ಜನಜೀವನವಲ್ಲ, ಇದು ಜಲಜೀವನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಪ್ರವಾಹ ಪರಿಸ್ಥಿತಿ ಇಳಿಮುಖವಾಗಿದೆ. ನಗರ ಪ್ರದೇಶಗಳಲ್ಲಿ ನೀರು ಕಡಿಮೆಯಾಗಿದ್ದರಿಂದ ಜಲಜೀವನ ನಿಧಾನವಾಗಿ ಜನಜೀವನದತ್ತ ಸರಿಯುತ್ತಿದೆ.
ಮಹಾರಾಷ್ಟ್ರದಲ್ಲೂ ಮಳೆ ಕಡಿಮೆಯಾಗಿದ್ದರಿಂದ ಅಲ್ಲಿನ ಜಲಾಶಯಗಳ ಹೊರಹರಿವು ಕಡಿಮೆಯಾಗಿದೆ. ಕೃಷ್ಣಾ, ವೇದಗಂಗಾ, ದೂಧಗಂಗಾ ಮೊದಲಾದ ನದಿಗಳ ನೀರಿನ ಮಟ್ಟ ಅತ್ಯಂತ ನಿಧಾನವಾಗಿ ಇಳಿಯುತ್ತಿದೆ. ಆದರೂ ಸಹಜ ಸ್ಥಿತಿಗೆ ಬರಲು ಇನ್ನೂ ಕನಿಷ್ಟ 15 ದಿನ ಬೇಕು.
ಜಲಾಶಯಗಳ ಮಟ್ಟ
ಹಿಡಕಲ್ ಜಲಾಶಯದ ಹೊರಹರಿವು 38, 646 ಕ್ಯುಸೆಕ್ಸ್ ಇದ್ದು, ಒಳ ಹರಿವು 47,823 ಕ್ಯುಸೆಕ್ಸ್ ಇದೆ. ಜಲಾಶಯ ತುಂಬಲು ಕೇವಲ 2 ಅಡಿ ನೀರು ಬೇಕಾಗಿದೆ.
ಬದುಕನ್ನು ಕಟ್ಟಿಕೊಳ್ಳುವ ಶ್ರಮ
ಪ್ರವಾಹ ಇರುವಾಗಿನ ಕಷ್ಟ ಒಂದು ರೀತಿಯದ್ದಾದರೆ, ಪ್ರವಾಹ ಇಳಿದ ಮೇಲಿನ ಸಂಕಷ್ಟ ಇನ್ನೊಂದು ರೀತಿಯದ್ದು. ವಿಷಪ್ರಾಣಿಗಳ ಭೀತಿ, ಸಾಂಕ್ರಾಮಿಕ ರೋಗಗಳ ಭೀತಿ, ಮನೆಗಳು ಕುಸಿಯುವ ಭೀತಿ, ಕುಡಿಯುವ ನೀರಿನಲ್ಲಿ ಪ್ರವಾಹ ನೀರು ಮಿಶ್ರಣವಾಗಿರುವ ಆತಂಕ, ಕೊಚ್ಚಿಹೋಗಿರುವ ದಾಖಲೆಗಳನ್ನು ಮರು ಸಂಗ್ರಹಿಸುವ ಸಮಸ್ಯೆ, ತರಕಾರಿ, ಆಹಾರ ಸಾಮಗ್ರಿಗಳ ಬೆಲೆ ಏರುವ ಆತಂಕ… ಹೀಗೆ ನೂರಾರು ಸಮಸ್ಯೆಗಳನ್ನು ಇನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗಿದೆ.
ಕೊಚ್ಚಿಹೋಗಿರುವ ಊರನ್ನು ವ್ಯವಸ್ಥಿತವಾಗಿ ನಿರ್ಮಿಸುವ ಜವಾಬ್ದಾರಿಯನ್ನು ಸರಕಾರ, ಸಂಘ-ಸಂಸ್ಥೆಗಳು ಹೊರಬೇಕು. ಮುಂದಿನ ದಿನಗಳಲ್ಲಿ ಸಮಸ್ಯೆ ಕಡಿಮೆಯಾಗುವ ರೀತಿಯಲ್ಲಿ ಮುಂಜಾಗ್ರಾತೆ ತೆಗೆದುಕೊಳ್ಳಬೇಕು.
ಗಣ್ಯರ ದಂಡು
ಪ್ರವಾಹ ಪೀಡಿತ ಪ್ರದೇಶಗಳಿಗೆ ಗಣ್ಯರ ದಂಡು ಹರಿದು ಬರಲು ಆರಂಭಿಸಿದೆ. ರಾಜಕೀಯ ಪಕ್ಷಗಳ ನಾಯಕರು, ಸಾಮಾಜಿಕ ಕ್ಷೇತ್ರಗಳ ಗಣ್ಯರು ಆಗಮಿಸುತ್ತಿದ್ದಾರೆ. ಗಣ್ಯರ ಆಗಮನ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಯಾಗದಂತೆ ನಿಗಾವಹಿಸಬೇಕು. ಅಧಿಕಾರಿಗಳು ನಷ್ಟದ ಅಂದಾಜು ಸಿದ್ದಪಡಿಸಿ ಸರಕಾರಕ್ಕೆ ಆದಷ್ಟು ಶೀಘ್ರ ಸಲ್ಲಿಸುವ ಮೂಲಕ ಪರಿಹಾರ ಕಾರ್ಯಚರಣೆ ಚುರುಕುಗೊಳ್ಳುವಂತೆ ನೋಡಿಕೊಳ್ಳಬೇಕು.
ಇದರ ಜೊತೆಗೇ ಪರಿಹಾರ ಸಾಮಗ್ರಿಯೂ ಬರಬೇಕಿದೆ. ಜನರ ಅಗತ್ಯತೆಗಳನ್ನು ಗಮನಿಸಿ ಸಾಮಗ್ರಿಗಳನ್ನು ಸಂಗ್ರಹಿಸಬೇಕು. ಪ್ರವಾಹ ಪೀಡಿತ ಜನರಿಗೆ ಮುಖ್ಯವಾಗಿ ದಿನಬಳಕೆ ವಸ್ತುಗಳು ಬೇಕಾಗಿವೆ. ಬಟ್ಟೆ, ದಿನಸಿ ವಸ್ತುಗಳು, ಔಷಧಗಳು ಸರಬರಾಜಾಗಬೇಕು. ಕುಡಿಯಲು ಶುದ್ಧ ನೀರು ಪೂರೈಕೆಯಾಗಬೇಕು.
ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಇಂದು ಕೂಡ ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ಮುಂದುವರಿಸಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ ಇಂದು ಮಧ್ಯಾಹ್ನ 2.30ಕ್ಕೆ ಬೈಲಹೊಂಗಲಕ್ಕೆ ಹಾಗೂ ಸಂಜೆ 5.30ಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸುವರು. ಸಂಸದೆ ಶಓಭಾ ಕರಂದಾಚೆ ಇಂದು ಬೆಳಗಾವಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ