದ ದಶಕ ದಶಕಗಳಿಂದಲೂ ನಡೆಯುತ್ತಿದೆ. ಮಿಗ್ 21 , ರಫೆಲ್‌ ಇತ್ಯಾದಿ ಅತ್ಯಾಧುನಿಕ ಸುಸಜ್ಜಿತ ವಿಮಾನಗಳ ಖರೀದಿ, ಏಶಿಯಾದಲ್ಲಿ ಅಲ್ಲದೇ ಜಗತ್ತಿನಾದ್ಯಂತ ಹಲವು ರಾಷ್ಟ್ರಗಳನ್ನು ಚಿಂತೆಗೀಡು ಮಾಡಿವೆ. ದೊಡ್ಡ ಜನಸಂಖ್ಯೆ, ವೈಜ್ಞಾನಿಕ, ಶಿಕ್ಷಣ, ಕೈಗಾರಿಕಾ ರಂಗಗಳಲ್ಲಿ ಅಭೂತಪೂರ್ವ ಸಾಧನೆಗೈಯುತ್ತಿದೆ ಮಾತ್ರವಲ್ಲ, ಅಣ್ವಸ್ತ್ರಗಳ ತಯಾರಿಸುವಲ್ಲಿ ನಿರತವಾಗಿದೆ.

ವಿಶ್ವ ಸಂಸ್ಥೆಯ ಕಾಯಂ ಭದ್ರತಾ ಸಮಿತಿಯಲ್ಲಿ ಸೇರಿಕೊಳ್ಳುವ ಎಲ್ಲ ಅರ್ಹತೆಗಳಿದ್ದರೂ ಅಮೆರಿಕ ಆಸ್ಪದ ಕೊಡದೇ ಮುಂದೂಡುತ್ತಾ ಬಂದಿದೆ. ಹಲವು ಪ್ರಮುಖ ರಾಷ್ಟ್ರಗಳು ಈ ವಿಷಯದಲ್ಲಿ ಭಾರತವನ್ನು ಬೆಂಬಲಿಸಿವೆ. ಚೀನಾ ತೆರೆಮರೆಯಲ್ಲಿ ಭಾರತವನ್ನು ಮುನ್ನಲೆಗೆ ಬರದಂತೆ ನೋಡಿಕೊಳ್ಳುತ್ತಿದೆ ಎಂಬುದು ಜಗಜ್ಜಾಹೀರಾತಾಗಿದೆ.

ಭಾರತ ಇತ್ತೀಚೆಗೆ ಜಗತ್ತಿನ ಗಮನ ಸೆಳೆವ ಪ್ರಯತ್ನ ಮಾಡುತ್ತಿದೆ. ತನ್ಮೂಲಕ ನಾನಾ ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿದೆ. ಕೋವಿಡ್ ಸಂದರ್ಭದಲ್ಲಿ ಅಮೆರಿಕ ಸೇರಿದಂತೆ ಬ್ರೆಜಿಲ್‌, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮುಂತಾದವುಗಳಿಗೆ ಸಹಾಯ ಮಾಡಿದೆ. ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳದಂಥ ರಾಷ್ಟ್ರಗಳಿಗೆ ಆಪತ್ತಿನ, ತುರ್ತು ಸಂದರ್ಭಗಳಲ್ಲಿ ಧನ ಸಹಾಯ ಮಾಡುತ್ತಿದೆ.

ಏನಿದ್ದರೂ ಕೋವಿಡ್ ಮಾರಣಾಂತಿಕ ಕಾಯಿಲೆಯಿಂದ ತತ್ತರಿಸಿರುವಾಗ, ಯುದ್ಧದ ಪ್ರಮೇಯವೇ ಇಲ್ಲ. ಬದುಕಿದೆಯಾ ಬಡ ಜೀವವೇ ! ಎಂಬಂತಾಗಿದೆ ಎಲ್ಲ ದೇಶಗಳ ಸ್ಥಿತಿ ಗತಿ ! ಹೊಸ ಜೀವನ ಕಟ್ಟಿಕೊಳ್ಳವುದೇ ದುಸ್ತರವಾಗಿದೆ. ಯಾರೂ ಕೂಡಾ ಯುದ್ಧೋನ್ಮಾನದಲ್ಲಿಲ್ಲ. ಎರೆಡೂ ಕಡೆಯವರಿಗೆ ನಷ್ಟ ಎಂಬುದನ್ನು ಅರಿತುಕೊಂಡಾಗಿದೆ. ಮೂರನೇ ಜಾಗತಿಕ ಯುದ್ದ ಸನ್ನಿಹಿತವೆಂಬುದೇ ಸುಳ್ಳು. ಆಗಾಗ ಈ ರೀತಿಯ ಕಾರ್ಯಕ್ರಮಗಳನ್ನು ಬಿತ್ತರಿಸುವ ದೃಶ್ಯ ಮಾಧ್ಯಮಗಳು ಅಪಹಾಸ್ಯಕ್ಕೀಡಾಗುವುದು ಬೇಡ.

– ಲೇಖನ : ರವಿ ಕರಣಂ.                                       

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button